ಸಾರಾಂಶ
- ದಾನಿಹಳ್ಳಿಯಲ್ಲಿ ದೇಗುಲಗಳ ಕಳಸಾರೋಹಣ, ಧರ್ಮಸಭೆಯಲ್ಲಿ ತರಳಬಾಳು ಶ್ರೀ
- - -ಕನ್ನಡಪ್ರಭ ವಾರ್ತೆ ನ್ಯಾಮತಿ
ದೇವರ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಎಂಬುದು ತಪ್ಪು ಕಲ್ಪನೆ. ಭಕ್ತರಲ್ಲಿ ಭಕ್ತಿ ಪ್ರತಿಷ್ಠಾಪನೆ ಆದಾಗ ಮಾತ್ರ ಅದಕ್ಕೆ ನಿಜವಾದ ಅರ್ಥ ಬರುತ್ತದೆ. ಭಕ್ತರು ದೇಗುಲದ ಗರ್ಭಗುಡಿಯನ್ನು ಪವಿತ್ರ ತಾಣವಾಗಿ ಭಾವಿಸಿದಂತೆ ತನ್ನ ಮನಸ್ಸನ್ನು ಸಹ ಶುದ್ಧವಾಗಿ ಇಟ್ಟುಕೊಳ್ಳಬೇಕು ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನುಡಿದರು.ನ್ಯಾಮತಿ ತಾಲೂಕಿನ ದಾನಿಹಳ್ಳಿ ಗ್ರಾಮದಲ್ಲಿ ಶನಿವಾರ ಶ್ರೀ ಆಂಜನೇಯ ಸ್ವಾಮಿ, ಶ್ರೀ ದುರ್ಗಮ್ಮ ದೇವಿ, ಮಾತೆಂಗಮ್ಮ ದೇವಿ ದೇಗುಲಗಳ ಕಳಸಾರೋಹಣ ಅಂಗವಾಗಿ ಆಯೋಜಿಸಲಾಗಿದ್ದ ಧರ್ಮಸಭೆ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ದೇವರಿಗೆ ಪ್ರಾಣ ಪ್ರತಿಷ್ಠಾಪನೆ ಮಾಡುವುದು ಪರಂಪರೆಯಿಂದ ನಡೆದುಕೊಂಡು ಬಂದಿದೆ. ಆದರೆ ಅದು ಪ್ರಾಣ ಪ್ರತಿಷ್ಠಾಪನೆಯಲ್ಲ, ವಿಗ್ರಹದ ಮೇಲೆ ಭಕ್ತಿಯ ಪ್ರತಿಷ್ಠಾಪನೆ. ದೇವರು ನಮಗೆ ಪ್ರಾಣ ಕೊಟ್ಟಿದ್ದರೂ, ಪುನಃ ದೇವರಿಗೆ ಪ್ರಾಣ ಪ್ರತಿಷ್ಠಾಪನೆ ಮಾಡುತ್ತೇವೆ. ಈ ಹಿನ್ನೆಲೆಯಿಂದಲೇ ಕಲ್ಲಿಗೆ ದೇವರೆಂಬ ಸಂಸ್ಕಾರ ಬಂದಿದೆ ಎಂದು ಹೇಳಿದರು.ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಧರ್ಮವನ್ನು ರಕ್ಷಿಸದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಜೀವನದಲ್ಲಿ ಧರ್ಮ ಪಾಲನೆ ತುಂಬಾ ಮುಖ್ಯ. ನಮ್ಮ ಹೆಣ್ಣುಮಕ್ಕಳು ಆಚಾರ ವಿಚಾರ ತಿಳಿದು ಧರ್ಮವನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಮಠ, ದೇಗುಲಗಳು ಮನುಷ್ಯನಿಗೆ ಶಾಂತಿ, ನೆಮ್ಮದಿ ನೀಡುವ ಧಾರ್ಮಿಕ ಕೇಂದ್ರಗಳಾಗಿವೆ. ಮನಸ್ಸಿಗೆ ಶಾಂತಿ, ನೆಮ್ಮದಿ ನೀಡಲು ದೇಗುಲಗಳು ಅವಶ್ಯಕ ಎಂದು ಹೇಳಿದರು.ಕಾರ್ಯಕ್ರಮಕ್ಕೂ ಮುನ್ನ ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಆಯೋಜಿಸಿದ್ದ ಡಿ.ಜಿ. ಚನ್ನವೀರಪ್ಪ ಅವರ ಶಿವಗಣಾರಾಧನೆ ಮತ್ತು ಸರ್ವ ಶರಣರ ಸಮ್ಮೇಳದಲ್ಲಿ ಭಾಗವಹಿಸಿದ್ದ ಸಿರಿಗೆರೆ ತರಳಬಾಳು ಶ್ರೀಗಳನ್ನು ದೊಡ್ಡೇರಿ ಗ್ರಾಮದಿಂದ ಚೀಲೂರು, ಗಡೇಕಟ್ಟೆ, ಕುಂಕುವ, ದೊಡ್ಡೇತ್ತಿನಹಳ್ಳಿ ಮಾರ್ಗವಾಗಿ ನ್ಯಾಮತಿ ಹಾಗೂ ದಾನಿಹಳ್ಳಿ ಗ್ರಾಮದವರೆಗೆ ಬೈಕ್ ರ್ಯಾಲಿ ಮೂಲಕ ಸ್ವಾಗತಿಸಲಾಯಿತು.
ಎತ್ತಿನ ಮನೆ ವೀರಭದ್ರಪ್ಪ, ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ. ಧನಂಜಯ, ಸಾಹಿತಿ ಬಿದರಗಡ್ಡೆ ಸಂತೋಷ್ ಮಾತನಾಡಿದರು. ಅಧ್ಯಕ್ಷತೆಯನ್ನು ದೇಗುಲ ಸಮಿತಿ ಅಧ್ಯಕ್ಷ ಶಾಂತಪ್ಪ ಯರೇಕಟ್ಟೆ ವಹಿಸಿದ್ದರು.ವೇದಿಕೆಯಲ್ಲಿ ಸಾಧು ವೀರಶೈವ ಸಮಾಜದ ತಾಲೂಕು ಅಧ್ಯಕ್ಷರಾದ ನ್ಯಾಮತಿ ಕೋಡಿಕೊಪ್ಪ ಶಿವಪ್ಪ, ಹೊನ್ನಾಳಿ ಹುಣಸಗಟ್ಟ ಗದ್ದಿಗೇಶ್, ರಾಮೇಶ್ವರ ತೀರ್ಥಲಿಂಗಪ್ಪ ಮತ್ತಿತರರಿದ್ದರು.
- - -(-ಫೋಟೋ:)
-ಕಾರ್ಯಕ್ರಮದಲ್ಲಿ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತಾಡಿದರು.