ವಿಷ್ಣುಗುಪ್ತ ವಿಶ್ವವಿದ್ಯಾಲಯದ ಶಿವಗುರುಕುಲದ ವರ್ಧಂತಿ ಅಂಗವಾಗಿ ನಡೆದ ಸಾಮವೇದ ಸಂಹಿತಾಯಾಗ ಹಾಗೂ ಕೃಷ್ಣ ಋಗ್ವೇದ ಪಾರಾಯಣ ಸಂಪನ್ನಗೊಂಡ ಬಳಿಕ ನಡೆದ ಸಮಾರೋಪ ಸಭೆಯಲ್ಲಿ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ವಿಡಿಯೋ ಕಾನ್ಪರೆನ್ಸ್ ಮೂಲಕ ಆಶೀರ್ವಚನ ನೀಡಿದರು.
ಗೋಕರ್ಣ: ಭಾವ ಇದ್ದಾಗ ದೂರದ ಮಾತೂ ಕೇಳುತ್ತದೆ, ಅಭಾವವಾದಾಗ ಹತ್ತಿರದ ಮಾತು ಕೇಳದಾಗುತ್ತದೆ. ಸದ್ವಿಷಯಗಳಲ್ಲಿ ನಿಮ್ಮ ಭಾವವಿರಲಿ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು.
ವಿಷ್ಣುಗುಪ್ತ ವಿಶ್ವವಿದ್ಯಾಲಯದ ಶಿವಗುರುಕುಲದ ವರ್ಧಂತಿ ಅಂಗವಾಗಿ ನಡೆದ ಸಾಮವೇದ ಸಂಹಿತಾಯಾಗ ಹಾಗೂ ಕೃಷ್ಣ ಋಗ್ವೇದ ಪಾರಾಯಣ ಸಂಪನ್ನಗೊಂಡ ಬಳಿಕ ನಡೆದ ಸಮಾರೋಪ ಸಭೆಯಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಆಶೀರ್ವಚನ ನೀಡಿದರು.ವಿದ್ಯೆಯು ದುರುಪಯೋಗಿಗಳ ಕೈ ಸೇರದೆ, ಸತ್ಪಾತ್ರರ ಕೈಸೇರಬೇಕು. ಆತ್ಮ ವಿಕಾಸಕ್ಕೆ ವೇದ-ಶಾಸ್ತ್ರಗಳು ಪೂರಕ. ಸಮಾಜದಲ್ಲಿ ಹರಡಿದಷ್ಟು ಸಮಾಜದ ಉನ್ನತಿಯಾಗುತ್ತದೆ ಎಂದು ಹೇಳಿದರು.
ಸಿದ್ಧಾಪುರದ ಶಿರಳಗಿಯ ಶ್ರೀ ಬ್ರಹ್ಮಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಮಣ್ಣು, ನೀರಿನಲ್ಲಿ ಬರೆದಿದ್ದು ಅಲ್ಪ ಕಾಲದಲ್ಲಿ ಮಾಸುತ್ತದೆ. ಕಲ್ಲಿನಲ್ಲಿ ಬರೆದಿದ್ದು ಕಾಲಾಂತರದಲ್ಲಿ ನಶಿಸುತ್ತದೆ. ಹೃದಯದಲ್ಲಿ ಅಚ್ಚೊತ್ತಿದ್ದು ಶಾಶ್ವತವಾಗುತ್ತದೆ. ಹೃದಯದಲ್ಲಿ ಸ್ಥಾಯಿಯಾಗುವ ಸಾಧನೆ ಮಾಡಬೇಕು. ಅದಕ್ಕನುಕೂಲವಾದ ಶಿಕ್ಷಣ ವ್ಯವಸ್ಥೆಯನ್ನು ಶ್ರೀ ಸಂಸ್ಥಾನದವರು ಕಲ್ಪಿಸಿದ್ದಾರೆ, ನೀವು ಭಾಗ್ಯವಂತರು ಎಂದರು.ವಿವಿವಿ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ ಪೆರಿಯಪ್ಪು, ಗೌರವಾಧ್ಯಕ್ಷ ಡಿ.ಡಿ. ಶರ್ಮಾ, ಶ್ರೀಸಂಯೋಜಕ ಮಂಜುನಾಥ ಸುವರ್ಣಗದ್ದೆ, ವಿ. ನರಸಿಂಹ ಭಟ್ಟ, ಉಪಸ್ಥಿತರಿದ್ದು, ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು. ಶಿವಗುರುಕುಲದ ಪ್ರಾಚಾರ್ಯ ಮಂಜುನಾಥ ಭಟ್ಟ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಸಿಂಧು ಭಟ್ಟ ಪರೀಕ್ಷಾ ಪ್ರಗತಿಯ ವರದಿ ವಾಚಿಸಿದರು. ಸುಧನ್ವ ಶಾಸ್ತ್ರಿ ಕಾರ್ಯಕ್ರಮ ನಿರ್ವಹಿಸಿದರು. ವೇ.ಮೂ. ರಾಮದಾಸಿ ವಂದಿಸಿದರು.
ಈ ವೇಳೆ ಎಲ್ಲ ಗುರುಕುಲಗಳ ಪ್ರಾಚಾರ್ಯರು, ಆಚಾರ್ಯ ವೃಂದ, ವಿವಿವಿಯ ಪರಿಷತ್‌ಗಳ ಸದಸ್ಯರು, ಮಹಾಮಂಡಲದ ಹಾಗೂ ವಿವಿವಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.