ಸಾರಾಂಶ
ಬೀರೂರು, ಕಡೂರು ತಾಲೂಕಿನ ರೈತರ ಜೀವನಾಡಿ ಮದಗದಕೆರೆಗೆ ಜೀವಕಳೆ ಬಂದಿದ್ದು, ಮಳೆ ಮುಂದುವರಿದರೆ ಕೆಲವೇ ದಿನಗಳಲ್ಲಿ ಭರ್ತಿಯಾಗಿ ಶುಕ್ರವಾರ ಕೋಡಿ ಬೀಳುವ ಸಾಧ್ಯತೆಗಳಿವೆ. ಕಳೆದೊಂದು ವಾರದಿಂದ ಧಾರಾಕಾರವಾಗಿ ಸುರಿದ ಮಳೆಗೆ ಕೆರೆ ಒಡಲು ಸಂಪೂರ್ಣ ತುಂಬಿ ಕೋಡಿ ಬೀಳುವ ಸಾಧ್ಯತೆ ಹಿನ್ನಲೆಯಲ್ಲಿ ರೈತರ ಮೊಗದಲ್ಲಿ ಸಂಭ್ರಮ ಮೂಡಿಸಿದೆ.
ಧಾರಾಕಾರ ಮಳೆ: ಶುಕ್ರವಾರ ಕೋಡಿ ಬೀಳುವ ನಿರೀಕ್ಷೆ: ಕೆರೆಗೆ ಹರಿದುಬರುತ್ತಿರುವ ನೀರು; ಶಕ್ತಿದೇವತೆ ಕೆಂಚಮ್ಮನವರಿಗೆ ವಿಶೇಷ ಪೂಜೆ
ಕನ್ನಡಪ್ರಭವಾರ್ತೆ, ಬೀರೂರು: ಕಡೂರು ತಾಲೂಕಿನ ರೈತರ ಜೀವನಾಡಿ ಮದಗದಕೆರೆಗೆ ಜೀವಕಳೆ ಬಂದಿದ್ದು, ಮಳೆ ಮುಂದುವರಿದರೆ ಕೆಲವೇ ದಿನಗಳಲ್ಲಿ ಭರ್ತಿಯಾಗಿ ಶುಕ್ರವಾರ ಕೋಡಿ ಬೀಳುವ ಸಾಧ್ಯತೆಗಳಿವೆ. ಕಳೆದೊಂದು ವಾರದಿಂದ ಧಾರಾಕಾರವಾಗಿ ಸುರಿದ ಮಳೆಗೆ ಕೆರೆ ಒಡಲು ಸಂಪೂರ್ಣ ತುಂಬಿ ಕೋಡಿ ಬೀಳುವ ಸಾಧ್ಯತೆ ಹಿನ್ನಲೆಯಲ್ಲಿ ರೈತರ ಮೊಗದಲ್ಲಿ ಸಂಭ್ರಮ ಮೂಡಿಸಿದೆ.ಮದಗದಕೆರೆ 65ಅಡಿ (0.35 ಟಿಎಂಸಿ) ಸಂಗ್ರಹ ಸಾಮರ್ಥ್ಯ ಹೊಂದಿದೆ. ದೇವನಕೆರೆ, ಬುಕ್ಕಸಾಗರ ಕೆರೆ, ಚಿಕ್ಕಂಗಳ ಕೆರೆ, ಹಳೇ ಮದಗದಕೆರೆ, ಹುಲಿಗೊಂದಿರಾಯನ ಕೆರೆ, ಬಾಕಿನಕೆರೆ ಸೇರಿದಂತೆ 32ಕ್ಕೂ ಹೆಚ್ಚು ಸರಣಿ ಕೆರೆಗಳನ್ನು ಹೊಂದಿರುವ ಮದಗದಕೆರೆ ಬೀರೂರು, ಕಡೂರು ಭಾಗದ ರೈತರ ಬದುಕಿಗೆ ಆಧಾರ ಸ್ತಂಭ.ತರೀಕೆರೆ ತಾಲೂಕಿನ ಸಂತವೇರಿ, ಹೊಸಪೇಟೆ ಭಾಗದಲ್ಲಿ ಸುರಿವ ಮಳೆಯನ್ನು ಆಶ್ರಯಿಸಿದ ಈ ಕೆರೆ ನೀರನ್ನು ಬಳಸಿ ರೈತರು ಬತ್ತ, ಕಿತ್ತಳೆ, ಅಡಕೆ ಬೆಳೆಯುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಕಿತ್ತಳೆ ಮತ್ತು ಬತ್ತದ ಕೃಷಿ ಕಡಿಮೆಯಾಗಿದ್ದು, ವಾಣಿಜ್ಯ ಬೆಳೆ ಅಡಕೆ ತಲೆ ಎತ್ತಿ ನಿಂತಿದೆ.2019-20ನೇ ಸಾಲಿನಲ್ಲಿ ಭದ್ರಾ ಉಪಕಣಿವೆ ಯೋಜನೆಯಡಿ ಭದ್ರಾ ನದಿಯಿಂದ ಬೀರೂರು ಸಮೀಪದ ದೇವನಕೆರೆ ತುಂಬಿಸಿ, ಅಲ್ಲಿಂದ ಮದಗದಕೆರೆಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿವೆ. ಮುಂದಿನ ಹಂತದ ಕೆಲಸಗಳು ವೇಗ ಕಳೆದುಕೊಂಡಿದ್ದು, ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರಿ ಯೋಜನೆಗೆ ವೇಗ ದೊರಕಿಸಿಕೊಡಬೇಕು. ಕೆರೆಯಲ್ಲಿ ಹೂಳು ತುಂಬಿದ್ದು, ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದೆ ಎನ್ನುತ್ತಾರೆ ಸ್ಥಳೀಯರ ರೈತರು.‘ಕೆರೆ ತಳ ಭಾಗದಲ್ಲಿ ಸ್ವಲ್ಪ ನೀರು ಪೋಲಾಗುತ್ತಿತ್ತು, ಜುಲೈ ತಿಂಗಳಿನಲ್ಲಿ ಅದನ್ನು ದುರಸ್ತಿ ಮಾಡಿಸಿ ನೀರು ಪೋಲಾಗುವುದನ್ನು ತಪ್ಪಿಸಲಾಗಿದೆ’ ಎಂದು ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ವಿಭಾಗದವರು ಮಾಹಿತಿ ನೀಡಿದ್ದಾರೆ.ಗುರುವಾರ ನಿರಂತರವಾಗಿ ಮಳೆ ಸುರಿದ ಶುಕ್ರವಾರ ಕೆರೆ ತುಂಬಿ ಕೋಡಿ ಬೀಳುವ ಸ್ಥಿತಿ ಇದೆ. ಹರ್ಷಗೊಂಡಿರುವ ರೈತರು ಮದಗದಕೆರೆಗೆ ತೆರಳಿ ಕೆರೆ ಶಕ್ತಿದೇವತೆ ಕೆಂಚಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಳೆ ಮುಂದುವರಿದರೆ, ಮದಗದ ಕೆರೆಯನ್ನು ಆಶ್ರಯಿಸಿರುವ ಸರಣಿ ಕೆರೆಗಳೂ ಭರ್ತಿಯಾಗಿ ಜಲಸಮೃದ್ಧಿ ಕಾಣಬಹುದು ಎನ್ನುವುದು ರೈತರ ಆಶಯ.25 ಬೀರೂರು 1ಬೀರೂರು ಹೋಬಳಿ ಮದಗದಕೆರೆ ಗುರುವಾರ ಸತತ ಸುರಿದ ಮಳೆಗೆ ಕೋಡಿ ಬೀಳುವ ಹಂತ ತಲುಪಿದೆ. ಅದಕ್ಕಾಗಿ ರೈತರು ಕೆರೆಯ ತೂಬಿಗೆ ಪೂಜೆ ಸಲ್ಲಿಸಿದರು.