ಸಾರಾಂಶ
ಮಂಜುನಾಥ ಕೆ.ಎಂ.
ಬಳ್ಳಾರಿ: ಇಲ್ಲಿನ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ಶನಿವಾರ ಜರುಗಲಿದ್ದು, ಕೈ ನಾಯಕರ ನಡುವೆ ಜಿದ್ದಾಜಿದ್ದಿ ನಡೆದಿದೆ.ಮೇಯರ್ ಸ್ಥಾನ ಸಾಮಾನ್ಯ ಹಾಗೂ ಉಪ ಮೇಯರ್ ಸ್ಥಾನ ಸಾಮಾನ್ಯ (ಮಹಿಳೆ)ಗೆ ನಿಗದಿಯಾಗಿದೆ. ಮೇಯರ್ ಹಾಗೂ ಉಪ ಮೇಯರ್ ಜೊತೆಗೆ ನಾಲ್ಕು ಸ್ಥಾಯಿ ಸಮಿತಿಗಳಿಗೂ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಆದರೆ, ಮೇಯರ್ ಸ್ಥಾನಕ್ಕೆ ಮಾತ್ರ ಆಕಾಂಕ್ಷಿಗಳ ಭಾರೀ ಕಸರತ್ತು ಶುರುವಾಗಿದೆ. ಪಕ್ಷದಲ್ಲಿನ ಹಿರಿತನ ಹಾಗೂ ಈವರೆಗೆ ಯಾವ ಸಮುದಾಯಗಳಿಗೆ ಅವಕಾಶ ಸಿಕ್ಕಿಲ್ಲ ಎಂಬಂಶಗಳನ್ನು ಪರಿಗಣಿಸಿಯೇ ಪಕ್ಷದ ಮುಖಂಡರು ಮೇಯರ್ ಸ್ಥಾನದ ಅಭ್ಯರ್ಥಿಯನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ.
ಪಕ್ಷದ ಮೂಲಗಳ ಪ್ರಕಾರ ಪಾಲಿಕೆ ಸದಸ್ಯ ಪೂಜಾರಿ ಗಾದೆಪ್ಪ, ಆಸಿಫ್ ಅವರ ನಡುವೆ ತೀವ್ರ ಪೈಪೋಟಿ ಕಂಡು ಬಂದಿದೆ. ಪ್ರಭಂಜನಕುಮಾರ್ ಸಹ ಆಕಾಂಕ್ಷಿಯಾಗಿದ್ದಾರಾದರೂ ಕಮ್ಮಾ ಸಮುದಾಯಕ್ಕೆ ಮೇಯರ್ ಸ್ಥಾನಕ್ಕೆ ಈಗಾಗಲೇ ಅವಕಾಶ ಸಿಕ್ಕಿರುವುದರಿಂದ ಅವಕಾಶ ವಂಚಿತವರನ್ನು ಪರಿಗಣಿಸುವ ಸಾಧ್ಯತೆ ಹೆಚ್ಚಾಗಿದೆ. ಪೂಜಾರಿ ಗಾದೆಪ್ಪ ಅವರು ಯಾದವ (ಗೊಲ್ಲ) ಸಮುದಾಯಕ್ಕೆ ಸೇರಿದ್ದು, ಆಸಿಫ್ ಮುಸ್ಲಿಂ ಸಮುದಾಯದವರು. ಯಾದವ, ಮುಸ್ಲಿಂ ಸಮುದಾಯದವರು ಈವರೆಗೆ ಮೇಯರ್ ಆಗಿಲ್ಲ. ಆದರೆ, ಮುಸ್ಲಿಂ ಸಮಾಜದವರು ಉಪ ಮೇಯರ್ ಗಳಾಗಿ ಅವಕಾಶ ಪಡೆದಿದ್ದಾರೆ.ಜೊತೆಗೆ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಗೆ ಎರಡು ಬಾರಿ ಸಂಸದನಾಗುವ ಅವಕಾಶ ಸಿಕ್ಕಿದೆ. ತೀವ್ರ ಪೈಪೋಟಿಯಲ್ಲಿರುವ ಪೂಜಾರಿ ಗಾದೆಪ್ಪ, ಆಸಿಫ್ ಪ್ರತಿನಿಧಿಸುವ ಸಮುದಾಯಕ್ಕೆ ರಾಜಕೀಯವಾಗಿ ಈವರೆಗೆ ಸಿಕ್ಕಿರುವ ಸ್ಥಾನಮಾನ ಕುರಿತು ಚರ್ಚಿಸಿಯೇ ಪಕ್ಷದ ರಾಜ್ಯ ನಾಯಕರು ಹಾಗೂ ಜಿಲ್ಲೆಯ ಶಾಸಕರು, ಸಂಸದರು ಸೂಕ್ತ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ.
39 ಸದಸ್ಯ ಬಲದ ಪಾಲಿಕೆಯಲ್ಲಿ ಕಾಂಗ್ರೆಸ್ 21 ಸ್ಥಾನಗಳನ್ನು ಗೆದ್ದಿತ್ತು. ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದ ಪ್ರಭಂಜನಕುಮಾರ್ ಸೇರಿದಂತೆ ಐವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಪಾಲಿಕೆಯಲ್ಲಿ ಕೈ ಪಕ್ಷದ ಸದಸ್ಯರ ಸಂಖ್ಯಾಬಲ 26ಕ್ಕೇರಿತು. ಬಿಜೆಪಿಯ 13 ಜನರು ಪಾಲಿಕೆಯ ಸದಸ್ಯರಿದ್ದಾರೆ.ವೀಕ್ಷಕರ ಭೇಟಿ- ಅಭಿಪ್ರಾಯ ಸಂಗ್ರಹ:
ಶನಿವಾರ ಜರುಗುವ ಮೇಯರ್, ಉಪ ಮೇಯರ್ ಚುನಾವಣೆ ಹಿನ್ನೆಲೆ ವೀಕ್ಷಕರಾಗಿ ಮಾಜಿ ಶಾಸಕ ಆರ್.ವೆಂಕಟೇಶ್, ಸೂರಜ್ ಹೆಗಡೆ ನಗರಕ್ಕೆ ಆಗಮಿಸಿ, ಪಕ್ಷದ ಮುಖಂಡರು, ಮೇಯರ್ ಸ್ಥಾನದ ಆಕಾಂಕ್ಷಿಗಳು, ಪಾಲಿಕೆ ಸದಸ್ಯರ ಅಭಿಪ್ರಾಯ ಸಂಗ್ರಹಿಸಿದರು. ನಗರದ ಇನ್‌ಫ್ಯಾಂಟ್ರಿ ರಸ್ತೆಯಲ್ಲಿರುವ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆದವು.ಶಾಸಕರ ತೀರ್ಮಾನವೇ ಫೈನಲ್?: ಮೇಯರ್ ಸ್ಥಾನಕ್ಕೆ ತೀವ್ರ ಜಿದ್ದಾಜಿದ್ದಿ ನಡೆದಿದೆಯಾದರೂ ಈ ಬಾರಿ ಮೇಯರ್ ಪಟ್ಟಕ್ಕೆ ಯಾರನ್ನು ಕೂಡಿಸಬೇಕು ಎಂಬ ಅಂತಿಮ ನಿರ್ಧಾರವನ್ನು ಬಳ್ಳಾರಿ ನಗರ, ಗ್ರಾಮೀಣ ಶಾಸಕರೇ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಇಬ್ಬರು ಶಾಸಕರು ಶನಿವಾರ ಬಳ್ಳಾರಿಯ ನಕ್ಷತ್ರ ಹೋಟೆಲ್‌ನಲ್ಲಿ ಜರುಗುವ ಸಭೆಯಲ್ಲಿ ಮೇಯರ್ ಯಾರಾಗಬೇಕು ಎಂಬುದನ್ನು ನಿರ್ಧರಿಸಲಿದ್ದಾರೆ.
ಈವರೆಗೆ ಅವಕಾಶ ವಂಚಿತ ಸಮುದಾಯಕ್ಕೆ ಆದ್ಯತೆ ನೀಡಬೇಕಾಗಿರುವುದರಿಂದ ಮಹಾಪೌರ ಸ್ಥಾನಕ್ಕೆ ಯಾರನ್ನು ಆಯ್ಕೆಗೊಳಿಸಲಿದ್ದಾರೆ ಎಂಬ ಕುತೂಹಲವಿದೆ. ಆಯಾ ಸಮುದಾಯಗಳು ತಮ್ಮದೇ ಅಭ್ಯರ್ಥಿಯನ್ನು ಮೇಯರ್ ಸ್ಥಾನಕ್ಕೆ ಆಯ್ಕೆ ಮಾಡಿ ಎಂದು ಒತ್ತಡ ಹೇರುತ್ತಿರುವುದರಿಂದ ಪಕ್ಷದ ನಾಯಕರ ತಲೆನೋವಾಗಿ ಪರಿಣಮಿಸಿದೆ.ಚುನಾವಣೆ ಹಿನ್ನೆಲೆಯಲ್ಲಿ ಪಾಲಿಕೆ ಕಚೇರಿ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
;Resize=(128,128))
;Resize=(128,128))
;Resize=(128,128))