ಮೇಯರ್‌ ಮನೋಜ್‌ ಕೋಡಿಕಲ್‌, ಉಪ ಮೇಯರ್‌ ಭಾನುಮತಿ

| Published : Sep 20 2024, 01:43 AM IST

ಮೇಯರ್‌ ಮನೋಜ್‌ ಕೋಡಿಕಲ್‌, ಉಪ ಮೇಯರ್‌ ಭಾನುಮತಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಮೈಸೂರು ಪ್ರಾದೇಶಿಕ ಆಯುಕ್ತ ರಮೇಶ್‌ ಡಿ.ಎಸ್‌. ಚುನಾವಣಾಧಿಕಾರಿಯಾಗಿ ಮೇಯರ್‌- ಉಪಮೇಯರ್‌, ನಾಲ್ಕು ಸ್ಥಾಯಿ ಸಮಿತಿಗಳಿಗೆ ತಲಾ 7 ಸದಸ್ಯರ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಮಹಾನಗರ ಪಾಲಿಕೆಯ 25ನೇ ಅವಧಿಯ ಮೇಯರ್‌ ಆಗಿ 17ನೇ ವಾರ್ಡ್‌ನ ಬಿಜೆಪಿ ಸದಸ್ಯ ಮನೋಜ್‌ ಕುಮಾರ್‌ ಕೋಡಿಕಲ್‌ ಅವಿರೋಧವಾಗಿ ಆಯ್ಕೆಯಾದರೆ, ಉಪಮೇಯರ್‌ ಆಗಿ 58ನೇ ವಾರ್ಡ್‌ನ ಬಿಜೆಪಿ ಸದಸ್ಯೆ ಭಾನುಮತಿ ಪಿ.ಎಸ್‌. ಚುನಾಯಿತರಾದರು.

ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಮೈಸೂರು ಪ್ರಾದೇಶಿಕ ಆಯುಕ್ತ ರಮೇಶ್‌ ಡಿ.ಎಸ್‌. ಚುನಾವಣಾಧಿಕಾರಿಯಾಗಿ ಮೇಯರ್‌- ಉಪಮೇಯರ್‌, ನಾಲ್ಕು ಸ್ಥಾಯಿ ಸಮಿತಿಗಳಿಗೆ ತಲಾ 7 ಸದಸ್ಯರ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ಪಾಲಿಕೆಯ ಪ್ರಸಕ್ತ ಆಡಳಿತ ಅವಧಿ ಮುಂದಿನ ವರ್ಷದ ಫೆಬ್ರವರಿ 27ರವರೆಗೆ ಮಾತ್ರ ಇರುವುದರಿಂದ ಸುಮಾರು ಐದೂವರೆ ತಿಂಗಳು ಮಾತ್ರ ಮೇಯರ್‌, ಉಪಮೇಯರ್‌, ಸ್ಥಾಯಿ ಸಮಿತಿಗಳ ಅಧಿಕಾರ ಇರಲಿದೆ.ಬಿಜೆಪಿ 44, ಕಾಂಗ್ರೆಸ್‌ 14, ಎಸ್‌ಡಿಪಿಐನ ಇಬ್ಬರು ಸದಸ್ಯ ಬಲ ಹೊಂದಿರುವ ಪಾಲಿಕೆಯಲ್ಲಿ ಚುನಾವಣಾ ಪ್ರಕ್ರಿಯೆ ಆರಂಭಿಸುವಾಗ 65 ಅರ್ಹ ಸದಸ್ಯರ ಪೈಕಿ 61 ಮಂದಿ ಹಾಜರಿದ್ದರು. ಸಂಸದ ಕ್ಯಾ. ಬ್ರಿಜೇಶ್‌ ಚೌಟ, ಶಾಸಕರಾದ ವೇದವ್ಯಾಸ ಕಾಮತ್‌, ಡಾ. ಭರತ್‌ ಶೆಟ್ಟಿ ಉಪಸ್ಥಿತರಿದ್ದರೆ, ಕಾಂಗ್ರೆಸ್‌ ಶಾಸಕರಾದ ಮಂಜುನಾಥ ಭಂಡಾರಿ, ಐವನ್‌ ಡಿಸೋಜ ಗೈರು ಹಾಜರಾಗಿದ್ದರು. ಸಭೆಯಲ್ಲಿ ಮೂರನೇ ಒಂದು ಭಾಗದಷ್ಟು ಕೋರಂ ಇದ್ದುದರಿಂದ ಚುನಾವಣೆ ಪ್ರಕ್ರಿಯೆ ಆರಂಭಿಸಲಾಯಿತು.

ಅವಿರೋಧ ಆಯ್ಕೆ:

ಮೇಯರ್‌ ಸ್ಥಾನಕ್ಕೆ ಮನೋಜ್‌ ಕುಮಾರ್‌ ಕೋಡಿಕಲ್‌ ಎರಡು ನಾಮಪತ್ರ ಸಲ್ಲಿಸಿದ್ದರು. ಎರಡೂ ಸ್ವೀಕಾರಗೊಂಡಿರುವುದಾಗಿ ಚುನಾವಣಾ ಅಧಿಕಾರಿ ಪ್ರಕಟಿಸಿದರು. ಎಸ್‌ಸಿ ಮೀಸಲಾತಿ ಇದ್ದುದರಿಂದ ವಿಪಕ್ಷ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳು ಇಲ್ಲದ ಕಾರಣ ಮನೋಜ್‌ ಕೋಡಿಕಲ್‌ ಆಯ್ಕೆ ಅವಿರೋಧವಾಗಿ ನಡೆಯಿತು.

ಉಪ ಮೇಯರ್‌ಗೆ ಚುನಾವಣೆ:

ಉಪಮೇಯರ್‌ ಸ್ಥಾನಕ್ಕೆ ಆಡಳಿತ ಪಕ್ಷ ಬಿಜೆಪಿಯಿಂದ ಭಾನುಮತಿ 2 ನಾಮಪತ್ರ ಸಲ್ಲಿಸಿದ್ದರು. ಅಲ್ಲದೆ, ಬಿಜೆಪಿಯಿಂದ ವನಿತಾ ಪ್ರಸಾದ್‌ ಹಾಗೂ ವಿಪಕ್ಷ ಕಾಂಗ್ರೆಸ್‌ನ ಝೀನತ್‌ ಸಂಶುದ್ದೀನ್‌ ಕೂಡ ನಾಮಪತ್ರ ಸಲ್ಲಿಸಿದ್ದರು. ಭಾನುಮತಿ ಅವರ ಒಂದು ನಾಮಪತ್ರದಲ್ಲಿ ಜಾತಿ ಪ್ರಮಾಣಪತ್ರ ಸಲ್ಲಿಸದ ಕಾರಣ ತಿರಸ್ಕರಿಸಿದ್ದು, ಇನ್ನೊಂದು ನಾಮಪತ್ರ ಸ್ವೀಕೃತವಾಯಿತು. ಉಳಿದಿಬ್ಬರು ಅಭ್ಯರ್ಥಿಗಳ ನಾಮಪತ್ರವೂ ಸ್ವೀಕಾರಗೊಂಡಿತು. ಬಿಜೆಪಿಯ ವನಿತಾ ಪ್ರಸಾದ್‌ ನಾಮಪತ್ರ ಹಿಂಪಡೆದ ನಂತರ ಕಣದಲ್ಲಿ ಬಿಜೆಪಿಯ ಭಾನುಮತಿ, ಕಾಂಗ್ರೆಸ್‌ನ ಝೀನತ್‌ ಸಂಶುದ್ದೀನ್‌ ನಡುವೆ ಚುನಾವಣೆ ನಡೆಯಿತು. ಭಾನುಮತಿ ಅವರಿಗೆ 47 ಮತಗಳು ದೊರೆತರೆ, ಕಾಂಗ್ರೆಸ್‌ನ ಝೀನತ್‌ ಸಂಶುದ್ದೀನ್‌ಗೆ 14 ಮತ ಚಲಾವಣೆಗೊಂಡವು. ಭಾನುಮತಿ ಅವರನ್ನು ಉಪ ಮೇಯರ್‌ ಆಗಿ ಚುನಾವಣಾಧಿಕಾರಿ ಘೋಷಿಸಿದರು.

ಎಸ್‌ಡಿಪಿಐ ಒಬ್ಬರು ಗೈರು, ಇನ್ನೊಬ್ಬರು ತಟಸ್ಥ:

ಎಸ್‌ಡಿಪಿಐ ಸದಸ್ಯೆ ಶಂಶಾದ್‌ ಅಬೂಬಕ್ಕರ್‌ ಸಭೆಯಲ್ಲಿ ಹಾಜರಿದ್ದರೆ, ಇನ್ನೋರ್ವ ಸದಸ್ಯ ಮುನೀಬ್‌ ಬೆಂಗ್ರೆ ಗೈರು ಹಾಜರಾಗಿದ್ದರು. ಉಪಮೇಯರ್‌ ಚುನಾವಣೆ ವೇಳೆ ಶಂಶಾದ್‌ ಯಾರನ್ನೂ ಬೆಂಬಲಿಸದೆ ತಟಸ್ಥರಾಗಿ ಉಳಿದರು.

ಬಳಿಕ ನಾಲ್ಕು ಸ್ಥಾಯಿ ಸಮಿತಿಗಳಿಗೆ ತಲಾ ಏಳು ಸದಸ್ಯರ ಅವಿರೋಧ ಆಯ್ಕೆ ನಡೆಯಿತು. ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್‌ ಕುಮಾರ್‌, ಪಾಲಿಕೆ ಆಯುಕ್ತ ಆನಂದ್‌ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.ಅಭಿನಂದನಾ ಸಭೆಯಲ್ಲಿ ರಾಜಕೀಯ ಚಕಮಕಿ!

ಚುನಾವಣಾ ಪ್ರಕ್ರಿಯೆ ಬಳಿಕ ನಡೆದ ಅಭಿನಂದನಾ ಸಭೆಯು ರಾಜಕೀಯವಾಗಿ ಸದಸ್ಯರ ನಡುವೆ ಕೆಲಕಾಲ ಮಾತಿನ ಚಕಮಕಿಗೆ ಕಾರಣವಾಯಿತು. ಸಂಸದ ಕ್ಯಾ.ಚೌಟ, ಶಾಸಕರಾದ ವೇದವ್ಯಾಸ ಕಾಮತ್‌, ಭರತ್‌ ಶೆಟ್ಟಿ ಅಭಿನಂದನೆ ಸಲ್ಲಿಸಿದ ಬಳಿಕ ನಿರ್ಗಮಿತ ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಅವರು ಅಭಿನಂದನಾ ನುಡಿಯಲ್ಲಿ ರಾಜ್ಯ ಸರ್ಕಾರವನ್ನು ಟೀಕಿಸಿದ್ದು, ವಿಪಕ್ಷ ಸದಸ್ಯರ ಕೆಂಗಣ್ಣಿಗೆ ಗುರಿಯಾಯಿತು. ಸುಧೀರ್‌ ಶೆಟ್ಟಿ ಮಾತನಾಡುತ್ತಿರುವಾಗಲೇ ನಿರ್ಗಮಿತ ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ ಸೇರಿದಂತೆ ಉಳಿದ ಕಾಂಗ್ರೆಸ್‌ ಸದಸ್ಯರು ಯಾವ ಮಾತನ್ನೂ ಆಡದೆ ಮೇಯರ್‌ ಅವರನ್ನು ಅಭಿನಂದಿಸಲು ಹೂಗುಚ್ಛ ಹಿಡಿದು ವೇದಿಕೆ ಹತ್ತಿದರು. ಇದನ್ನು ಆಡಳಿತ ಸದಸ್ಯರು ಆಕ್ಷೇಪಿಸಿದರು.

ಈ ವೇಳೆ ಮಾತನಾಡಿದ ಕಾಂಗ್ರೆಸ್‌ ಸದಸ್ಯ ಶಶಿಧರ ಹೆಗ್ಡೆ, ಅಭಿನಂದನಾ ಸಮಾರಂಭವನ್ನು ಅಭಿನಂದನೆಗಷ್ಟೇ ಸೀಮಿತ ಮಾಡಬೇಕು. ಆದರೆ ಸರ್ಕಾರವನ್ನು ದೂಷಿಸಿ ರಾಜಕೀಯ ಮಾಡುವುದು ಸಲ್ಲದು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮೇಯರ್‌ ಸ್ಥಾನದ ಎಸ್ಸಿ ಮೀಸಲಾತಿ ಬಗ್ಗೆಯೂ ಮಾತಿನ ಚಕಮಕಿ ನಡೆಯಿತು. ಬಳಿಕ ಆಡಳಿತ- ವಿಪಕ್ಷ ಸದಸ್ಯರೆಲ್ಲರೂ ಸಂತಸದಿಂದ ಮೇಯರ್‌- ಉಪಮೇಯರ್‌ಗೆ ಅಭಿನಂದನೆ ಸಲ್ಲಿಸಿದರು.

ಸ್ಥಾಯಿ ಸಮಿತಿ ಸದಸ್ಯರು1. ತೆರಿಗೆ, ಹಣಕಾಸು ಸ್ಥಾಯಿ ಸಮಿತಿ- ಕೇಶವ, ಎ.ಸಿ. ವಿನಯರಾಜ್‌, ಕದ್ರಿ ಮನೋಹರ ಶೆಟ್ಟಿ, ಸಂಗೀತಾ ನಾಯಕ್‌, ಲೋಕೇಶ್‌ ಬೊಳ್ಳಾಜೆ, ಕಿಶೋರ್‌ ಕೊಟ್ಟಾರಿ, ವನಿತಾ ಪ್ರಸಾದ್‌.

2. ಸಾಮಾಜಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ- ಸುಮಿತ್ರಾ, ಸುನೀತಾ, ಶರತ್‌ ಕುಮಾರ್‌, ಭರತ್‌ ಕುಮಾರ್‌, ಶೋಭಾ ಪೂಜಾರಿ, ದಿವಾಕರ ಪಾಂಡೇಶ್ವರ, ಅಬ್ದುಲ್‌ ಲತೀಫ್‌.3. ಪಟ್ಟಣ ಯೋಜನೆ ಮತ್ತು ಸುಧಾರಣಾ ಸ್ಥಾಯಿ ಸಮಿತಿ- ಭಾಸ್ಕರ ಮೊಯ್ಲಿ, ವೀಣಾ ಮಂಗಳಾ, ಲಕ್ಷ್ಮೀ ದೇವಾಡಿಗ, ಗಾಯತ್ರಿ ಎ., ಲೋಹಿತ್‌ ಅಮೀನ್‌, ಶೈಲೇಶ್‌ ಶೆಟ್ಟಿ, ನವೀನ್‌ ಡಿಸೋಜ.4. ಲೆಕ್ಕಪತ್ರ ಸ್ಥಾಯಿ ಸಮಿತಿ- ಅಶ್ರಫ್‌, ಸರಿತಾ ಶಶಿಧರ್‌, ಲೀಲಾವತಿ, ಜಯಲಕ್ಷ್ಮೀ ಶೆಟ್ಟಿ, ವರುಣ್‌ ಚೌಟ, ಚಂದ್ರಾವತಿ, ಸಂಶುದ್ದೀನ್‌.

ಮೊದಲ ಅವಧಿಯಲ್ಲೇ ಮೇಯರ್‌ ಪಟ್ಟ

2019ರಲ್ಲಿ ದೇರೆಬೈಲ್ ಉತ್ತರ ವಾರ್ಡ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದವರು ಮನೋಜ್‌ ಕುಮಾರ್‌ ಕೋಡಿಕಲ್‌. ಪಾಲಿಕೆ ಸದಸ್ಯನಾಗಿ ಮೊದಲ ಅವಧಿಯಲ್ಲೇ ಅವರಿಗೆ ಮೇಯರ್ ಪಟ್ಟ ಒಲಿದಿದೆ. ಡಿಪ್ಲೊಮಾ ಪದವೀಧರರಾಗಿರುವ ಅವರು ಕಾಲೇಜು ಜೀವನದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಸಕ್ರಿಯ ಕಾರ್ಯಕರ್ತ. ಬಿಜೆಪಿಯಲ್ಲಿ ಎಸ್‌ಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿಯಾಗಿದ್ದು, ಪ್ರಸ್ತುತ ಎಸ್‌ಸಿ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

ಉಪಮೇಯರ್‌ ಭಾನುಮತಿ ಪಿ.ಎಸ್‌. ಹಲವು ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡವರು. ಭಗಿನಿ ಸಮಾಜದ ಕಾರ್ಯದರ್ಶಿ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಬೋಳಾರ ವಾರ್ಡ್‌ನಿಂದ ಗೆದ್ದು ಸದಸ್ಯರಾದವರು.