ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮೈಷುಗರ್ ಸಕ್ಕರೆ ಕಾರ್ಖಾನೆ ಪ್ರಸಕ್ತ ಹಂಗಾಮಿನ ಕಬ್ಬು ಅರೆಯುವಿಕೆ ಕಾರ್ಯವನ್ನು ಅ.೨೦ಕ್ಕೆ ಸ್ಥಗಿತಗೊಳಿಸುವುದಾಗಿ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಿದೆ. ಈ ಸಾಲಿನಲ್ಲಿ ಇದುವರೆಗೆ ೧.೧೭ ಲಕ್ಷ ಟನ್ ಕಬ್ಬನ್ನು ಅರೆಯುವುದಕ್ಕಷ್ಟೇ ಶಕ್ತವಾಗಿದ್ದು, ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಕಬ್ಬು ಅರೆಯುವಿಕೆಯಲ್ಲಿ ಅತ್ಯಂತ ಕಳಪೆ ಸಾಧನೆ ಮಾಡಿದೆ.೨೦೨೩-೨೪ನೇ ಸಾಲಿನಲ್ಲಿ ೧೧ ಜೂನ್ ೨೦೨೩ರಿಂದ ೫ ಡಿಸೆಂಬರ್ ೨೦೨೩ರವರೆಗೆ ೪,೩೦,೬೯೦ ಟನ್ ಒಪ್ಪಿಗೆ ಕಬ್ಬಿನಲ್ಲಿ ೨,೪೧,೩೦೫ ಟನ್ ಕಬ್ಬು ಅರೆದು ಶೇ.೬.೯೬ ಇಳುವರಿ ಸಾಧಿಸಿತ್ತು. ೨೦೨೪-೨೫ನೇ ಸಾಲಿನಲ್ಲಿ ೧ ಆಗಸ್ಟ್ ೨೦೦೨೪ ರಿಂದ ೨೪ ನವೆಂಬರ್ ೨೦೨೪ರವರೆಗೆ ೨,೦೫,೨೫೩ ಒಪ್ಪಿಗೆ ಕಬ್ಬಿನಲ್ಲಿ ೧,೯೯,೮೮೮ ಟನ್ ಕಬ್ಬು ಅರೆದು ಶೇ.೬.೩೫ ಇಳುವರಿ ಸಾಧಿಸಿತ್ತು.
೨೦೨೪-೨೫ನೇ ಸಾಲಿನಲ್ಲಿ ೧೬ ಜುಲೈ ೨೦೨೫ ರಿಂದ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಆರಂಭಗೊಂಡಿತು. ೪.೫೦ ಲಕ್ಷ ಟನ್ ಒಪ್ಪಿಗೆ ಕಬ್ಬಿನಲ್ಲಿ ಇದುವರೆಗೆ ೧,೧೭,೨೪೬ಟನ್ ಕಬ್ಬನ್ನು ಅರೆಯಲಾಗಿದೆ. ಶೇ.೬.೭ರಷ್ಟು ಇಳುವರಿಯನ್ನು ಮಾತ್ರ ಸಾಧಿಸಿದೆ. ಕಬ್ಬು ಅರೆಯುವಿಕೆ, ಇಳುವರಿ, ಸಕ್ಕರೆ ಉತ್ಪಾದನೆಯಲ್ಲೂ ಈ ಸಾಲಿನಲ್ಲಿ ಗಣನೀಯ ಪ್ರಮಾಣದ ಕುಸಿತ ಉಂಟಾಗಿದೆ. ಇದರಿಂದ ಮೈಷುಗರ್ ಕಾರ್ಖಾನೆ ಸುಧಾರಣೆ ಕನಸಿನ ಮಾತಾಗಿಯೇ ಉಳಿದುಕೊಂಡಿದೆ.ಕಬ್ಬಿನ ಕೊರತೆ ನೆಪವೊಡ್ಡಿ ಕಳೆದೆರಡು ವರ್ಷಗಳಿಗೆ ಕಬ್ಬು ಅರೆಯುವಿಕೆ ಮುಕ್ತಾಯಗೊಳಿಸಿದ ದಿನಾಂಕಕ್ಕಿಂತ ಸುಮಾರು ಒಂದು ತಿಂಗಳು ಮುಂಚಿತವಾಗಿಯೇ ಕಬ್ಬು ಅರೆಯುವಿಕೆಯನ್ನು ಸ್ಥಗಿತಗೊಳಿಸಲು ಮುಂದಾಗಿದೆ. ಸರ್ಕಾರ ಈ ಸಾಲಿನಲ್ಲಿ ೧೦ ಕೋಟಿ ರು. ಹಣವನ್ನು ಸಾಲದ ರೂಪದಲ್ಲಿ ನೀಡಿದ್ದು, ಅದನ್ನು ಡಿಸೆಂಬರ್ ಅಂತ್ಯದೊಳಗೆ ಮರುಪಾವತಿಸುವ ಜವಾಬ್ದಾರಿ ಕಾರ್ಖಾನೆಯ ಮೇಲಿದೆ.
ನಷ್ಟದ ಜೊತೆ ವಿದ್ಯುತ್ ಬಿಲ್ ಹೊರೆ:ಸೆ.೧೯ರಂದು ಟ್ಯಾಂಕ್ ಒಡೆದು ಸುಮಾರು ೧೨೦೦ ಟನ್ ಮೊಲಾಸಸ್ ಸೋರಿಕೆಯಿಂದ ಕಾರ್ಖಾನೆಗೆ ೧.೩೬ ಕೋಟಿ ರು.ವರೆಗೆ ನಷ್ಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಈ ಸಾಲಿನಲ್ಲಿ ಸಹ ವಿದ್ಯುತ್ ಘಟಕ ಕಾರ್ಯಾರಂಭ ಮಾಡದ ಹಿನ್ನೆಲೆಯಲ್ಲಿ ಗ್ರಿಡ್‌ನಿಂದ ವಿದ್ಯುತ್‌ನ್ನು ಪಡೆದುಕೊಂಡು ಕಬ್ಬು ಅರೆಯುವಿಕೆ ನಡೆಸಿರುವುದರಿಂದ ಕೋಟ್ಯಂತರ ರು. ವಿದ್ಯುತ್ ಬಿಲ್‌ನ ಹೊರೆಯೂ ಕಾರ್ಖಾನೆ ಮೇಲೆ ಬಿದ್ದಿದೆ. ಸುಮಾರು ೫೨ ಕೋಟಿ ರು.ನಷ್ಟು ಬಾಕಿ ಇದ್ದ ವಿದ್ಯುತ್ ಬಿಲ್‌ನ್ನು ಸರ್ಕಾರ ಮನ್ನಾ ಮಾಡಿ ಕಾರ್ಖಾನೆ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸಿತ್ತಾದರೂ ಇದೀಗ ಕಾರ್ಖಾನೆ ಆಡಳಿತ ಮಂಡಳಿಯ ದುರಾಡಳಿತದಿಂದ ಮತ್ತೆ ವಿದ್ಯುತ್ ಬಿಲ್ ಬಾಕಿ ಕಾರ್ಖಾನೆ ಹೆಗಲೇರಿದೆ.
೬೦ ಕೋಟಿ ರು. ಸಾಲ ಕೊಟ್ಟ ಸರ್ಕಾರ:೨೦೧೯-೨೦ನೇ ಸಾಲಿನಿಂದ ೨೦೨೧-೨೨ನೇ ಸಾಲಿನವರೆಗೆ ಸ್ಥಗಿತಗೊಂಡಿದ್ದ ಮೈಷುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸುವ ಪ್ರಯತ್ನ ನಡೆದಿತ್ತಾದರೂ ಸ್ಥಳೀಯ ರೈತಸಂಘಟನೆಗಳ ಹೋರಾಟದಿಂದ ಸರ್ಕಾರಿ ಸ್ವಾಮ್ಯದಲ್ಲೇ ಉಳಿದಿತ್ತು. ೨೦೨೩ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಸಾರಥ್ಯ ವಹಿಸಿದ ಸಿದ್ದರಾಮಯ್ಯ ೫೦ ಕೋಟಿ ರು. ಹಣವನ್ನು ಸಾಲವಾಗಿ ಮೈಷುಗರ್‌ಗೆ ಕೊಟ್ಟು ಕಾರ್ಖಾನೆ ಆರಂಭಿಸಿದರು. ಮೊದಲ ವರ್ಷದ ಕಬ್ಬು ಅರೆಯುವಿಕೆ ಕಾರ್ಖಾನೆ ಚೇತರಿಸಿಕೊಳ್ಳಬಹುದೆಂಬ ಆಶಾಭಾವನೆ ಮೂಡಿಸಿತ್ತು. ೨೦೨೪ನೇ ಸಾಲಿನಲ್ಲಿ ಕಬ್ಬು ಅರೆಯುವಿಕೆಯಲ್ಲಿ ೫೦ ಸಾವಿರ ಟನ್ ಕುಸಿದರೆ, ೨೦೨೫ನೇ ಸಾಲಿನಲ್ಲಿ ಮತ್ತೆ ೧೦ ಕೋಟಿ ರು. ಸಾಲ ಕೊಟ್ಟರೂ ಕಳೆದ ಸಾಲಿಗಿಂತ ೭೫ ಸಾವಿರ ಟನ್ ಕುಸಿಯಬಹುದೆಂದು ಅಂದಾಜಿಸಲಾಗಿದೆ. ೨೦೨೪ನೇ ಸಾಲಿನಲ್ಲಿ ಮೈಷುಗರ್ ಕಾರ್ಖಾನೆಗೆ ಒಟ್ಟಾರೆ ೩೩ ಕೋಟಿ ರು. ನಷ್ಟವಾಗಿರುವುದನ್ನು ಟಿಪ್ಪಣಿ ಮುಖೇನ ಕಾರ್ಖಾನೆ ಅಧ್ಯಕ್ಷರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಸಾಲಿನಲ್ಲಿ ಆಗಿರುವ ನಷ್ಟದ ಪ್ರಮಾಣ ಇದುವರೆಗೂ ಗೊತ್ತಾಗಿಲ್ಲ.
ಸರ್ಕಾರದ ವಿಶ್ವಾಸ ಗಳಿಸುವಲ್ಲಿ ವಿಫಲ:ಇದರ ನಡುವೆ ಗಗನಚುಕ್ಕಿ ಜಲಪಾತೋತ್ಸವಕ್ಕೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಷುಗರ್ ಬಾಯ್ಲರ್ ಘಟಕ ಆರಂಭಕ್ಕೆ ಹಣ ನೀಡುವ ಭರವಸೆ ನೀಡಿದ್ದಾರೆ. ಕಾರ್ಖಾನೆಯನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸಬೇಕಿದ್ದ ಆಡಳಿತ ಮಂಡಳಿ ಕಬ್ಬು ಅರೆಯುವಿಕೆಯಲ್ಲಿ ಕಳಪೆ ಸಾಧನೆಯನ್ನು ಪ್ರದರ್ಶಿಸಿ ಸರ್ಕಾರದ ವಿಶ್ವಾಸ ಗಳಿಸುವಲ್ಲಿ ವಿಫಲವಾಗಿದೆ.
ತಾಂತ್ರಿಕ ತಜ್ಞರು, ಕೌಶಲ್ಯ ನೌಕರರಿಲ್ಲ:ಕಾರ್ಖಾನೆಯ ನಿರ್ವಹಣೆ ಮತ್ತು ಕಾರ್ಯಾಚರಣೆಯನ್ನು ಖಾಸಗಿಯವರಿಗೆ ನೀಡಿದರೂ ಕಾರ್ಖಾನೆ ಚೇತರಿಕೆ ಕಾಣುತ್ತಿಲ್ಲ. ಗುತ್ತಿಗೆ ಪಡೆದ ಕಂಪನಿ ಮತ್ತು ಆಡಳಿತ ಮಂಡಳಿ ಜೊತೆ ಹೊಂದಾಣಿಕೆ ಕೊರತೆ, ನೌಕರರ ಕೊರತೆ, ಆರ್ಥಿಕ ಶಿಸ್ತಿಲ್ಲದಿರುವುದು, ಆಡಳಿತದಲ್ಲಿ ಪಾರದರ್ಶಕತೆ ಮಾಯವಾಗಿರುವುದು, ಕಾರ್ಖಾನೆಯ ಪ್ರಮುಖ ಸ್ಥಾನಗಳಲ್ಲಿ ತಾಂತ್ರಿಕ ತಜ್ಞರು ಇಲ್ಲದಿರುವುದು, ವ್ಯವಸ್ಥಾಪಕ ನಿರ್ದೇಶಕರಿಂದ ಆರಂಭವಾಗಿ ಮುಖ್ಯ ಹುದ್ದೆಗಳಲ್ಲಿ ಆಡಳಿತದ ಅನುಭವ, ತಾಂತ್ರಿಕತೆಯ ಜ್ಞಾನವಿಲ್ಲದವರೇ ತುಂಬಿರುವುದು, ಕೌಶಲ್ಯವಿರುವ ನೌಕರರೊಂದಿಗೆ ಕಾರ್ಖಾನೆಯನ್ನು ಮುನ್ನಡೆಸದಿರುವುದು ಇಂದಿನ ಎಲ್ಲಾ ಅವಾಂತರಗಳಿಗೆ ಕಾರಣವಾಗಿದೆ ಎಂದು ಹಲವರು ದೂರುತ್ತಿದ್ದಾರೆ.
ಹಣ ಲೂಟಿಗಷ್ಟೇ ಆದ್ಯತೆ:ಕಳೆದ ಇಪ್ಪತ್ತು ವರ್ಷಗಳಲ್ಲಿ ಕಾರ್ಖಾನೆ ಪುನಶ್ಚೇತನಕ್ಕೆ ಖರ್ಚು ಮಾಡಿರುವ ಹಣದಲ್ಲಿ ಎರಡು ಹೊಸ ಸಕ್ಕರೆ ಕಾರ್ಖಾನೆಗಳನ್ನೇ ತೆರೆಯಬಹುದಾಗಿತ್ತು ಎನ್ನುವುದು ತಜ್ಞರು ಮಂಡಿಸಿರುವ ಅಭಿಪ್ರಾಯವಾಗಿದೆ. ಅಧಿಕಾರಕ್ಕೆ ಬಂದವರೆಲ್ಲರೂ ಮೈಷುಗರ್ ಕಾರ್ಖಾನೆಯ ಪ್ರಗತಿಗೆ ಶ್ರಮಿಸದೆ ಹಣ ಲೂಟಿ ಹೊಡೆಯುವುದಕ್ಕೇ ಆದ್ಯತೆ ನೀಡಿದ್ದರಿಂದ ಎರಡು ದಶಕಗಳಿಂದ ಕಾರ್ಖಾನೆ ನಷ್ಟದಿಂದ ಮೇಲೇಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಮುಂದೆಯೂ ಆಡಳಿತ ಇದೇ ರೀತಿ ನಡೆದರೆ ನಷ್ಟದಿಂದ ಪಾರಾಗಲು ಎಂದಿಗೂ ಸಾಧ್ಯವಾಗುವುದೂ ಇಲ್ಲ.