ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಎಂ.ಸಿ.ಸಿ ಬ್ಯಾಂಕ್ ಮಂಗಳೂರು ಆಡಳಿತ ಕಚೇರಿಯಲ್ಲಿ ಪರಮಪೂಜ್ಯ ಪೋಪ್ ಫ್ರಾನ್ಸಿಸ್ ಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಫಾ.ಮುಲ್ಲರ್ಸ್ ಸಂಸ್ಥೆಯ ನಿಯೋಜಿತ ನೀರ್ದೇಶಕ ವಂ. ಪೌಸ್ತಿನ್ ಲೋಬೊ ಅವರು ಪೋಪ್ ಫ್ರಾನ್ಸಿಸ್ ಅವರ ಆತ್ಮಕ್ಕೆ ಗೌರವ ಸಲ್ಲಿಸಿ, ಹಲವಾರು ಸಂದರ್ಭಗಳಲ್ಲಿ ಪೋಪ್ ಆವರೊಂದಿಗಿನ ಭೇಟಿಯನ್ನು ನೆನಪಿಸಿಕೊಂಡರು. ಪೋಪ್ ಪ್ರಾನ್ಸಿಸ್ ಅವರು ದ್ವನಿಯಿಲ್ಲದವರ ದ್ವನಿ. ಪ್ರಪಂಚದಾದ್ಯಂತ ಯುದ್ಧಗಳು ಮತ್ತು ಸಂಘರ್ಷಗಳಿಂದಾಗಿ ಬಳಲುತ್ತಿರುವ ಮಾನವ ಕುಲದ ಬಗ್ಗೆ ಪೋಪ್ ಅವರು ಆಳವಾದ ಸಹಾನುಭೂತಿಯನ್ನು ಹೊಂದಿದ್ದರು. ಅವರು ಜನರಲ್ಲಿ ಅಂತರ್ ಧರ್ಮೀಯ ಸಾಮರಸ್ಯವನ್ನು ಪ್ರತಿಪಾದಿಸಿದರು ಮತ್ತು ಶಾಂತಿಯನ್ನು ತರಲು ಬಯಸಿದರು. ಅವರು ಮಾನವಕುಲದ ಸುಧಾರಣೆಗಾಗಿ ನಿಜವಾದ ಅರ್ಥದಲ್ಲಿ ಶ್ರಮಿಸುವ ಜಾಗತಿಕ ವ್ಯಕ್ತಿತ್ವ (ವಿಶ್ವ ಮಾನವ) ಆಗಿದ್ದರು. ಅವರ ನಿಧನದಿಂದಾಗಿ ಜಗತ್ತು ಅನಾಥವಾಗಿದೆ ಎಂದರು.
ಬ್ಯಾಂಕಿನ ನಿರ್ದೇಶಕಿ ಐರಿನ್ ರೆಬೆಲ್ಲೊ ಅವರು ಪೋಪ್ ಫ್ರಾನ್ಸಿಸ್ ಅವರು ಸಾಗಿದ ಹಾದಿಯನ್ನು ಪ್ರಸ್ತುತಪಡಿಸಿದರು.ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಅವರು ಬ್ಯಾಂಕಿನ ಎಲ್ಲ ನಿರ್ದೇಶಕರು, ಗ್ರಾಹಕರು ಮತು ಸಿಬ್ಬಂದಿ ಪರವಾಗಿ ಪರಮಪೂಜ್ಯ ಪೋಪ್ ಫ್ರಾನ್ಸಿಸ್ ಅವರ ಭಾವಚಿತ್ರಕ್ಕೆ ಪುಷ್ಪಗುಚ್ಛ ಅರ್ಪಿಸುವ ಮೂಲಕ ಗೌರವ ಸಲ್ಲಿಸಿದರು. ವಂ. ಪೌಸ್ತಿನ್ ಲೋಬೊ ಮತ್ತು ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ ಪುಷ್ಪಗುಚ್ಛ ಅರ್ಪಿಸುವ ಮೂಲಕ ಗೌರವ ಸಲ್ಲಿಸಿದರು.
ಬ್ಯಾಂಕಿನ ಎಲ್ಲ ನಿರ್ದೇಶಕರು, ಅಡಳಿತ ಕಚೇರಿ ಮತ್ತು ಸಂಸ್ಥಾಪಕ ಶಾಖೆಯ ಸಿಬ್ಬಂದಿ ಹಾಜರಿದ್ದರು. ಮಹಾಪ್ರಬಂಧಕ ಸುನಿಲ್ ಮಿನೆಜಸ್ ವಂದಿಸಿ, ಹಿರಿಯ ಪ್ರಬಂಧಕ ಡೆರಿಲ್ ಲಸ್ರಾದೊ ನಿರೂಪಿಸಿದರು.