ಸಾರಾಂಶ
- ದೃಶ್ಯಕಲಾ ಕಾಲೇಜಿನ ವಜ್ರ ಮಹೋತ್ಸವ; ''''ದೃಶ್ಯಕಲೆಯ ಬಹುಮುಖಿ ಆಯಾಮಗಳು'''' ರಾಜ್ಯಮಟ್ಟದ ವಿಚಾರ ಸಂಕಿರಣ
- - - ಕನ್ನಡಪ್ರಭ ವಾರ್ತೆ ದಾವಣಗೆರೆದೃಶ್ಯಕಲೆಗೆ ಸಂಬಂಧಿಸಿದಂತೆ ಬಹುತೇಕ ನಮ್ಮೆಲ್ಲರ ಯಾವುದೇ ಮಾತು, ಬರಹ, ಕಲಾಕೃತಿ ಅಭಿವ್ಯಕ್ತಿಗಳು ಎಲ್ಲವೂ ನಮ್ಮವಲ್ಲ. ನಮ್ಮ ಹಿಂದಿನವರ, ಸಮಕಾಲೀನರ ಕೊಡುಗೆಗಳ ಪ್ರಭಾವದ ಫಲಗಳು ಅವಾಗಿವೆ. ಯಾವುದನ್ನು ಹಿಂದೆಂದೂ ಮಾಡಿರುವುದಿಲ್ಲವೋ, ಅದು ನಮ್ಮದು. ಈ ಹಿಂದೆ ಆಗಿರುವ ಯಾವುದನ್ನು ನಾವು ಕೂಡ ಮುಂದುವರಿಸಿಕೊಂಡು ಹೋಗಿರುತ್ತೇವೋ, ಅದು ನಮ್ಮದಲ್ಲ ಎಂದು ವಿಮರ್ಶಕ ಕೆ.ವಿ. ಸುಬ್ರಹ್ಮಣ್ಯ ಹೇಳಿದರು.
ನಗರದ ದೃಶ್ಯಕಲಾ ವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ದೃಶ್ಯಕಲಾ ಮಹಾವಿದ್ಯಾಲಯದ ವಜ್ರ ಮಹೋತ್ಸವ ಅಂಗವಾಗಿ ದಾವಣಗೆರೆ ವಿ.ವಿ. ಸಹಯೋಗದಲ್ಲಿ ''''ದೃಶ್ಯ ಕಲೆಯ ಬಹುಮುಖಿ ಆಯಾಮಗಳು'''' ವಿಷಯ ಕುರಿತು ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕಲೆಗೆ ಯಾವುದೇ ಅರ್ಥ ಹುಡುಕಲು ಆಗುವುದಿಲ್ಲ. ಅರ್ಥ ಇರುವುದು ಪದಗಳಿಗೆ ಹೊರತು ಕಲೆಗಲ್ಲ. ಯಾಕೆಂದರೆ ಕಲೆಯು ಅರ್ಥ ಮೀರಿ ಅಭಿವ್ಯಕ್ತಗೊಳಿಸುವ ಒಂದು ಸಾಧನವಾಗಿದೆ. ಸಮಾಜಕ್ಕೆ ಎಲ್ಲ ತೆರನಾದ ಕಲೆಗಳನ್ನು ಪ್ರೋತ್ಸಾಹಿಸುವ ಪರಿಜ್ಞಾನ ಬೆಳೆಯಬೇಕಿದೆ ಎಂದರು.
ನಮಗೆ ಪ್ರಭಾವದ ಆತಂಕಗಳು ಇವೆ. ನಮ್ಮತನ, ಅನನ್ಯತೆ ಸಾಧಿಸಲು ನಮ್ಮದೇ ಗುರುತು, ಸಹಿ ಹಾಕುವ ಪರಿಪಾಠ ಬೆಳೆಸಿಕೊಂಡೆವು. ನಮ್ಮ ಗುರುತನ್ನು ಸಾಧಿಸುವ ಹಾದಿಗಳಲ್ಲಿ ಹಲವು ಹೊಸತನ್ನು ಹುಡುಕುತ್ತೇವೆ. ಹೊಸತನ ಲೇಪಿಸಲು ಪ್ರಯತ್ನಿಸುತ್ತೇವೆ. ಈಗಾಗಲೇ ಇರುವ ಸಾಧ್ಯತೆ, ಸಾಧನಗಳಿಗೆ ಹೊಸ ಆಯಾಮ ನೀಡುವ ಸಾಹಸ ಕ್ರಮಗಳನ್ನು ಅನ್ವೇಷಿಸುತ್ತೇವೆ. ತಮ್ಮ ಶ್ರಮ, ಆಸಕ್ತಿಗಳ ಕಾರಣ ಸಾವಿರಾರು ವರ್ಷಗಳ ಹಿಂದಿನ ಆದಿಮ ಕಲೆಯ ಪ್ರಭಾವಳಿಯಿಂದಲೇ ವಿವಿಧ ಕಲಾಪ್ರಕಾರಗಳಲ್ಲಿ ಸಾಧಿಸುವವರು ನಮ್ಮ ನಡುವೆ ಇದ್ದಾರೆ ಎಂದರು.ದಾವಣಗೆರೆ ವಿ.ವಿ.ಯ ಪರೀಕ್ಷಾಂಗ ಕುಲಸಚಿವ ಪ್ರೊ. ಸಿ.ಕೆ. ರಮೇಶ್ ಅಧ್ಯಕ್ಷತೆ ವಹಿಸಿ, ದೃಶ್ಯಕಲಾ ಮಹಾವಿದ್ಯಾಲಯದ ಪರಿಸರ ಬಹಳ ಸುಂದರವಾಗಿದೆ. ಇಲ್ಲಿ ಕಲಿಯಲು ಬಂದ ಹೆಚ್ಚಿನ ವಿದ್ಯಾರ್ಥಿಗಳು ಈ ಕ್ಷೇತ್ರವನ್ನೇ ಇಷ್ಟಪಟ್ಟು ಬಂದವರು. ಕಲಾವಿದರ ಮನಸ್ಸು ರಿಲ್ಯಾಕ್ಸ್ ಮೂಡ್‌ನದ್ದು. ಇಂದು ಕಲಾವಿದರು ಸಾಮಾನ್ಯ ಸಮಾಜದ ನಡುವೆ ಒಂದು ಕೊಂಡಿ ಬೆಳೆಯಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗಾಯತ್ರಿ ದೇಸಾಯಿ ಅವರನ್ನು ಸನ್ಮಾನಿಸಲಾಯಿತು. ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಹಿರಿಯ ಕಾರ್ಯಕ್ರಮ ಅಧಿಕಾರಿ ಟಿ.ಎನ್. ಕೃಷ್ಣಮೂರ್ತಿ, ಕಾರ್ಯಕ್ರಮ ಸಂಚಾಲಕ ಡಾ.ಸತೀಶ್ ಕುಮಾರ್ ಪಿ.ವಲ್ಲೆಪುರೆ, ಬೋಧನಾ ಸಹಾಯಕ ದತ್ತಾತ್ರೇಯ ಎನ್. ಭಟ್ಟ, ರಂಗನಾಥ್ ಕುಲಕರ್ಣಿ ಇತರರು ಇದ್ದರು.- - -
(ಬಾಕ್ಸ್-1)* ಕಲಾ ಕ್ಷೇತ್ರ ವಿಶಾಲವಾಗಿದೆ: ಗಾಯತ್ರಿ ದೇಸಾಯಿ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಪುರಸ್ಕೃತ ಕಲಾವಿದೆ ಗಾಯತ್ರಿ ದೇಸಾಯಿ ಮಾತನಾಡಿ, ಕಲಾ ಕ್ಷೇತ್ರ ಸಾಕಷ್ಟು ವಿಶಾಲವಾಗಿದೆ. ಕಲೆಯಲ್ಲಿ ವಿಶೇಷ ಸಾಧನೆ ಮಾಡಬೇಕಾದರೆ ಸತತ ಪರಿಶ್ರಮ, ನಿರಂತರ ತೊಡಗಿಕೊಳ್ಳುವಿಕೆ, ಪ್ರಾಮಾಣಿಕ ಅಭಿವ್ಯಕ್ತಿ, ಪ್ರವೃತ್ತಿ ಬಹಳ ಮುಖ್ಯ. ನಾನು ಇಂದು ಈ ರೀತಿ ಗುರುತಿಸಿಕೊಂಡಿದ್ದೇನೆಂದರೆ ಅದಕ್ಕೆ ಮುಖ್ಯ ಕಾರಣರು ನನ್ನ ಕಲಾಗುರುಗಳು. ದಿ।। ಡಿ.ವಿ. ಹಾಲಭಾವಿ, ದಿ। ಎಂ.ವಿ.ಮಿಣಜಿಗಿ, ದಿ।। ಟಿ.ಪಿ.ಅಕ್ಕಿ ಅವರ ಕಲಾ ಸಾಧನೆ ನನಗೆ ಆದರ್ಶವಾಗಿದೆ ಎಂದರು.- - -
(ಬಾಕ್ಸ್-2) * ಸಮಯದ ಮಹತ್ವ ಅರಿಯಿರಿ: ಡಾ.ಜಯರಾಜ ದೃಶ್ಯಕಲಾ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಎಂ.ಜಯರಾಜ ಚಿಕ್ಕಪಾಟೀಲ ಮಾತನಾಡಿ, ಸಮಯದ ಮಹತ್ವ ಅರಿತುಕೊಂಡು ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯಕ್ಕಾಗಿ ಪ್ರಭುದ್ಧರು ಹೇಳುವ ಮಾತುಗಳನ್ನು ಕೇಳಬೇಕು. ಆ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಿದೆ. ನಾವು ಕಲಿತ ವಿದ್ಯಾಭ್ಯಾಸದ ಜತೆ ಇಂತಹ ಬಹುಮುಖಿ ಆಯಾಮಗಳುಳ್ಳ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡು ಭವಿಷ್ಯದ ಅಡಿಪಾಯ ಭದ್ರಪಡಿಸಿಕೊಳ್ಳಬೇಕು ಎಂದು ತಿಳಿಸಿದರು.- - -
-19ಕೆಡಿವಿಜಿ33.ಜೆಪಿಜಿ:ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ನಡೆದ ದೃಶ್ಯ ಕಲೆಯ ಬಹುಮುಖಿ ಆಯಾಮಗಳು ವಿಷಯ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ವಿಮರ್ಶಕ ಕೆ.ವಿ.ಸುಬ್ರಹ್ಮಣ್ಯ ಉದ್ಘಾಟಿಸಿದರು.