ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ವಿಶ್ವಗುರು ಶ್ರೀ ಬಸವೇಶ್ವರ ಜಯಂತಿಯನ್ನು ಮೂರು ದಿನಗಳ ಕಾಲ ವೈಭವದಿಂದ ಆಚರಿಸಲಾಗುತ್ತಿದ್ದು ಈ ಸಂಬಂಧ ಸೋಮವಾರ ಸಾರ್ವಜನಿಕರಿಗೆ ವಿವಿಧ ಸ್ಫರ್ಧೆಗಳನ್ನು ಏರ್ಪಡಿಲಾಗಿತ್ತು.ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮಿಜಿ, ಜಯಂತಿಗಳು ಅರ್ಥಪೂರ್ಣವಾಗಿರಬೇಕು. ಮಹಾತ್ಮರ ಆದರ್ಶಗಳು ಅನುಕರಿಣೀಯವಾಗಿರಬೇಕು. ನಮ್ಮ ಮಕ್ಕಳಿಗೆ ಸಿನಿಮಾ ನಟ, ನಟಿಯರೇ ಆದರ್ಶವಾಗಬಾರದು. ಸತ್ಯ, ತ್ಯಾಗ, ಕರುಣೆ, ಅಹಿಂಸೆಗಳನ್ನು ಬದುಕಿನ ಉಸಿರಾಗಿಸಿಕೊಂಡ ಶಿವಶರಣರ ನಡೆ ಆದರ್ಶಪ್ರಾಯವಾಗಬೇಕು. ಅಂತಹ ಮಹಾಶರಣರ, ಮಹಾಪುರುಷರ ಆದರ್ಶಗಳನ್ನು ನೆನಪಿಸುವ ನಿಟ್ಟಿನಲ್ಲಿ ಅವರನ್ನು ಆದರ್ಶವಾಗಿಟ್ಟುಕೊಳ್ಳುವುದಕ್ಕೆ ಶ್ರೀಮಠದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ಶ್ರೀ ಬಸವಲಿಂಗದೇವರು ಮಾತನಾಡಿ, ಬಸವ ಜಯಂತಿ ಅಂಗವಾಗಿ ಶ್ರೀ ಮಠದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದು ಜಯಂತಿಗೆ ಬಣ್ಣ ಬಂದಿದೆ. ಇಂದು ವಿಶ್ವದಾದ್ಯಂತ ಬಸವ ಜಯಂತಿಯನ್ನು ಆಚರಿಸಲಾಗುತ್ತದೆ. ಕರ್ನಾಟಕ ಸರ್ಕಾರವು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಪ್ರಥಮ ಬಸವ ಜಯಂತಿಯನ್ನು ಆಚರಿಸಿದ ಕೀರ್ತಿ ಶ್ರೀಮುರುಘಾಮಠದ ಶಾಖಾ ಮಠವಾದ ದಾವಣಗೆರೆಯ ಶ್ರೀ ವಿರಕ್ತ ಮಠಕ್ಕೆ ಸಲ್ಲುವಂತದ್ದಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ವಚನ ಕಂಠಪಾಠ ಸ್ಪರ್ಧೆಯಲ್ಲಿ ಸುಮಾರು 85 ಸ್ಪರ್ಧಿಗಳು, 12ನೇ ಶತಮಾನದ ಬಸವಾದಿ ಶಿವಶರಣರ ವೇಷಭೂಷಣ ಸ್ಪರ್ಧೆಯಲ್ಲಿ 42 ಸ್ಪರ್ಧಿಗಳು ಹಾಗೂ ರಂಗೋಲಿ ಸ್ಪರ್ಧೆಯಲ್ಲಿ 45 ಮಹಿಳೆಯರು ಪಾಲ್ಗೊಂಡಿದ್ದರು. ಉಮೇಶ್ ಪತ್ತಾರ್ ಪ್ರಾರ್ಥಿಸಿದರೆ, ಸಿದ್ದೇಶ್ ನಿರೂಪಿಸಿದರು. ಜ್ಞಾನಮೂರ್ತಿ ವಂದಿಸಿದರು.