ಸಾರಾಂಶ
ಇಂದು ತಾಲೂಕಿನಾದ್ಯಂತ ಎಲ್ಲ ಗ್ರಾಪಂನಲ್ಲಿ ಸ್ವಚ್ಛ ವಾಹಿನಿ ಮೂಲಕ ಕಸ ಸಂಗ್ರಹಣೆಗೆ ಮಾಡಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಂಗ್ರಹಿಸಲಾಗುತ್ತಿದೆ
ನರಗುಂದ: ಗ್ರಾಮದ ಜನರ ಆರೋಗ್ಯದ ದೃಷ್ಟಿಯಿಂದ ಪ್ರತಿ ಗ್ರಾಪಂನಲ್ಲಿ ಕಸ ಸಮರ್ಪಕ ನಿರ್ವಹಣೆ ಮಾಡುವುದು ಅಗತ್ಯ ಎಂದು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಕೆ. ಇನಾಮದಾರ ಹೇಳಿದರು.
ಅವರು ಬುಧವಾರ ಪಟ್ಟಣದ ತಾಪಂ ಸಂಭಾಗಣದಲ್ಲಿ ನಡೆದ ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಯೋಜನೆಯಡಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕದ ಸ್ವಚ್ಛ ವಾಹಿನಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಪಂನಲ್ಲಿ ಮಹಿಳೆಯರಿಂದ ಕಸ ವಿಲೇವಾರಿ ಕಾರ್ಯ ಕೈಗೊಳ್ಳಲಾಗುತ್ತದೆ. ಸ್ವಸಹಾಯ ಸಂಘದ ಮಹಿಳಾ ಒಕ್ಕೂಟದಿಂದ ಪ್ರತಿ ಗ್ರಾಪಂ ತಲಾ ಒಬ್ಬ ಮಹಿಳಾ ಚಾಲಕಿ ಹಾಗೂ 3 ಜನ ಕಸ ಸಂಗ್ರಹಗಾರರನ್ನು ಆಯ್ಕೆ ಮಾಡಿ ಜಿಲ್ಲಾ ಮಟ್ಟದಲ್ಲಿ ತರಬೇತಿ ನೀಡಿ ಡ್ರೈವಿಂಗ್ ಲೈಸೆನ್ಸ್ ನೀಡಲಾಗಿದೆ ಎಂದರು.ಇಂದು ತಾಲೂಕಿನಾದ್ಯಂತ ಎಲ್ಲ ಗ್ರಾಪಂನಲ್ಲಿ ಸ್ವಚ್ಛ ವಾಹಿನಿ ಮೂಲಕ ಕಸ ಸಂಗ್ರಹಣೆಗೆ ಮಾಡಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಂಗ್ರಹಿಸಲಾಗುತ್ತಿದೆ. ಅಲ್ಲಿಂದ ಒಣ ಕಸ, ಹಸಿ ಕಸ ಹಾಗೂ ಪ್ಲಾಸ್ಟಿಕ್‌ಗಳನ್ನು ಬೇರ್ಪಡಿಸಲಾಗುತ್ತದೆ. ಇದರಿಂದ ಗ್ರಾಮ ಸ್ವಚ್ಛತೆಯ ಜತೆಗೆ ಆರೋಗ್ಯಯುತ ಜೀವನಕ್ಕೆ ಸಹಕಾರಿಯಾಗಲಿದೆ ಎಂದರು.
ಗ್ರಾಮೀಣ ಉದ್ಯೋಗ ಖಾತ್ರಿಯ ಸಹಾಯಕ ನಿರ್ದೇಶಕ ಸಂತೋಷ ಪಾಟೀಲ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕಿ ಕೃಷ್ಣಮ್ಮ ಹಾದಿಮನಿ, ಜಿಲ್ಲಾ ಸಮಾಲೋಚಕ ಕೃಷ್ಣ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಎನ್.ಆರ್.ಎಲ್.ಎಂ ಸಿಬ್ಬಂದಿ, ಸ್ವಚ್ಛ ವಾಹಿನಿಯ ಚಾಲಕಿಯರು, ಕಸ ಸಂಗ್ರಹಗಾರರು ಸೇರಿದಂತೆ ಇತರರು ಇದ್ದರು.