ಅಲೆಮಾರಿ, ಅರೆ ಅಲೆಮಾರಿ ಜನಾಂಗ ಅಭಿವೃದ್ಧಿಗೆ ಕ್ರಮ: ಕವಿತಾ

| Published : Dec 06 2024, 08:56 AM IST

ಅಲೆಮಾರಿ, ಅರೆ ಅಲೆಮಾರಿ ಜನಾಂಗ ಅಭಿವೃದ್ಧಿಗೆ ಕ್ರಮ: ಕವಿತಾ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಅಲೆಮಾರಿ/ ಅರೆ ಅಲೆಮಾರಿ ಜನಾಂಗದವರ ಸರ್ವತೋಮುಖ ಅಭಿವೃದ್ಧಿಗೆ ಪರಿಣಾಮಕಾರಿಯಾಗಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಪಿ.ಪಿ.ಕವಿತಾ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಅಲೆಮಾರಿ/ ಅರೆ ಅಲೆಮಾರಿ ಜನಾಂಗದವರ ಸರ್ವತೋಮುಖ ಅಭಿವೃದ್ಧಿಗೆ ಪರಿಣಾಮಕಾರಿಯಾಗಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಪಿ.ಪಿ.ಕವಿತಾ ತಿಳಿಸಿದ್ದಾರೆ.

ನಗರದ ತಮ್ಮ ಕಚೇರಿಯಲ್ಲಿ ಅಲೆಮಾರಿ/ ಅರೆ ಅಲೆಮಾರಿ ಜನಾಂಗದವರಿಗೆ ಸೌಲಭ್ಯ ಹಾಗೂ ಮೀಸಲಾತಿ ಕಲ್ಪಿಸುವ ಸಂಬಂಧ ಗುರುವಾರ ನಡೆದ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾಹಿತಿ ನೀಡಿದರು.

ಕೊಡಗು ಜಿಲ್ಲೆಯಲ್ಲಿ ಅಲೆಮಾರಿ/ ಅರೆ ಅಲೆಮಾರಿ ಜನಾಂಗಕ್ಕೆ ಸೇರಿದ ಗೊಲ್ಲ, ಜೋಗಿ ಹಾಗೂ ಹಾವಾಡಿಗರ ಜಾತಿಗಳು ಪ್ರಮುಖವಾಗಿದ್ದು, ಈ ಸಮಾಜಗಳ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ನೀಡುವುದು. ಕಳೆದ ವರ್ಷ 30 ವಿದ್ಯಾರ್ಥಿಗಳಿಗೆ 2.13 ಲಕ್ಷ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

ಅರಿವು ಕಾರ್ಯಕ್ರಮದಡಿ 2021-22 ನೇ ಸಾಲಿನಲ್ಲಿ ಮಡಿಕೇರಿ ತಾಲೂಕಿನ ಅಯ್ಯಂಗೇರಿ ಗ್ರಾಮದಲ್ಲಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ. 2023-24ನೇ ಸಾಲಿಗೆ ಮನೆ ನಿರ್ಮಾಣಕ್ಕಾಗಿ 6 ಮನೆಗಳ ಅರ್ಜಿ ಆಯ್ಕೆ ಮಾಡಿ ಅನುಮೋದನೆಗೆ ಕಳುಹಿಸಲಾಗಿದೆ. ಹಾಗೆಯೇ ಮೂಲ ಸೌಲಭ್ಯಕ್ಕೆ ಒತ್ತು ನೀಡುವಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ, ಕುಡಿಯುವ ನೀರು ಟ್ಯಾಂಕ್ ನಿರ್ಮಿಸಲಾಗಿದೆ. 20 ಲಕ್ಷ ರು. ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಿಸಲು ಹಣ ಬಿಡುಗಡೆಯಾಗಿದೆ. ಸಂಪಾಜೆ ಬಳಿಯ ಕಲ್ಲಾಳ ಗ್ರಾಮದಲ್ಲಿ ಹಾಗೂ ಶನಿವಾರಸಂತೆಯ ತ್ಯಾಗರಾಜ ಕಾಲೋನಿಯ ಹಾವಾಡಿಗರ ಕಾಲೋನಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಕವಿತಾ ವಿವರಿಸಿದರು.

ಡಿ.ದೇವರಾಜ ಅರಸು ನಿಗಮದ ವ್ಯವಸ್ಥಾಪಕಿ ಮಹಾದೇವಿ ಮಾತನಾಡಿ, ಸ್ವಯಂ ಉದ್ಯೋಗ ಸಾಲ ಯೋಜನೆ, ಬ್ಯಾಂಕ್ ಸಹಯೋಗದೊಂದಿಗೆ ಸಾಲ ಯೋಜನೆ, ಗಂಗಾ ಕಲ್ಯಾಣ ಹಾಗೂ ಸ್ವಾವಲಂಬಿ ಸಾರಥಿ ಯೋಜನೆ ಇವುಗಳನ್ನು ಬಳಸಿಕೊಳ್ಳುವಂತಾಗಬೇಕು ಎಂದು ಕೋರಿದರು.

ಅಲೆಮಾರಿ/ ಅರೆ ಅಲೆಮಾರಿ ಸಮುದಾಯದ ಜನರು ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದೆ ಬರಬೇಕು ಎಂದರು.

ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿರುತ್ತದೆ. (5 ವರ್ಷದ ಒಳಗಿರಬೇಕು), ವಯೋಮಿತಿ 18-55 ವರ್ಷಗಳ ವಯೋ ಮಿತಿಯಲ್ಲಿರಬೇಕು. ಸ್ವಾವಲಂಬಿ ಸಾರಥಿ ಯೋಜನೆಯಡಿ ಅರ್ಜಿದಾರರು 21-45 ವರ್ಷ ವಯೋಮಿತಿಯಲ್ಲಿರಬೇಕು. ಅರ್ಜಿದಾರರು ತಮ್ಮ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯನ್ನು ಆಧಾರ್ ಸಂಖ್ಯೆಗೆ ಜೋಡಣೆ ಮಾಡಿರಬೇಕು ಎಂದು ಮಹದೇವಿ ಹೇಳಿದರು.

ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ರು.98 ಸಾವಿರ ಮತ್ತು ನಗರ ಪ್ರದೇಶದವರಿಗೆ ರು.1.20 ಲಕ್ಷ ಮಿತಿಯೊಳಗಿರಬೇಕು. ಆಯ್ಕೆ ಮಾಡುವಾಗ ಸ್ವಯಂ ಉದ್ಯೋಗ ಯೋಜನೆಯಲ್ಲಿ ಮಹಿಳೆಯರಿಗೆ ಶೇ.50 ಹಾಗೂ ಉಳಿದ ಯೋಜನೆಗಳಲ್ಲಿ ಮಹಿಳೆಯರಿಗೆ ಶೇ.33, ವಿಕಲಚೇತನರಿಗೆ ಶೇ.5 ಹಾಗೂ ತೃತೀಯ ಲಿಂಗಿಗಳಿಗೆ ಶೇ.1 ಮೀಸಲಾತಿ ಇರಿಸಿದೆ. ಗಂಗಾ ಕಲ್ಯಾಣ ಯೋಜನೆ, ಈ ಯೋಜನೆಯಲ್ಲಿ ಕನಿಷ್ಠ 01 ಎಕರೆಯಿಂದ ಗರಿಷ್ಠ 5 ಎಕರೆ ಜಮೀನು ಹೊಂದಿದ್ದು, ಸಣ್ಣ ಅಥವಾ ಅತಿ ಸಣ್ಣ ರೈತರಾಗಿರಬೇಕು ಎಂದು ಅವರು ಮಾಹಿತಿ ನೀಡಿದರು.

ಸಮಿತಿ ಸದಸ್ಯರಾದ ಭೀಮಯ್ಯ, ಯಮುನಾ ಗಿರೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಶಿವಶಂಕರ ಮತ್ತಿತರರಿದ್ದರು.