ಗದಗ: ನಗರದ ವ್ಯಾಪ್ತಿಯ ಘೋಷಿತ ಹಾಗೂ ಅಘೋಷಿತ ಕೊಳಗೇರಿ ಪ್ರದೇಶದ ಜನರು ಕುಡಿಯುವ ನೀರು, ರಸ್ತೆ, ಯುಜಿಡಿ ಶೌಚಾಲಯ ಸೇರಿದಂತೆ ಮುಂತಾದ ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ನಗರಸಭೆಯ ಬಜೆಟ್‌ನಲ್ಲಿ ಕೊಳಗೇರಿ ಪ್ರದೇಶಗಳ ಅಭಿವೃದ್ಧಿಗಾಗಿ ಪ್ರತ್ಯೇಕ ಅನುದಾನ ಮೀಸಲಿಡಲು ಕ್ರಮ ಕೈಗೊಳ್ಳಲಾಗುವುದೆಂದು ನಗರಸಭೆ ಪೌರಾಯುಕ್ತ ರಾಜಾರಾಮ ಎಸ್. ಪವಾರ ತಿಳಿಸಿದರು.
ಸ್ಥಳೀಯ ನಗರ ಸಭೆಯಲ್ಲಿ ಸ್ಲಂ ಪ್ರದೇಶಗಳ ಸಮಸ್ಯೆ ಹಾಗೂ ಅಭಿವೃದ್ಧಿ ಕುರಿತು ನಡೆದ ಕುಂದುಕೊರತೆಗಳ ಆಲಿಕೆ ಸಭೆಯಲ್ಲಿ ಮಾತನಾಡಿದ ಅವರು, ಗದಗ ಜಿಲ್ಲಾ ಸ್ಲಂ ಸಮಿತಿಯಿಂದ ಸಲ್ಲಿಸಿರುವ ಹಕ್ಕೊತ್ತಾಯಗಳ ಕುರಿತು ಹಂತ- ಹಂತವಾಗಿ ಕೆಲಸ ಮಾಡಲಾಗುವುದು ಎಂದರು.ಈಗಾಗಲೇ 348 ಕುಟುಂಬಗಳ ಸಮೀಕ್ಷೆಯನ್ನು ನಗರಸಭೆಯಿಂದ ನಡೆಸಲಾಗಿದೆ. ಆದಷ್ಟು ಬೇಗನೆ ಮನೆಗಳ ವಿತರಣೆಗಾಗಿ ಸ್ಥಳೀಯ ಶಾಸಕರ ಜತೆಗೆ ಚರ್ಚೆ ನಡೆಸಲಾಗುವುದು. ಕೊಳಗೇರಿ ಪ್ರದೇಶಗಳಲ್ಲಿ ಬಯಲು ಶೌಚಾಲಯಕ್ಕೆ ಕಡಿವಾಣ ಹಾಕಲು ಸ್ವಚ್ಛ ಭಾರತ ಯೋಜನೆಡಿಯಲ್ಲಿ ನಗರದ ಸ್ಲಂ ಪ್ರದೇಶಗಳ ಸಮೀಕ್ಷೆ ಕಾರ್ಯವನ್ನು ಕೈಗೊಂಡು ಮನೆಗೊಂದು ಪ್ರತ್ಯೇಕ ಶೌಚಾಲಯ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು. ಸ್ಲಂ ಪ್ರದೇಶದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಹಕ್ಕುಪತ್ರಗಳನ್ನು ಪಡೆದುಕೊಂದು ನೋಂದಣಿ ಮಾಡಿಸಿಕೊಂಡಿರುವ ಕುಟುಂಬಗಳಿಗೆ ಫಾರ್ಮ್ ನಂ. 3 ನೀಡಲು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗುವುದೆಂದು ಭರವಸೆ ನೀಡಿದರು.
ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ್ ಆರ್. ಮಾನ್ವಿ, ಸಮಿತಿ ಉಪಾಧ್ಯಕ್ಷ ಅಶೋಕ ಕುಡತಿನ್ನಿ ಮಾತನಾಡಿದರು. ಸಹಾಯಕ ಕಾರ್ಯಪಾಲಕ ಅಭಿಯಂತರ ಲಕ್ಷ್ಮಣ ಎಂ. ಜೊಗದಂಡಕರ, ಪರಿಸರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಆನಂದ ಬದಿ, ಅಶೋಕ ಕುಸಬಿ, ಪುಷ್ಪಾ ಬಿಜಾಪೂರ, ಇಬ್ರಾಹಿಂ ಮುಲ್ಲಾ, ಮೌಲಾಸಾಬ ಗಚ್ಚಿ, ಶರಣಪ್ಪ ಸೂಡಿ, ಮೆಹಬೂಬಸಾಬ ಬಳ್ಳಾರಿ, ಸಲೀಂ ಹರಿಹರ, ಖಾಜಾಸಾಬ ಇಸ್ಮಾಯಿಲನವರ, ಹುಸೇನ ಮುಲ್ಲಾನವರ ಮುಂತಾದವರು ಇದ್ದರು.