ಹಲಗೂರು ಹೋಬಳಿ ಸೇರಿದಂತೆ ವಿವಿಧ ಗ್ರಾಮಗಳ ಸಾರ್ವಜನಿಕರು ವಿವಿಧ ಇಲಾಖೆಗಳ ಸಂಬಂಧಿಸಿದಂತೆ ಪ್ರಮುಖವಾಗಿ ನಿವೇಶನ ಮಂಜೂರು ಸೇರಿದಂತೆ ರಸ್ತೆ, ನಿವೇಶನ, ಕಂದಾಯ, ಆರೋಗ್ಯ, ಅರಣ್ಯ, ನೀರಾವರಿ, ವಿದ್ಯುತ್ ಸೇರಿದಂತೆ ಹಲವು ಸಮಸ್ಯೆಗಳ ಕುರಿತು 66ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ.
ಕನ್ನಡಪ್ರಭ ವಾರ್ತೆ ಹಲಗೂರು
ಪ್ರಜಾಸೇವಾ ಆಂದೋಲನದಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಶೀಘ್ರ ವಿಲೇವಾರಿಗೆ ಕ್ರಮ ವಹಿಸಲಾಗುವುದು ಎಂದು ತಹಸೀಲ್ದಾರ್ ಲೋಕೇಶ್ ತಿಳಿಸಿದರು.ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರಜಾಸೇನೆ ಆಂದೋಲನದಲ್ಲಿ ವಿವಿಧ ಇಲಾಖೆ ಕುರಿತು ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿ ತಕ್ಷಣವೇ ಅರ್ಜಿಗಳನ್ನು ಕಾನೂನು ಪ್ರಕಾರ ಅನುಷ್ಠಾನ ಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
ಹೋಬಳಿ ಸೇರಿದಂತೆ ವಿವಿಧ ಗ್ರಾಮಗಳ ಸಾರ್ವಜನಿಕರು ವಿವಿಧ ಇಲಾಖೆಗಳ ಸಂಬಂಧಿಸಿದಂತೆ ಪ್ರಮುಖವಾಗಿ ನಿವೇಶನ ಮಂಜೂರು ಸೇರಿದಂತೆ ರಸ್ತೆ, ನಿವೇಶನ, ಕಂದಾಯ, ಆರೋಗ್ಯ, ಅರಣ್ಯ, ನೀರಾವರಿ, ವಿದ್ಯುತ್ ಸೇರಿದಂತೆ ಹಲವು ಸಮಸ್ಯೆಗಳ ಕುರಿತು 66ಕ್ಕೂ ಹೆಚ್ಚು ಅರ್ಜಿ ಸಲ್ಲಿಸಿದ್ದಾರೆ ಎಂದರು.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ನಿರ್ಮಾಣ ಕಾಮಗಾರಿ ಕುಂಠಿತಗೊಂಡಿದೆ. ಕೂಡಲೇ ಅನುದಾನ ಬಿಡುಗಡೆ ಮಾಡಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಮನವಿ ಮಾಡಲಾಯಿತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಮಂಜೂರಾಗಿರುವ ಜಾಗದ ಹದ್ದುಬಸ್ತು ಮಾಡಿಕೊಟ್ಟು, ಕಾಂಪೌಂಡ್ ನಿರ್ಮಿಸಬೇಕು. ನೂತನ ಕಾಲೇಜು ಕಟ್ಟಡ ಉದ್ಘಾಟನೆಗೆ ಸಿದ್ಧವಾಗಿದೆ. ಶೀಘ್ರ ಉದ್ಘಾಟನೆ ನೆರವೇರಿಸುವಂತೆ ಕಾಲೇಜಿನ ಪ್ರಾಂಶುಪಾಲರು ಮನವಿ ಸಲ್ಲಿಸಿದರು.
ಭೀಮನಕಿಂಡಿ ಅರಣ್ಯ ಪ್ರದೇಶದಂಚಿನ ದಳವಾಯಿ ಕೋಡಿಹಳ್ಳಿ, ಬಾಳೆಹೊನ್ನಿಗ, ಜೂಗನಹಳ್ಳಿ, ಶಿವನೂರು (ವಡ್ಡರದೊಡ್ಡಿ), ಲಿಂಗಪಟ್ಟಣ ಹಾಗೂ ಬೆನಮನಹಳ್ಳಿ ಗ್ರಾಮಗಳಲ್ಲಿ ವನ್ಯಜೀವಿಗಳ ಹಾವಳಿ, ಅದರಲ್ಲೂ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಕೂಡಲೇ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಯಿತು.ಹಲಗೂರಿನಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಅವಶ್ಯಕತೆ ಇದ್ದು, ಸೂಕ್ತ ಜಾಗ ಗುರುತಿಸಿ ಶೀಘ್ರ ಆಸ್ಪತ್ರೆ ನಿರ್ಮಾಣ, ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸಬೇಕು. ವಿದ್ಯುತ್ ಕಂಬಗಳಿಗೆ ಜೋತುಬಿದ್ದ ಲೈನ್‌ಗಳನ್ನು ಕೂಡಲೇ ಸರಿಪಡಿಸುವಂತೆ ಚೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಲಾಯಿತು.
ಹಲಗೂರು ದೊಡ್ಡಕೆರೆ ಹದ್ದುಬಸ್ತು ಹಾಗೂ ಬಫರ್‌ಜೋನ್ ಗುರುತಿಸುವುದು, ಕೆರೆ ಅಭಿವೃದ್ಧಿ ಜೊತೆಗೆ ನೀರು ತುಂಬಿಸಲು ಮನವಿ ಮಾಡಲಾಯಿತು. ಜನಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಲು ಒತ್ತಾಯಿಸಲಾಯಿತು.ಗ್ರಾಪಂ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಸೆ.30ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಹ ನಿವೇಶನ ರಹಿತರು ಕೂಡಲೇ ಅರ್ಜಿ ಸಲ್ಲಿಸಬೇಕು. ಸ್ವೀಕರಿಸಿರುವ ಎಲ್ಲಾ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗಳ ಮೂಲಕ ಪರಿಶೀಲಿಸಿ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಒಂದು ವಾರದಲ್ಲಿ ಹೋಬಳಿಯ ವಿವಿಧ ಗ್ರಾಮಗಳಿಗೆ ಅಧಿಕಾರಿಗಳು ಮನೆ-ಮನೆಗೆ ತೆರಳಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಪಿಂಚಣಿ ಮಂಜೂರಾತಿ ಪತ್ರ ವಿತರಿಸಿರುವುದಾಗಿ ಹೇಳಿದರು.ವಿಧವಾ ವೇತನಕ್ಕೆ 36, ಸಂಧ್ಯಾ ಸುರಕ್ಷಾ ಯೋಜನೆಗೆ 24, ಇಂದಿರಾ ಗಾಂಧಿ ವೃದ್ಧಾಪ್ಯ ವೇತನಕ್ಕೆ 18 ಹಾಗೂ ಅಂಗವಿಕಲರ ವೇತನಕ್ಕೆ 6 ಮಂದಿ ಸೇರಿದಂತೆ ಒಟ್ಟು 84 ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಪತ್ರ ವಿತರಿಸಲಾಗಿದೆ. ನಾಡಕಚೇರಿಯಲ್ಲಿ 500ಕ್ಕೂ ಹೆಚ್ಚು ಅರ್ಜಿಗಳು ಇತ್ಯರ್ಥವಾಗಿದೆ. ಉಳಿದವುಗಳನ್ನು 15 ದಿನಗಳ ಒಳಗೆ ವಿಶೇಷವಾಗಿ ಕಾರ್ಯಗತ ಗೊಳಿಸಿ 422 ಅರ್ಜಿ ಇತ್ಯರ್ಥಗೊಳಿಸಿ ಇನ್ನು ಕೇವಲ 88 ಅರ್ಜಿಗಳನ್ನು ಅತಿ ಶೀಘ್ರ ಕಾರ್ಯಗತಗೊಳಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಇಒ ಶ್ರೀನಿವಾಸ್, ಬಿಇಒ ಇ.ವಿ. ಉಮಾ, ಎಇಇ ಪ್ರೇಮ್ ಕುಮಾರ್, ತಹಸೀಲ್ದಾರ್ ಗ್ರೇಡ್-2 ಭಾಗ್ಯಲಕ್ಷ್ಮಿ, ಆರ್‌ಎಫ್‌ಒ ಪ್ರಮೋದ್ ಕುಮಾರ್ ದೇವ್, ಸಬ್‌ರಿಜಿಸ್ಟ್ರಾರ್ ನಾಗರಾಜು, ಕೃಷಿ ಇಲಾಖೆ ಎಡಿ ಸಂದೀಪ್, ಎಇಇ ಹಿತೇಶ್, ಉಪ ತಹಸೀಲ್ದಾರ್ ಕೆ.ನಟರಾಜು, ಆರೋಗ್ಯ ಇಲಾಖೆ ಅಧಿಕಾರಿ ಡಾ.ಸಂಜಯ್, ಎಎಸ್ಐ ರಮೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.