ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಕ್ರಮ: ಸಚಿವ ಮಧು ಬಂಗಾರಪ್ಪ ಶ್ಲಾಘನೆ

| Published : Oct 23 2023, 12:17 AM IST

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಕ್ರಮ: ಸಚಿವ ಮಧು ಬಂಗಾರಪ್ಪ ಶ್ಲಾಘನೆ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಜ್ಞಾನರ್ಜನಗೆ ಹಾಗೂ ಅವರ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಕಿತ್ತೂರು ಕರ್ನಾಟಕ ಬೆಳಗಾವಿ ವಿಭಾಗದಲ್ಲಿ ಕೈಗೊಂಡ ಕ್ರಮಗಳನ್ನು ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಶ್ಲಾಘಿಸಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಜ್ಞಾನರ್ಜನಗೆ ಹಾಗೂ ಅವರ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಕಿತ್ತೂರು ಕರ್ನಾಟಕ ಬೆಳಗಾವಿ ವಿಭಾಗದಲ್ಲಿ ಕೈಗೊಂಡ ಕ್ರಮಗಳನ್ನು ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಶ್ಲಾಘಿಸಿದರು.

ಶನಿವಾರ ನಗರದ ಶಾಲಾ ಶಿಕ್ಷಣ ಇಲಾಖೆಯ ಕಿತ್ತೂರು ಕರ್ನಾಟಕ ಬೆಳಗಾವಿ ವಿಭಾಗದ ಆಯುಕ್ತರ ಕಚೇರಿಯಲ್ಲಿ ವಿಜ್ಞಾನದ ಚಿತ್ರಗಳನ್ನು ಸುಲಭವಾಗಿ ರಚಿಸಲು ಪೂರಕವಾದ ಮರ್ಗದರ್ಶಿ ಕಲಿಕಾ ವಿಡಿಯೋಗಳನ್ನು ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರ ಸೇವೆಗೆ ಶ್ರೇಷ್ಠ ಮಾನವ ಸಂಪನ್ಮೂಲ ಒದಗಿಸಲು ಕ್ರಿಯಾಶೀಲವಾಗಿ ಶಾಲಾ ಶಿಕ್ಷಣ ಬೋಧನಾ ವ್ಯವಸ್ಥೆ ರೂಪುಗೊಳ್ಳಲು ಇಲಾಖೆಯ ಎಲ್ಲ ಭಾಗಿದಾರರು ಶ್ರಮಿಸಬೇಕು ಎಂದರು.

ಸರ್ಕಾರಿ ಶಾಲೆಗಳ ಸಬಲೀಕರಣ ಮತ್ತು ಉನ್ನತೀಕರಣಕ್ಕೆ ರಾಜ್ಯ ಸರ್ಕಾರ ಮೊದಲ ಆದ್ಯತೆ ನೀಡಿದೆ. ಪದವಿ ಪೂರ್ವ, ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಪ್ರಧಾನವಾಗಿ ವಿಜ್ಞಾನದ ಅಧ್ಯಯನಕ್ಕೆ ಅನುಕೂಲವಾಗುವಂತೆ ಪ್ರೌಢ ಶಾಲೆಯ 8, 9 ಮತ್ತು 10ನೇ ತರಗತಿಗಳ ವಿಜ್ಞಾನ ವಿಷಯದ ಕಲಿಕಾ ಪಠ್ಯ ಕ್ರಮವನ್ನು ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮದಲ್ಲಿಯೂ ರೂಪಿಸಿ ವಿದ್ಯಾರ್ಥಿಗಳಿಗೆ ಒದಗಿಸಲು ಕ್ರಮಕೈಕೊಳ್ಳಲಾಗಿದೆ. ಇದರಿಂದ ಉನ್ನತ ವ್ಯಾಸಂಗದ ಸಂದರ್ಭದಲ್ಲಿ ವಿಜ್ಞಾನದ ಆಂಗ್ಲಭಾಷಾ ಸಂವಹನ ಸುಲಭವಾಗಲಿದೆ ಎಂದರು.

ಸರ್ಕಾರಿ ಮತ್ತು ಅನುದಾನಿತ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತವಾಗಿ ಪಠ್ಯಪುಸ್ತಕ, ಸಮವಸ್ತ್ರ, ಪೂರಕ ಪೌಷ್ಟಿಕ ಆಹಾರ ಮುಂತಾದವುಗಳನ್ನು ಪೂರೈಕೆ ಮಾಡುತ್ತಿದ್ದು, ಇದು ಸಾರ್ವಜನಿಕ ಅವಗಾಹನೆಗೆ ಮುಟ್ಟುವಲ್ಲಿ ಇಲಾಖಾ ಅಧಿಕಾರಿಗಳು ವ್ಯಾಪಕ ಪ್ರಚಾರ ಮಾಡಬೇಕು ಎಂದೂ ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವ್ಹಿ. ಸಂಕನೂರ ಮಾತನಾಡಿ, ವಿದ್ಯಾಕಾಶಿ ಎಂಬ ಗೌರವಕ್ಕೆ ಪಾತ್ರವಾಗಿರುವ ಧಾರವಾಡ ಜಿಲ್ಲೆಯ ಎಸ್ಸೆಸ್ಲೆಲ್ಲಿ ಫಲಿತಾಂಶ ಹೆಚ್ಚಿಸಲು ಶ್ರಮಿಸಬೇಕು ಎಂದರು.

ಖಾಸಗಿ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಗಳ ನೇಮಕಾತಿಗೆ ಸಚಿವರು ಸರ್ಕಾರದ ಮೂಲಕ ಅನುಮತಿ ಒದಗಿಸಬೇಕು ಎಂದು ಪ್ರೊ. ಸಂಕನೂರ ಮನವಿ ಮಾಡಿದರು.

ಶಾಲಾ ಶಿಕ್ಷಣ ಇಲಾಖೆಯ ಕಿತ್ತೂರು ಕರ್ನಾಟಕ ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತೆ ಜಯಶ್ರೀ ಶಿಂತ್ರಿ ಮಾತನಾಡಿ, ಎಸ್.ಎಸ್.ಎಲ್.ಸಿ. ಸೇರಿದಂತೆ ಒಟ್ಟು ಶಾಲಾ ಶಿಕ್ಷಣದ ಬೋಧನೆ ಕ್ರಿಯಾಪ್ರೇರಕವಾಗಲು ಹಾಗೂ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ವಿಭಾಗದ 9 ಜಿಲ್ಲೆಗಳ ಅಧಿಕಾರಿಗಳ ಸಭೆ ಜರುಗಿಸಿ ಅವರಿಗೆ ನಿರ್ದಿಷ್ಟ ನೀಲನಕ್ಷೆ ಒದಗಿಸಲಾಗಿದೆ. ನವೆಂಬರ್ ನಿಂದ 2024ರ ಫೆಬ್ರವರಿ ವರೆಗೆ ತಾವು ಎಲ್ಲ ಜಿಲ್ಲೆಗಳಲ್ಲಿ ಸರಣಿ ಸಭೆಗಳನ್ನು ಜರುಗಿಸಿ ನಿಖರವಾಗಿ ಪ್ರಗತಿ ಪರಿಶೀಲನೆ ನಡೆಸುವೆ ಎಂದರು.

ಜಿಲ್ಲೆಯ ಆಡಳಿತ ಡಿಡಿಪಿಐ ಎಸ್.ಎಸ್. ಕೆಳದಿಮಠ, ಅಭಿವೃದ್ಧಿ ಡಿಡಿಪಿಐ ಜಯಶ್ರೀ ಕಾರೇಕರ, ಹುಬ್ಬಳ್ಳಿ ಗ್ರಾಮೀಣ ಬಿಇಓ ಉಮೇಶ ಬಮ್ಮಕ್ಕನವರ, ಧಾರವಾಡ ಗ್ರಾಮೀಣ ಬಿಇಒ ಆರ್.ಆರ್. ಸದಲಗಿ, ಶಾಂತಾ ಮೀಸಿ ಇದ್ದರು.