ಕನ್ನಡಪ್ರಭ ವಾರ್ತೆ ಬಾಗಲಕೋಟೆಪ್ರೌಢಶಾಲಾ ಹಂತಕ್ಕೆ ಬರುವ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಣದ ಗುಣಮಟ್ಟ ಸುಧಾರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆಪ್ರೌಢಶಾಲಾ ಹಂತಕ್ಕೆ ಬರುವ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಣದ ಗುಣಮಟ್ಟ ಸುಧಾರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ ಹೇಳಿದರು.

ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಜರುಗಿದ ಪ್ರಾಥಮಿಕ ಶಾಲಾ ಮುಖ್ಯ ಗುರುಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರೌಢಶಾಲಾ ಹಂತಕ್ಕೆ ಬರುವ ಕೆಲವು ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಕಡಿಮೆ ಇರುವುದನ್ನು ಗಮನಿಸಲಾಗಿದೆ. ಹೀಗಾಗಿ ಪ್ರಾಥಮಿಕ ಹಂತದಿಂದಲೇ ಮಕ್ಕಳ ಮೂಲಭೂತ ಕಲಿಕಾ ಸಾಮರ್ಥ್ಯವನ್ನು ಬಲಪಡಿಸುವ ಅಗತ್ಯವಿದೆ. ತಳಮಟ್ಟದಿಂದಲೇ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿದಲ್ಲಿ ಮುಂದಿನ ಹಂತದಲ್ಲಿ ಮಕ್ಕಳ ಕಲಿಕೆಗೆ ಅನುಕೂಲವಾಗುವುದರೊಂದಿಗೆ ಎಸ್ಸೆಸ್ಸೆಲ್ಸಿ ಫಲಿತಾಂಶವೂ ಉತ್ತಮಗೊಳ್ಳಲಿದೆ ಎಂದರು.

ಕೇವಲ ಒಂದು ವರ್ಷ ಮಾತ್ರ ಉತ್ತಮ ಫಲಿತಾಂಶ ಬಂದರೆ ಸಾಲದು. ಪ್ರತಿ ವರ್ಷವೂ ಉತ್ತಮ ಫಲಿತಾಂಶ ದಾಖಲಿಸುವಂತಾಗಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳು, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಸರ್ಕಾರಿ ಶಾಲೆಗಳಿಗೆ ಬರುವ ಬಹುತೇಕ ಮಕ್ಕಳು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ಅಂತಹ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದಲ್ಲಿ ಅವರ ಭವಿಷ್ಯ ರೂಪುಗೊಳ್ಳುವುದರ ಜತೆಗೆ ಕುಟುಂಬದ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಲು ಸಾಧ್ಯವಾಗುತ್ತದೆ ಎಂದರು.ಶಿಕ್ಷಣದಿಂದ ಮಕ್ಕಳು ದೂರ ಉಳಿದರೆ, 12-13 ವರ್ಷಗಳಲ್ಲಿಯೇ ಕೆಲಸಕ್ಕೆ ಸೇರಿಸುವ ಪರಿಸ್ಥಿತಿ ಎದುರಾಗಬಹುದು. ಆದ್ದರಿಂದ ಮಕ್ಕಳನ್ನು ಶಾಲೆಯಲ್ಲಿ ಮುಂದುವರಿಸುವಂತೆ ಪಾಲಕರಿಗೆ ಮನವರಿಕೆ ಮಾಡಿಕೊಟ್ಟು, ಅವರ ಶಿಕ್ಷಣಕ್ಕೆ ಆದ್ಯತೆ ನೀಡುವಂತೆ ಶಿಕ್ಷಕರು ಪ್ರೇರೇಪಿಸಬೇಕು ಎಂದರು.

ಸಭೆಯಲ್ಲಿ ಶಾಲೆ ಮಕ್ಕಳ ಕಲಿಕಾ ಸಾಮರ್ಥ್ಯ ಸುಧಾರಿಸಲು ಕೈಗೊಳ್ಳಬೇಕಾದ ವಿವಿಧ ಕ್ರಮಗಳ ಕುರಿತು ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಹ ತಮ್ಮ ವ್ಯಾಪ್ತಿಯಲ್ಲಿ ಕಲಿಕಾ ಗುಣಮಟ್ಟ ಹೆಚ್ಚಿಸಲು ಕೈಗೊಂಡಿರುವ ಕ್ರಮಗಳ ಕುರಿತು ಸಭೆಗೆ ವಿವರವಾದ ಮಾಹಿತಿ ನೀಡಿದರು.

ಜಿಪಂ ಮುಖ್ಯ ಯೋಜನಾಧಿಕಾರಿ ಅಲ್ಲಮಪ್ರಭು ಅಲ್ಲಾಪೂರ, ಸರ್ವ ಶಿಕ್ಷಣ ಅಭಿಯಾನದ ಉಪ ಸಮನ್ವಯಾಧಿಕಾರಿ ಪ್ರಮೋದಿನಿ ಬಳೂಲಮಟ್ಟಿ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಭಾರತಿ ದಾಸೋಗ, ಶಿಕ್ಷಣಾಧಿಕಾರಿ ಮಾಳನ್ನವರ ಸೇರಿದಂತೆ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ 300ಕ್ಕೂ ಹೆಚ್ಚು ಪ್ರಾಥಮಿಕ ಶಾಲೆ ಮುಖ್ಯ ಗುರುಗಳು ಇದ್ದರು.

ಖಾಸಗಿ ಶಾಲೆಗಳ ಮಾದರಿಯಲ್ಲಿ ಸರ್ಕಾರಿ ಶಾಲೆಗಳಲ್ಲಿಯೂ ಉತ್ತಮ ಶೈಕ್ಷಣಿಕ ಫಲಿತಾಂಶ ಬಂದಾಗ ಮಾತ್ರ ಮುಂದಿನ ವರ್ಷ ಹೆಚ್ಚಿನ ಮಕ್ಕಳು ದಾಖಲಾತಿ ಪಡೆಯಲು ಸಾಧ್ಯ. ಫಲಿತಾಂಶದಲ್ಲಿ ಸುಧಾರಣೆ ಕಾಣದಿದ್ದರೆ ದಾಖಲಾತಿ ಕುಸಿಯುವ ಸಾಧ್ಯತೆಯಿದೆ. ಇದನ್ನು ಮುಖ್ಯ ಶಿಕ್ಷಕರು ಅರಿತುಕೊಂಡು ಶಾಲೆ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ನಿರಂತರ ಕಾರ್ಯನಿರ್ವಹಿಸಬೇಕು.

-ಗಜಾನನ ಬಾಲೆ, ಜಿಪಂ ಸಿಇಒ