- ತುರ್ತು ಕಾಮಗಾರಿ ಅನುಷ್ಠಾನ ಅಕ್ರಮ ಎಸಗಿದರೆ ಸಹಿಸಲ್ಲ: ನೀರು-ನೈರ್ಮಲ್ಯ ಸಮಿತಿ ಸಭೆಯಲ್ಲಿ ಜಿಪಂ ಸಿಇಒ । ಈಗಾಗಲೇ ಮೂವರಿಗೆ ನೋಟೀಸ್
- - -ಕನ್ನಡಪ್ರಭ ವಾರ್ತೆ ದಾವಣಗೆರೆ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಮಳೆ ವಿಳಂಬವಾಗಿದ್ದು, ನಿರೀಕ್ಷೆಯಂತೆ ವಾಡಿಕೆ ಪ್ರಮಾಣದ ಮಳೆಯಾಗದೇ, ಜಿಲ್ಲೆಯ ಆಯ್ದ ತಾಲೂಕುಗಳ ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಮೂಲಗಳು ಬತ್ತುತ್ತಿವೆ. ಈ ಹಿನ್ನೆಲೆ ಜನ- ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆಯಲ್ಲಿ ಸಮಸ್ಯೆ ಆಗದಂತೆ ಅಗತ್ಯ ತುರ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಪಂ ಸಿಇಒ ಗಿತ್ತೆ ಮಾಧವ ವಿಠಲ ರಾವ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ನೀರಿನ ಸಮಸ್ಯೆ ತ್ವರಿತ ಪರಿಹಾರಕ್ಕಾಗಿ ಸರ್ಕಾರ ಬಿಡುಗಡೆಗೊಳಿಸಿದ ₹1 ಕೋಟಿಯನ್ನು ಎಲ್ಲ ತಾಲೂಕಿಗೆ ಹಂಚಿಕೆ ಮಾಡಲಾಗಿದೆ ಎಂದು ಅವರು ಹೇಳಿದರು.ಮೂವರು ಅಧಿಕಾರಿಗಳಿಗೆ ನೋಟಿಸ್:
ನೀರಿನ ಸಮಸ್ಯೆ ಉಲ್ಬಣವಾದ ಗ್ರಾಮಗಳ ಜನರಿಗೆ ನೀರು ಪೂರೈಸಲು ಕೈಗೊಳ್ಳಬಹುದಾದ ಕಾಮಗಾರಿಗಳ ಕುರಿತು ಕ್ರಿಯಾಯೋಜನೆ ರೂಪಿಸಿ ಸಲ್ಲಿಸಿದರೆ ತಕ್ಷಣ ಅನುಮೋದನೆ ನೀಡಿ, ಕಾಮಗಾರಿ ಅನುಷ್ಠಾನಗೊಳಿಸಲಾಗುವುದು. ಈ ತುರ್ತು ಕಾಮಗಾರಿ ಅನುಷ್ಠಾನದಲ್ಲಿ ಅಕ್ರಮ ಎಸಗುವ ಅಧಿಕಾರಿ, ಸಿಬ್ಬಂದಿಗೆ ಕ್ಷಮಿಸುವುದಿಲ್ಲ. ಈಗಾಗಲೇ ಸಲ್ಲಿಸಲಾದ ಕ್ರಿಯಾ ಯೋಜನೆಯಲ್ಲಿ ಕಾಮಗಾರಿಗೆ ನಿಗದಿತ ಮೊತ್ತಕ್ಕಿಂತ ಹೆಚ್ಚು ಅನುದಾನಕ್ಕೆ ಬೇಡಿಕೆ ಸಲ್ಲಿಸಿದ ಮೂವರು ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಲಿದ್ದೇವೆ ಎಂದು ಸಿಇಒ ಎಚ್ಚರಿಸಿದರು.
₹25 ಕೋಟಿ ವೆಚ್ಚದ ಕಾಮಗಾರಿಗೆ ಅನುಮೋದನೆ:
₹1 ಕೋಟಿ ಅನುದಾನದಲ್ಲಿ ₹75- ₹90 ಲಕ್ಷ ರು. ಅನುದಾನ ಸಾಮಾನ್ಯ ವರ್ಗಕ್ಕೆ, ₹15-₹17 ಲಕ್ಷ ರು. ಪರಿಶಿಷ್ಟ ಜಾತಿ ಮತ್ತು ₹6-₹7 ಲಕ್ಷ ರು. ಪರಿಶಿಷ್ಟ ವರ್ಗಕ್ಕೆ ಮೀಸಲಿಡಲಾಗಿದೆ. 2026-27ನೇ ಸಾಲಿನಲ್ಲಿ ಕೈಗೊಳ್ಳಬಹುದಾದ ಅಂದಾಜು 2026-27ನೇ ಸಾಲಿನಲ್ಲಿ ಕೈಗೊಳ್ಳಬಹುದಾದ ಸುಮಾರು ₹25 ಕೋಟಿ ವೆಚ್ಚದ ಕಾಮಗಾರಿಗೆ ಅನುಮೋದನೆ ನೀಡುತ್ತಿದ್ದೇವೆ. ಸರ್ಕಾರದ ವಿವಿಧ ಯೋಜನೆಯಡಿ ಈಗಾಗಲೇ ಕೊಳವೆಬಾವಿ ಕೊರೆಸಿದ್ದು, ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಬಾಕಿ ಇದ್ದರೆ ಆದ್ಯತೆ ಮೇಲೆ ಅದನ್ನು ಕಲ್ಪಿಸಿ, ಜನರಿಗೆ ನೀರು ಒದಸಬೇಕು ಎಂದು ಸೂಚನೆ ನೀಡಿದರು.ಅಗತ್ಯವಿದ್ದ ಕಡೆಗಳಲ್ಲಿ ಖಾಸಗಿಯವರ ಕೊಳವೆಬಾವಿಗಳಿಗೆ ಒಡಂಬಡಿಕೆ ಮಾಡಿಕೊಂಡಿದ್ದಲ್ಲಿ ಅಂತಹ ಒಡಂಬಡಿಕೆಯನ್ನು ರದ್ದುಗೊಳಿಸಿಕೊಳ್ಳಬಹುದು. ಈಗಾಗಲೇ ಬೇರೆ ಯಾವುದೇ ಯೋಜನೆಯಲ್ಲಿ ನೀರೊದಗಿಸಲು ಕ್ರಮ ಕೈಗೊಂಡಿದ್ದರೆ ಅಂತಹವನ್ನು ಗುರುತಿಸಿ, ಯೋಜನೆ ಪುನರಾವರ್ತನೆ ಆಗದಂತೆ ಅಗತ್ಯವಿರುವಲ್ಲಿ ಅನುಷ್ಠಾಗೊಳಿಸಬೇಕು. ಮುಂದಿನ ದಿನಗಳಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಗ್ರಾಮೀಣ ಜನಮೂಲಗಳ ಮಾಹಿತಿ ಸಂಗ್ರಹಿಸಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.
ನೀರು ವ್ಯರ್ಥವಾಗದಂತೆ ನೋಡಿಕೊಳ್ಳಿ:ಸರ್ಕಾರದ ವಿವಿಧ ಯೋಜನೆಗಳಲ್ಲಿ ಸೃಜಿಸಿರುವ ಆಸ್ತಿಗಳ ವಿವರಗಳನ್ನು ದಾಖಲಿಸಿಟ್ಟುಕೊಳ್ಳುವ ಕೆಲಸ ಅಧಿಕಾರಿಗಳು ಮಾಡಬೇಕು. ಗ್ರಾಮಗಳ ಸರ್ಕಾರಿ ಕೊಳವೆ ಬಾವಿಗಳು, ಅವುಗಳಲ್ಲಿ ನೀರಿರುವ, ಇಲ್ಲದಿರುವ ಹಾಗೂ ಬೇಸಿಗೆಯಲ್ಲಿ ಮಾತ್ರ ಇಂಗಿ ಹೋಗುವ ಕೊಳವೆಬಾವಿಗಳ ಮಾಹಿತಿ ಸಂಗ್ರಹಿಸಿಟ್ಟುಕೊಂಡಿರಬೇಕು. ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ನೀರು ಸರಬರಾಜು ಪೈಪ್‌ಗಳು ನಿರ್ವಹಣೆ, ದುರಸ್ತಿಗೊಳ್ಳದೇ ನೀರು ವ್ಯರ್ಥವಾಗುತ್ತಿರುವುದನ್ನು ಗ್ರಾಮಗಳಿಗೆ ಭೇಟಿ ನೀಡಿದ್ದ ವೇಳೆ ಗಮನಿಸಿದ್ದೇವೆ. ಮೊದಲು ಅಂತಹವನ್ನು ಸರಿಪಡಿಸಿ ಎಂದು ಅವರು ತಾಕೀತು ಮಾಡಿದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ನಾಗೇಂದ್ರಪ್ಪ, ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿ, ಸಿಬ್ಬಂದಿ ಇದ್ದರು.................... ಕ್ಯಾಪ್ಷನ್12ಕೆಡಿವಿಜಿ1-ದಾವಣಗೆರೆ ಜಿಲ್ಲೆ ಜಗಳೂರು ತಾ. ದಿದ್ದಿಗೆ ಇತರೆ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ, ಗ್ರಾಮಸ್ಥರ ಅಹವಾಲು ಆಲಿಸುತ್ತಿರುವ ಜಿಪಂ ಸಿಇಓ ಗಿತ್ತೆ ಮಾಧವ ವಿಠಲ್ ರಾವ್.(ಸಂಗ್ರಹ ಚಿತ್ರ)