ಸುಂಟಿಕೊಪ್ಪ: ಯೂರಿಯ ಸೇರಿದಂತೆ ಇತರ ರಾಸಾಯಿನಿಕ ಗೊಬ್ಬರ ಬಳಕೆಯಿಂದ ಪರಿಸರ ಮತ್ತು ಜನಜೀವನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಸಾಯನಿಕ ಗೊಬ್ಬರಗಳ ವಿಪರೀತ ಬಳಕೆಯನ್ನು ಹಂತ ಹಂತವಾಗಿ ತಗ್ಗಿಸುವ ನಿಟ್ಟಿನಲ್ಲಿ ನಿರ್ಬಂಧಗಳನ್ನು ತರುತ್ತಿದೆ ಎಂದು ಕೃಷಿ ಇಲಾಖೆಯ ಕೊಡಗು ಜಿಲ್ಲಾ ಜಂಟಿ ನಿರ್ದೇಶಕ ಚಂದ್ರಶೇಖರ್ ಹೇಳಿದ್ದಾರೆ. ಶುಕ್ರವಾರ ಕೊಡವ ಸಮಾಜದ ಸಭಾಂಗಣದಲ್ಲಿ ಸುಂಟಿಕೊಪ್ಪ ಲಯನ್ಸ್ ಕ್ಲಬ್ ಮತ್ತು ಕೋರಮಂಡಲ್ ಇಂಟರ್ ನ್ಯಾಷನಲ್ ಲಿಮಿಟೆಡ್ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಕಾಫಿ ಬೆಳೆಗಾರರಿಗೆ ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಯೂರಿಯ ಮತ್ತು ಇತರ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಉಂಟಾಗಿರುವ ಪ್ರತಿಕೂಲ ಪರಿಣಾಮಗಳನ್ನು ಕೇಂದ್ರ ಸರ್ಕಾರ ೩ ದಶಕಗಳಿಗೂ ಹೆಚ್ಚು ಕಾಲ ಸಂಶೋಧನೆ ನಡೆಸಿ ಬಳಕೆಯಾಗುತ್ತಿರುವ ಈ ಗೊಬ್ಬಗಳಲ್ಲಿ ಶೇ. ೨೫ರಿಂದ ೨೮ ಮಾತ್ರ ರೈತರಿಗೆ ಉಪಯೋಗವಾಗುತ್ತಿದ್ದು, ಉಳಿದ ಪ್ರಮಾಣ ಪರಿಸರ ಮತ್ತು ಜನರ ಆರೋಗ್ಯ ಮೇಲೆ ಕೆಟ್ಟ ಪರಿಣಾಮ ಬಿರುತ್ತಿದೆ. ಹಸುಗಳ ಹಾಲಿನಲ್ಲಿ ಕೂಡ ಹಾನಿಕಾರಕ ಅಂಶಗಳು ಪತ್ತೆಯಾಗಿವೆ ಎಂದರು.

ಕೃಷಿ ಮೇಲಿನ ಒಟ್ಟು ಸಬ್ಸಿಡಿ ಮೊತ್ತದಲ್ಲಿ ಶೇ.೩೨ ಯೂರಿಯಾ ಮತ್ತು ರಾಸಾಯಿನಿಕ ಗೊಬ್ಬರಗಳ ಮೇಲಿನ ಸಬ್ಸಿಡಿಗೆ ವ್ಯಯವಾಗುತ್ತಿದ್ದು, ಇದು ರೈತರಿಗೆ ಉಪಯೋಗಕಾರಿಯಲ್ಲ ಎಂದು ಕೇಂದ್ರ ಸರಕಾರ ಆರಿತುಕೊಂಡಿದೆ.

ಪ್ರಾಸ್ತಾವಿಕವಾಗಿ ಮಾತನಾಡಿದ ಸುಂಟಿಕೊಪ್ಪ ಲಯನ್ಸ್ ಅಧ್ಯಕ್ಷ ಎಸ್.ಜಿ. ಶ್ರೀನಿವಾಸ್ ಅವರು ಸುಂಟಿಕೊಪ್ಪ ಲಯನ್ಸ್‌ಗೆ ೫೦ ವರ್ಷವಾಗಿರುವ ಹಿನ್ನೆಲೆಯಲ್ಲಿ ವರ್ಷ ಪೂರ್ತಿ ಆರೋಗ್ಯ ಶಿಕ್ಷಣ ರೈತ ಕೇಂದ್ರೀಕೃತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಕೋರಮಂಡಲ್ ಇಂಟರ್ ನ್ಯಾಷನಲ್ ಲಿಮಿಟೆಡ್ ಸಂಸ್ಥೆಯ ಕರ್ನಾಟಕ ಮತ್ತು ತಮಿಳುನಾಡು ವಲಯ ಮುಖ್ಯಸ್ಥ ಕಿರಣ್ ಕುಮಾರ್ ರಸಗೊಬ್ಬರಗಳ ಬಳಕೆ ಕುರಿತು ಪ್ರಾತಿಕ್ಷಿಕೆ ಮೂಲಕ ಮಾಹಿತಿ ನೀಡಿದರು.


ಗೋಣಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ಬೆಳೆಗಳ ವಿಜ್ಞಾನಿ ಡಾ. ಕೆ.ವಿ. ವಿರೇಂದ್ರ ಕುಮಾರ್ ಕಾಫಿ ಮತ್ತು ಕರಿಮೆಣಸು ಉತ್ಪಾದನಾ ವೆಚ್ಚ, ಇಳುವರಿ ಹೆಚ್ಚಿಸುವಿಕೆ, ರೋಗಗಳ ನಿಯಂತ್ರಣ ಕುರಿತು ವಿವರಿಸಿದರು.

ಕಾಫಿ ಮಂಡಳಿಯ ಸೋಮವಾರಪೇಟೆ ವಿಭಾಗದ ಕಿರಿಯ ಸಂಪರ್ಕ ಅಧಿಕಾರಿ ಡಾ. ಅನಿಲ್ ಕಾಫಿ ಮಂಡಳಿ ಮೂಲಕ ಕಾಫಿ, ಕೃಷಿ, ಯೋತ್ರೋಪಕರಣಗಳಿಗೆ ಸಬ್ಸಿಡಿ ಲಭ್ಯವಿದ್ದು, ಕಾಫಿ ಬೆಳೆಗಾರರು ಮಣ್ಣು ಪರೀಕ್ಷೆ ಹೆಚ್ಚಿನ ಒತ್ತು ಕೊಡುವಂತೆ ಕಿವಿ ಮಾತು ಹೇಳಿದರು.ಕೃಷಿ ಇಲಾಖೆಯ ಕೊಡಗು ಜಿಲ್ಲಾ ಜಂಟಿ ನಿರ್ದೇಶಕ ಚಂದ್ರಶೇಖರ್, ಗೋಣಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ಬೆಳೆಗಳ ವಿಜ್ಞಾನಿ ಡಾ. ಕೆ.ವಿ. ವಿರೇಂದ್ರ, ಕಾಫಿ ಮಂಡಳಿಯ ಸೋಮವಾರಪೇಟೆ ವಿಭಾಗದ ಕಿರಿಯ ಸಂಪರ್ಕ ಅಧಿಕಾರಿ ಡಾ. ಅನಿಲ್ ಅವರನ್ನು ಹಿರಿಯ ಕಾಫಿ ಬೆಳೆಗಾರ ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಎನ್. ಬೋಸ್‌ಮಂದಣ್ಣ ೨ ಸಂಸ್ಥೆಗಳ ಪರವಾಗಿ ಸನ್ಮಾನಿಸಿ ಗೌರವಿಸಿದರು. ಸುಂಟಿಕೊಪ್ಪದ ಪ್ರಗತಿಪರ ಕೃಷಿಕ ಪಟ್ಟೆಮನೆ ಉದಯ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಲಯನ್ಸ್ ಕಾರ್ಯದರ್ಶಿ ಗ್ಲೇನ್ ಮೆನೇಜಸ್, ಕೋರಮಂಡಲ್ ಸಂಸ್ಥೆಯ ಹಿರಿಯ ಅಧಿಕಾರಿ ಪ್ರವೀಣ್ ಕುಮಾರ್, ವಿಜಯಲಕ್ಷ್ಮೀ ಶ್ರೀನಿವಾಸ್ ಮತ್ತಿತರರಿದ್ದರು.