ಜಾನುವಾರುಗಳ ಮೇವಿನ ಸಮಸ್ಯೆ ನಿವಾರಣೆಗೆ ಕ್ರಮ: ಡೀಸಿ ಶುಭ ಕಲ್ಯಾಣ್‌

| Published : Apr 30 2024, 02:06 AM IST

ಜಾನುವಾರುಗಳ ಮೇವಿನ ಸಮಸ್ಯೆ ನಿವಾರಣೆಗೆ ಕ್ರಮ: ಡೀಸಿ ಶುಭ ಕಲ್ಯಾಣ್‌
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಬರ ಸ್ಥಿತಿಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ವರದಿ ಪಡೆದಿದ್ದು, ಬರ ನಿರ್ವಹಣೆಗೆ ಈಗಾಗಲೇ ಸರ್ಕಾರದ ಸೂಚನೆಯಂತೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ತಾಲೂಕಿಗೆ 85 ಲಕ್ಷ ಹಣ ಬಿಡುಗಡೆಗೊಳಿಸಿರುವುದಾಗಿ ಡೀಸಿ ಹೇಳಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಬರ ಅಧ್ಯಯನದ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಹಾಗೂ ಜಿಪಂ ಸಿಇಒ, ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಪಾವಗಡಕ್ಕೆ ಭೇಟಿ ನೀಡಿ ಬರ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌, ಬೇಸಿಗೆ ಹಿನ್ನೆಲೆಯಲ್ಲಿ ತಾಪಮಾನ ಹೆಚ್ಚಿದ್ದು, ನೀರು, ದನಕರುಗಳಿಗೆ ಮೇವಿನ ಅಭಾವ ಸೃಷ್ಟಿಯಾಗಿದೆ. ಸತತ ಮಳೆಯ ಅಭಾವದ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಬರ ವ್ಯಾಪಕವಾಗುತ್ತಿದ್ದು, ಸರ್ಕಾರದ ಆದೇಶದನ್ವಯ ಸಂಪೂರ್ಣ ಬರ ನಿರ್ವಹಣೆಗೆ ಜಿಲ್ಲಾಡಳಿತ ಸಜ್ಜಾಗಿದೆ ಎಂದರು.

ತಾಲೂಕಿನ ಬರ ಸ್ಥಿತಿಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ವರದಿ ಪಡೆದಿದ್ದು, ಬರ ನಿರ್ವಹಣೆಗೆ ಈಗಾಗಲೇ ಸರ್ಕಾರದ ಸೂಚನೆಯಂತೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ತಾಲೂಕಿಗೆ 85 ಲಕ್ಷ ಹಣ ಬಿಡುಗಡೆಗೊಳಿಸಿರುವುದಾಗಿ ಹೇಳಿದರು.

ಈ ಸಂಬಂಧ ಹಸು, ಎಮ್ಮೆ, ಕುರಿ, ಮೇಕೆ ಇತರೆ ಜಾನುವಾರುಗಳಿಗೆ ಮೇವಿನ ಸಮಸ್ಯೆ ನಿವಾರಣೆಗೆ ಕ್ರಮವಹಿಸಿದ್ದು, ತಾಲೂಕಿನ ನಾಗಲಮಡಿಕೆ ಗ್ರಾಮದಲ್ಲಿ ಮೇವಿನ ಬ್ಯಾಂಕ್‌ ತೆರೆದಿದ್ದೇವೆ. ಇಲ್ಲಿ ಪ್ರತಿದಿನ ರೈತರಿಗೆ ಮೇವು ವಿತರಿಸಲಾಗುತ್ತಿದೆ. ಜಾನುವಾರುಗಳ ಮೇವಿನ ಸಮಸ್ಯೆ ನಿವಾರಣೆಗೆ ತಾಲೂಕಿನ ಹೋಬಳಿ ಕೇಂದ್ರಗಳಲ್ಲಿ ಮೇವಿನ ಬ್ಯಾಂಕ್‌ ತೆರೆಯಲು ಉದ್ದೇಶಿಸಿದ್ದು, ಶೀಘ್ರ ತಾಲೂಕಿನ ದೊಡ್ಡಹಳ್ಳಿ ಗ್ರಾಮದಲ್ಲಿ ಮೇವಿನ ಬ್ಯಾಂಕ್‌ ಆರಂಭಿಸಲಾಗುವುದು. ಜತೆಗೆ ತಾಲೂಕಿನ ಪ್ರತಿ ಗ್ರಾಮದಲ್ಲಿಯೂ ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆಗೆ ಕ್ರಮವಹಿಸಿದ್ದು, ರೈತರಿಗೆ ಗಂಜಿ ಕೇಂದ್ರ ತೆರೆಯಲು ಚಿಂತನೆ ನಡೆಸಲಾಗಿದೆ ಎಂದ ಅವರು, ಬರ ಸಮಸ್ಯೆ ನಿವಾರಣೆಗೆ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಕುರಿತು ವಿವರಿಸಿದರು.

ಜಿಪಂ ಸಿಇಒ ಜಿ.ಪ್ರಭು ಮಾತನಾಡಿ, ತಾಲೂಕು ಹಾಗೂ ಜಿಲ್ಲೆಯ ಬರ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮವಹಿಸಿದ್ದು, ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಕುಡಿಯುವ ನೀರಿನ ಅಭಾವವಿರುವ ಗ್ರಾಮಗಳಲ್ಲಿ ಹೊಸ ಬೋರ್‌ವೇಲ್‌ಗಳ ಕೊರೆಯುವಿಕೆ, ನೀರು ಲಭ್ಯತೆ ಪರಿಗಣಿಸಿ ಸಮಸ್ಯೆ ಇರುವ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಇನ್ನಿತರೆ ಬರ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮವಹಿಸಿ ವರದಿ ಸಲ್ಲಿಸಲು ತಹಸೀಲ್ದಾರ್‌ ಹಾಗೂ ತಾಪಂ ಇಒ ಅವರಿಗೆ ಆದೇಶಿಸಲಾಗಿದೆ ಎಂದರು.

ಮಧುಗಿರಿ ಉಪವಿಭಾಗಧಿಕಾರಿ ಗೂಟೂರು ಶಿವಪ್ಪ, ತಹಸೀಲ್ದಾರ್‌ ಸಂತೋಷ್‌ಕುಮಾರ್‌, ತಾಪಂ ಇಒ ಜಾನಕಿರಾಮ್‌ ಲೋಕೋಪಯೋಗಿ ಇಲಾಖೆಯ ಎಇಇ ಅನಿಲ್‌ಕುಮಾರ್‌, ಪಶು ಆರೋಗ್ಯ ಇಲಾಖೆಯ ಸಹಾಯಕ ನಿರ್ದೇಶಕ ಹೊಸಕೆರಪ್ಪ ಹಾಗೂ ಇತರೆ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

.