ಮೆಕ್ಯಾನಿಕ್ ಅವಹೇಳನ ಆರೋಪ: ಮೊಕದ್ದಮೆ ಹೂಡುವ ಎಚ್ಚರಿಕೆ

| Published : May 01 2024, 01:18 AM IST

ಸಾರಾಂಶ

ರಿಯಾಲಿಟಿ ಶೋನಲ್ಲಿ ಮೆಕ್ಯಾನಿಕ್‌ಗಳ ಕುರಿತು ನೀಡಿರುವ ಹೇಳಿಕೆಯನ್ನು ಮಡಿಕೇರಿಯ ಮೆಕ್ಯಾನಿಕ್‌ಗಳು ಖಂಡಿಸಿದ್ದು ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಖಾಸಗಿ ಚಾನೆಲ್ ಒಂದರಲ್ಲಿ ಪ್ರದರ್ಶನಗೊಂಡ ರಿಯಾಲಿಟಿ ಶೋನಲ್ಲಿ ಮೆಕ್ಯಾನಿಕ್ ಗಳ ಕುರಿತು ನೀಡಿರುವ ಹೇಳಿಕೆಯನ್ನು ಮಡಿಕೇರಿಯ ಮೆಕ್ಯಾನಿಕ್ ಗಳು ಖಂಡಿಸಿದ್ದು, ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ನಗರದ ಮೆಕ್ಯಾನಿಕ್ ಮಣಿ, ರಿಯಾಲಿಟಿ ಶೋನಲ್ಲಿ ಸ್ಪರ್ಧಿಯೊಬ್ಬಳು ‘ಮೆಕ್ಯಾನಿಕ್ ಗಳನ್ನು ಮದುವೆಯಾದರೆ ಗ್ರೀಸ್ ತಿನ್ನಬೇಕಾಗುತ್ತದೆ’ ಎಂದು ಹೇಳಿರುವ ಸಂಭಾಷಣೆ ವೃತ್ತಿ ಬಾಂಧವರಿಗೆ ನೋವನ್ನುಂಟು ಮಾಡಿದೆ. ಈ ಪದ ಬಳಕೆಯನ್ನು ತೀರ್ಪುಗಾರರು ವಿರೋಧಿಸುವ ಬದಲು ಚಪ್ಪಾಳೆ ತಟ್ಟುವುದರೊಂದಿಗೆ, ಪ್ರದರ್ಶನಕ್ಕೆ ‘ಗೋಲ್ಡನ್ ಬಜರ್’ ನೀಡಿರುವುದು ಸರಿಯಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಒಂದು ವೃತ್ತಿಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ಖಂಡನೀಯ. ಜಗತ್ತಿನಲ್ಲಿ ಅಧುನಿಕ ಬದಲಾವಣೆಯಲ್ಲಿ ಮೆಕ್ಯಾನಿಕ್ ಗಳ ಪಾತ್ರ ದೊಡ್ಡದಿದೆ. ಈ ನಿಟ್ಟಿನಲ್ಲಿ ವಾಹಿನಿ ಹಾಗೂ ರಿಯಾಲಿಟಿ ಶೋ ಮುಖ್ಯಸ್ಥರು ಬಹಿರಂಗವಾಗಿ ಮೆಕ್ಯಾನಿಕ್ ಗಳ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ತಪ್ಪಿದಲ್ಲಿ ರಾಜ್ಯ ವ್ಯಾಪಿ ಹೋರಾಟ, ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಹೇಳಿಕೆ ಖಂಡಿಸಿ ಮಡಿಕೇರಿ ನಗರ ಠಾಣೆ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ವಾಹಿನಿ ಮುಖ್ಯಸ್ಥರು, ರಿಯಾಲಿಟಿ ಶೋ ಆಯೋಜಕರು, ಸಂಭಾಷಣೆ ಹೇಳಿದೆ ಸ್ಪರ್ಧಿ, ಸಂಭಾಷಣೆಗಾರ, ತೀರ್ಪುಗಾರರ ವಿರುದ್ಧ ದೂರು ದಾಖಲಿಸಲಾಗುವುದು ಎಂದರು.

ಮೆಕ್ಯಾನಿಕ್ ಗಳಾದ ಚಂದ್ರು, ಅನಂತ್, ಕಿರಣ್, ಕುಮಾರ್, ಗಣೇಶ್ ಸುದ್ದಿಗೋಷ್ಠಿಯಲ್ಲಿದ್ದರು.