ಸಾರಾಂಶ
ಕರ್ನಾಟಕ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆ ಅನ್ವಯ ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಉಡುಪಿ ಜಿಲ್ಲೆಯಲ್ಲಿ ಜೂ.1ರಿಂದ ಜು.31ರ ತನಕ 51 ದಿನ ಯಾಂತ್ರೀಕೃತ ಮೀನುಗಾರಿಕೆ ನಿಷೇಧಿಲಾಗಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಕರ್ನಾಟಕ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆ ಅನ್ವಯ ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಉಡುಪಿ ಜಿಲ್ಲೆಯಲ್ಲಿ ಜೂ.1ರಿಂದ ಜು.31ರ ತನಕ 51 ದಿನ ಯಾಂತ್ರೀಕೃತ ಮೀನುಗಾರಿಕೆ ನಿಷೇಧಿಲಾಗಿದೆ.ಯಾವುದೇ ಬಲೆಗಳನ್ನು / ಸಾಧನಗಳನ್ನು ಉಪಯೋಗಿಸಿ ಮೀನುಗಾರಿಕೆಗಾಗಿ ಯಾಂತ್ರೀಕೃತ ದೋಣಿಗಳ ಮತ್ತು 10 ಅಶ್ವಶಕ್ತಿ (ಎಚ್.ಪಿ) ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಇನ್‌ಬೋರ್ಡ್ ಅಥವಾ ಔಟ್‌ಬೋರ್ಡ್ ಯಂತ್ರಗಳನ್ನು ಅಳವಡಿಸಿರುವ ಸಾಂಪ್ರದಾಯಿಕ ದೋಣಿಗಳ ಮುಖಾಂತರ ಕೈಗೊಳ್ಳುವ ಮೀನುಗಾರಿಕೆ ಚಟುವಟಿಕೆಯನ್ನು ಈ ಅವಧಿಯಲ್ಲಿ ನಿಷೇಧಿಸಲಾಗಿದೆ.ಆದರೆ, 10 ಅಶ್ವ ಶಕ್ತಿಯವರೆಗಿನ ಸಾಮರ್ಥ್ಯದ ಮೋಟರೀಕೃತ ದೋಣಿ ಹಾಗೂ ಸಾಂಪ್ರದಾಯಕ / ನಾಡದೋಣಿಗಳು ಕರಾವಳಿ ಮೀನುಗಾರಿಕೆ ಕೈಗೊಳ್ಳಲು ಅನುಮತಿ ನೀಡಲಾಗಿದೆ ಹಾಗೂ ಹವಾಮಾನದ ವೈರ‍್ಯತೆಯ ಮುನ್ಸೂಚನೆ ನೀಡಿದಲ್ಲಿ ಎಲ್ಲಾ ಮೀನುಗಾರರು ಕಡ್ಡಾಯವಾಗಿ ಪಾಲಿಸಬೇಕು.ಮೀನುಗಾರಿಕೆ ನಿಷೇಧ ಹಿನ್ನೆಲೆ, ಕಡ್ಡಾಯವಾಗಿ ಎಲ್ಲಾ ಬೋಟುಗಳು ಮೇ 31 ರ ಒಳಗಾಗಿ ಬಂದರು ಪ್ರವೇಶ ಮಾಡಬೇಕು. ನಂತರ ಬಂದರು ಪ್ರವೇಶ ಮಾಡುವ ದೋಣಿಗಳ ಮೇಲೆ ಕಾನೂನು ಕ್ರಮಕೈಗೊಳ್ಳಲಾಗುವುದು.
ಮೀನುಗಾರಿಕೆ ನಿಷೇಧಿಸಿದ ಸರಕಾರಿ ಆದೇಶವನ್ನು ಉಲ್ಲಂಘಿಸುವ ಮೀನುಗಾರಿಕಾ ದೋಣಿಗಳು ಮತ್ತು ಮೀನುಗಾರರು ಕರ್ನಾಟಕ ಕಡಲ ಮೀನುಗಾರಿಕೆ ಕಾಯ್ದೆ 1986 ರ ದಂಡನೆಗೊಳಗಾಗುತ್ತಾರೆ ಮತ್ತು ಒಂದು ವರ್ಷದ ಅವಧಿಗೆ ಸಬ್ಸಿಡಿ ಡೀಸೆಲ್ ಪಡೆಯಲು ಅನರ್ಹರಾಗುತ್ತಾರೆ. ಈ ಆದೇಶವನ್ನು ಕರಾವಳಿ ಪ್ರದೇಶದ ಎಲ್ಲಾ ಮೀನುಗಾರರು ಪಾಲಿಸುವಂತೆ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.