ಮಾಧ್ಯಮಗಳು ಆಡಳಿತ ಮತ್ತು ಸಾರ್ವಜನಿಕರ ನಡುವಿನ ಪ್ರಮುಖ ಸೇತುವೆಯಾಗಿದ್ದು, ಸರ್ಕಾರದ ಯೋಜನೆಗಳು ಹಾಗೂ ಸಾರ್ವಜನಿಕರ ಸಮಸ್ಯೆಗಳು ಪರಿಣಾಮಕಾರಿಯಾಗಿ ತಲುಪಲು ಮಾಧ್ಯಮ ಮತ್ತು ಆಡಳಿತದ ನಡುವೆ ನಿರಂತರ ಸಂವಹನ ಅಗತ್ಯ.

ವಾರ್ತಾಲಾಪ ಮಾಧ್ಯಮ ಸಂವಾದ ಕಾರ್ಯಾಗಾರ ಉದ್ಘಾಟನೆಕನ್ನಡಪ್ರಭ ವಾರ್ತೆ ಕಾರವಾರ

ಮಾಧ್ಯಮಗಳು ಆಡಳಿತ ಮತ್ತು ಸಾರ್ವಜನಿಕರ ನಡುವಿನ ಪ್ರಮುಖ ಸೇತುವೆಯಾಗಿದ್ದು, ಸರ್ಕಾರದ ಯೋಜನೆಗಳು ಹಾಗೂ ಸಾರ್ವಜನಿಕರ ಸಮಸ್ಯೆಗಳು ಪರಿಣಾಮಕಾರಿಯಾಗಿ ತಲುಪಲು ಮಾಧ್ಯಮ ಮತ್ತು ಆಡಳಿತದ ನಡುವೆ ನಿರಂತರ ಸಂವಹನ ಅಗತ್ಯ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹೇಳಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವಾರ್ತಾಲಾಪ ಮಾಧ್ಯಮ ಸಂವಾದ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹಾಗೂ ಪಿಐಬಿ ಹೆಚ್ಚುವರಿ ಮಹಾನಿರ್ದೇಶಕ ಎಸ್.ಜಿ. ರವೀಂದ್ರ ಜಂಟಿಯಾಗಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ಸರ್ಕಾರದ ವಿವಿಧ ಯೋಜನೆಗಳನ್ನು ಮಾಧ್ಯಮ ಮಿತ್ರರು ಸರಿಯಾಗಿ ಅರ್ಥಮಾಡಿಕೊಳ್ಳಲು ಹಾಗೂ ಯೋಜನೆಗಳಿಗೆ ಸಂಬಂಧಿಸಿದ ಸಂದೇಹ ಪರಿಹರಿಸಿಕೊಳ್ಳಲು ವಾರ್ತಾಲಾಪ ಉತ್ತಮ ವೇದಿಕೆಯಾಗಿದೆ. ಜಿಲ್ಲೆಯು 12 ತಾಲೂಕುಗಳು ಹಾಗೂ 4 ಉಪವಿಭಾಗಗಳನ್ನು ಒಳಗೊಂಡಿರುವ ವಿಶಾಲ ಜಿಲ್ಲೆಯಾಗಿದ್ದು, ಪ್ರತಿಯೊಂದು ಪ್ರದೇಶಕ್ಕೂ ಅಧಿಕಾರಿಗಳು ತಕ್ಷಣ ತಲುಪುವುದು ಕಷ್ಟ. ಇಂತಹ ಸಂದರ್ಭದಲ್ಲಿ ಮಾಧ್ಯಮಗಳು ಸಾರ್ವಜನಿಕರ ಧ್ವನಿಯಾಗಿ ಸ್ಥಳೀಯ ಸಮಸ್ಯೆಗಳನ್ನು ಆಡಳಿತದ ಗಮನಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. 2 ವರ್ಷಗಳಿಂದ ಜಿಲ್ಲಾಧಿಕಾರಿ ಕಚೇರಿಯ ಕಂಟ್ರೋಲ್ ರೂಮ್‌ನಲ್ಲಿ ಮಾಧ್ಯಮ ಸೆಲ್ ಕಾರ್ಯನಿರ್ವಹಿಸುತ್ತಿದ್ದು, ಮಾಧ್ಯಮಗಳಲ್ಲಿ ಪ್ರಕಟವಾಗುವ ಸಾರ್ವಜನಿಕ ಸಮಸ್ಯೆಗಳನ್ನು ದಾಖಲಿಸಿಕೊಂಡು ಸಂಬಂಧಪಟ್ಟ ಇಲಾಖೆಗಳ ಮೂಲಕ ಪರಿಹರಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲೆಯ ಮೊದಲ ಹಂತದ ಪ್ರಕ್ರಿಯೆ ಶೇ. 100ರಷ್ಟು ಡಿಜಿಟಲೀಕರಣಗೊಂಡಿದೆ ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಮಾತನಾಡಿ, ಆಡಳಿತ ಮತ್ತು ಮಾಧ್ಯಮಗಳ ನಡುವೆ ನಿರಂತರ ಸಂವಹನ ಇದ್ದಾಗ ಸಾರ್ವಜನಿಕರಿಗೆ ನಿಖರ ಮಾಹಿತಿ ತಲುಪಿಸಲು ಸಾಧ್ಯವಾಗುತ್ತದೆ ಎಂದರು.

ಮುಂದಿನ ಪೀಳಿಗೆಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು 5 ವರ್ಷಗಳ ಕುಡಿಯುವ ನೀರಿನ ಮಿಟಿಗೇಷನ್ ಪ್ಲಾನ್ ಸಿದ್ಧಪಡಿಸಲಾಗುತ್ತಿದ್ದು, ಅದರ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಲಾಗುವುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಮಾತನಾಡಿ, ಪ್ರಜಾಪ್ರಭುತ್ವದ ಪ್ರಮುಖ ಆಧಾರಸ್ತಂಭವಾಗಿರುವ ಮಾಧ್ಯಮಗಳು ಆಡಳಿತ ಮತ್ತು ಜನರ ನಡುವೆ ಮಹತ್ವದ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.

ಉತ್ತರ ಕನ್ನಡ ಜಿಲ್ಲೆಯ ಮಾಧ್ಯಮಗಳು ಸೈಬರ್ ಅಪರಾಧ ತಡೆ, ನಶಾಮುಕ್ತ ಭಾರತ ಹಾಗೂ ಮಾದಕವಸ್ತು ಮುಕ್ತ ಕರ್ನಾಟಕದಂತಹ ಅಭಿಯಾನಗಳಿಗೆ ಉತ್ತಮ ಬೆಂಬಲ ನೀಡುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಾಗಾರದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂತೋನಿ ಎಸ್.ಮರಿಯಪ್ಪ, ಗೋಕರ್ಣ ಠಾಣೆಯ ನಿರೀಕ್ಷಕ ಶ್ರೀಧರ್.ಎಸ್.ಆರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಂದಕುಮಾರ ಎಂ.ಆರ್., ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಪ್ರತೀಕ್ ಶೆಟ್ಟಿ ಹಾಗೂ ಸಿಎಫ್ಎಲ್ ಜಿಲ್ಲಾ ಸಂಯೋಜಕ ಚಿತಾರಾಮ್ ಮರಾಠಿ ತಮ್ಮ ಇಲಾಖೆಯ ಯೋಜನೆಗಳು ಮತ್ತು ಕಾರ್ಯಕ್ರಮಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ್ ಬಿ. ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು, ಪತ್ರಕರ್ತರು ಉಪಸ್ಥಿತರಿದ್ದರು.

ಭಾರತ ಸರ್ಕಾರದ ವಾರ್ತಾ ಶಾಖೆ ಬೆಂಗಳೂರು, ಉತ್ತರ ಕನ್ನಡ ಜಿಲ್ಲಾಡಳಿತ, ಜಿಪಂ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.