ಸಾರಾಂಶ
ವಾಸ್ತವಿಕ ಸತ್ಯ ಹೊರ ತರುವ ಕೆಲಸವನ್ನು ಮಾಧ್ಯಮ ಮಾಡಬೇಕು. ಅಂದಾಗ ಮಾತ್ರ ಸಮಾಜ ಉತ್ತಮ ದಾರಿಯಲ್ಲಿ ಸಾಗುತ್ತದೆ.
ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ
ಕನ್ನಡಪ್ರಭ ವಾರ್ತೆ ಕುಕನೂರು
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮಾಧ್ಯಮ ಕೂಡ ಶಕ್ತಿ ಶಾಲಿಯಾಗಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾಧ್ಯಮ ಮತ್ತು ಪತ್ರಿಕಾ ರಂಗವು ಆಯುಧವಾಗಿದ್ದು, ಒಂದು ಕಡೆ ಪ್ರಮುಖವಾಗಿ ನ್ಯಾಯಾಂಗವಿದ್ದರೇ ಇನ್ನೊಂದು ಪತ್ರಿಕಾ ರಂಗವು ಎಲ್ಲರ ತಪ್ಪು, ಸರಿಯನ್ನು ತಿಳಿಸುವ ಕಾರ್ಯ ಮಾಡುತ್ತಿದೆ. ಸಮಾಜದಲ್ಲಿ ತನ್ನದೇ ಆದ ಕೊಡುಗೆ ನೀಡಿದೆ. ವಾಸ್ತವಿಕ ಸತ್ಯ ಹೊರ ತರುವ ಕೆಲಸವನ್ನು ಮಾಧ್ಯಮ ಮಾಡಬೇಕು. ಅಂದಾಗ ಮಾತ್ರ ಸಮಾಜ ಉತ್ತಮ ದಾರಿಯಲ್ಲಿ ಸಾಗುತ್ತದೆ. ತಾಲೂಕು ಘಟಕ ಪತ್ರಿಕಾ ದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸುತ್ತಿದ್ದು, ಪಿಎಚ್‌ಡಿ, ವೈದ್ಯರು, ಹೆಚ್ಚಿನ ವ್ಯಾಸಂಗ ಮಾಡುವವರನ್ನು ಗುರುತಿಸಿ, ಸನ್ಮಾನಿಸಿ, ಪ್ರೋತ್ಸಾಹಿಸುವುದು ಉತ್ತಮ ಬೆಳೆವಣಿಗೆ ಎಂದರು.ಹಿರಿಯ ಸಾಹಿತಿ ಕೆ.ಬಿ. ಬ್ಯಾಳಿ ಮಾತನಾಡಿ, ಡಿವಿ ಗುಂಡಪ್ಪನವರು ಹಳೆ ಬೇರು ಹೊಸ ಚಿಗುರು ಕೂಡಿದರೇ ಸೊಗಸು ಎನ್ನುವಂತೆ ಈ ಪತ್ರಿಕಾ ದಿನಾಚರಣೆ ಕೂಡ ಅದೇ ರೀತಿ ಆಚರಿಸುತ್ತಿದ್ದಾರೆ. ಸಮಾಜವನ್ನು ನೋಡಿ ಪತ್ರಿಕೆ ಬರೆಯಬೇಕು. ಸಮಾಜವನ್ನು ಸರಿ ದಾರಿಗೆ ತರುವ ಪ್ರಯತ್ನ ಪತ್ರಿಕೆಗಳು ಮಾಡಬೇಕು. ನಮ್ಮ ತಾಲೂಕು ಘಟಕದ ಪತ್ರಕರ್ತರು ಸಮಾಜದ ಮುಖಿ ಕೆಲಸ ಮಾಡುತ್ತಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳನ್ನು, ವೈದ್ಯರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.
ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಸಮಾಜ ಸೇವಕ ಶಿವಣ್ಣ ರಾಯರಡ್ಡಿ, ಮಕ್ಕಳ ವೈದ್ಯ ಮಂಜುನಾಥ ವಕ್ಕಳದ ಮಾತನಾಡಿದರು.ಅನ್ನದಾನೇಶ್ವರ ಶಾಖಾ ಮಠದ ಡಾ. ಮಹಾದೇವ ಸ್ವಾಮೀಜಿ, ಇಟಗಿಯ ಶ್ರೀಶಿವಶರಣ ಗದಿಗೇಪ್ಪಜ್ಜನವರ ಸಾನಿಧ್ಯ ವಹಿಸಿದ್ದರು.
ಕಕಾನಿಪ ತಾಲೂಕಾಧ್ಯಕ್ಷ ನಾಗರಾಜ ಬೆಣಕಲ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ವೈದ್ಯರು, ಪಿಎಚ್‌ಡಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಎಪಿಎಂಸಿ ಕಾರ್ಯದರ್ಶಿ ಗುರುಸ್ವಾಮಿ ಗುಡಿ, ಪ್ರಾಕೃಪಸ ಸಂಘದ ಅಧ್ಯಕ್ಷ ಶಂಭು ಜೋಳದ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಮೇಟಿ, ರೈತ ಸಂಘ ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರುಳಿ, ಪ್ರಮುಖರಾದ ದೇವಪ್ಪ ಅರಕೇರಿ, ರೆಹಮಾನಸಾಬ್ ಮಕ್ಕಪ್ಪನವರ, ಫೀರಸಾಬ್ ದಪೇದಾರ್ ಹಾಗೂ ಪತ್ರಕರ್ತರಿದ್ದರು.