ಸರ್ಕಾರ ತಿದ್ದುವಲ್ಲಿ ಮಾಧ್ಯಮ ಪಾತ್ರ ಮಹತ್ವದ್ದು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ

| N/A | Published : Mar 10 2025, 12:18 AM IST / Updated: Mar 10 2025, 09:58 AM IST

ಸರ್ಕಾರ ತಿದ್ದುವಲ್ಲಿ ಮಾಧ್ಯಮ ಪಾತ್ರ ಮಹತ್ವದ್ದು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪಳದ ಭಾಗ್ಯನಗರದ ಕಠಾರೆ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಘಟಕ ಮತ್ತು ಕೊಪ್ಪಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಕೆಯುಡಬ್ಲ್ಯೂಜೆ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

 ಕೊಪ್ಪಳ : ನಾನು ಸೇರಿದಂತೆ ಸರ್ಕಾರ ತಪ್ಪು ಮಾಡಿದಾಗ ಅದನ್ನು ತಿದ್ದುವ ಹೊಣೆ ಮಾಧ್ಯಮದ್ದಾಗಿದೆ. ನಾವು ಟೀಕೆ ಸಕಾರಾತ್ಮಕವಾಗಿಯೇ ಸ್ವೀಕಾರ ಮಾಡಬೇಕಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.

ಇಲ್ಲಿಗೆ ಸಮೀಪದ ಭಾಗ್ಯನಗರದ ಕಠಾರೆ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಘಟಕ ಮತ್ತು ಕೊಪ್ಪಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆದ ಕೆಯುಡಬ್ಲ್ಯೂಜೆ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಬೆಳಗ್ಗೆ ಪತ್ರಿಕೆ ಓದದೆ ನಾನು ಬೇರೆ ಯಾವುದೇ ಕಾರ್ಯ ಮಾಡುವುದಿಲ್ಲ. ವರ್ಷದಲ್ಲಿ ನಾಲ್ಕು ದಿನ ಪತ್ರಿಕಾ ಕಚೇರಿಗಳಿಗೆ ರಜೆ ಇರುತ್ತದೆ. ಹೀಗಾಗಿ, ಮರುದಿನ ಪತ್ರಿಕೆಗಳು ಬರುವುದಿಲ್ಲ, ಆಗ ನಾವು ಹಿಂದಿನ ದಿನದ ಪತ್ರಿಕೆ ಓದುವ ಅಭ್ಯಾಸ ಮಾಡಿಕೊಂಡಿದ್ದೇನೆ ಎಂದರು.

ಸಮಾಜ ತಿದ್ದುವ ಮತ್ತು ಸಂಕಷ್ಟದಲ್ಲಿದ್ದವರ ಕುರಿತು ವರದಿ ಮಾಡುವ ಪತ್ರಕರ್ತರು ತಮ್ಮ ಕಷ್ಟ ಹೇಳಿಕೊಳ್ಳುವುದೇ ಇಲ್ಲ. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಕರ್ತರ ಆರೋಗ್ಯ ಚಿಕಿತ್ಸೆಗಾಗಿ ಆರೋಗ್ಯ ಸಂಜೀವಿನಿ ಜಾರಿ ಮಾಡಿದ್ದಾರೆ, ಮಾಸಾಶನ ಹೆಚ್ಚಳ ಮಾಡಿದ್ದಾರೆ ಎಂದರು.

ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ ಮಾತನಾಡಿ, ಈ ಹಿಂದೆ ಮಾಧ್ಯಮಗಳು ಸರ್ಕಾರ ಉರುಳಿಸುವ ತಾಕತ್ತು ಹೊಂದಿದ್ದವು. ಸಚಿವರನ್ನೇ ಬದಲಾಯಿಸುವ ಅನೇಕ ವರದಿ ನಾನು ಗಮನಸಿದ್ದೇನೆ. ಆದರೆ, ಇಂದು ಮಾಧ್ಯಮ ದೊಡ್ಡ ಪ್ರಮಾಣದಲ್ಲಿ ಬೆಳೆದರೂ ಸರ್ಕಾರದ ಮೇಲೆ ಪ್ರಭಾವ ಬೀರುವಂತಾಗುತ್ತಿಲ್ಲ. ಇದನ್ನು ಆತ್ಮವಿಮರ್ಶೆ ಮಾಡಬೇಕಾಗಿದೆ ಎಂದರು.

ರಾಜ್ಯದ ಪತ್ರಕರ್ತರ ಬಹುತೇಕ ಬೇಡಿಕೆ ಸರ್ಕಾರ ಈಡೇರಿಸಿದೆ. ರಾಜ್ಯದ ಎಲ್ಲ ಪತ್ರಕರ್ತರಿಗೆ ನಿವೇಶನ ನೀಡಬೇಕು ಎನ್ನುವ ಪ್ರಯತ್ನ ನಡೆದಿದೆ ಎಂದರು. ಶಾಸಕ ರಾಘವೇಂದ್ರ ಹಿಟ್ನಾಳ, ಕೊಪ್ಪಳ ವಿವಿ ಕುಲಪತಿ ಬಿ. ಕೆ. ರವಿ ಮಾತನಾಡಿದರು.

ಶಿವಾನಂದ ತಗಡೂರು ಪ್ರಾಸ್ತಾವಿಕ ಮಾತನಾಡಿದರು. ಇದೇ ವೇಳೆ ಶಿವಾನಂದ ತಗಡೂರು ಬರೆದ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಪತ್ರಕರ್ತ ಜಿ.ಎನ್‌. ಮೋಹನ್ ಅವರು, ಕೆ.ವಿ. ಪ್ರಭಾಕರ್‌, ಶಿವಾನಂದ ತಗಡೂರು, ಗಿರೀಶ್ ಕೋಟೆ ಪತ್ರಿಕೋದ್ಯಮ ಪಾತಾಳಕ್ಕೆ ಬೀಳುವ ಸಮಯದಲ್ಲಿ ಅದನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿರುವ ಯಾರೂ ಮಾಧ್ಯಮ ಲೋಕದ ಮೃತ ಬೀಜಗಳು ಅಲ್ಲ, ಪತ್ರಿಕೋದ್ಯಮ ಕಟ್ಟಿ ಬೆಳೆಸಿದವರು ಇದ್ದಾರೆ. ಪತ್ರಿಕೋದ್ಯಮದ ಕೊನೆ ಹಿರೋಗಳನ್ನು ಕಟ್ಟಿ ಕೊಡುವ ಕೆಲಸ ಈ ಪುಸ್ತಕ ಮಾಡಿದೆ ಎಂದರು.

ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ, ಹಿರಿಯ ಪತ್ರಕರ್ತ ಗಿರೀಶ್ ಕೋಟೆ, ಹಿರಿಯ ಮಾಧ್ಯಮ ಸಲಹೆಗಾರ ಲಕ್ಷ್ಮೀ ನಾರಾಯಣ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಬಾಲಭವನದ ಅಧ್ಯಕ್ಷ ನಾಯ್ಡು, ಎಸಿ ಮಹೇಶ ಮಾಲಗಿತ್ತಿ, ತಹಸೀಲ್ದಾರ್‌ ವಿಠ್ಠಲ ಚೌಗಲಾ, ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಗೇರಿ ಉಪಸ್ಥಿತರಿದ್ದರು. ಜಿಲ್ಲಾ ಸಂಘದ ಅಧ್ಯಕ್ಷ ಹನುಮಂತ ಹಳ್ಳಿಕೇರಿ ಸ್ವಾಗತಿಸಿದರು.

ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಭೀಮವ್ವ ದೊಡ್ಡ ಬಾಳಪ್ಪ ಶಿಳ್ಳಿಕ್ಯಾತರ್ ಅವರಿಗೆ ಸನ್ಮಾನ ಮಾಡಲಾಯಿತು.

ಕೆಯುಡಬ್ಲ್ಯೂಜೆ ದತ್ತಿನಿಧಿ ಪ್ರಶಸ್ತಿ

ಕನ್ನಡಪ್ರಭ ತುಮಕೂರು ಜಿಲ್ಲಾ ಹಿರಿಯ ವರದಿಗಾರ ಉಗಮ ಶ್ರೀನಿವಾಸ್ ಅವರಿಗೆ ಸಿ.ಆರ್. ಕೃಷ್ಣರಾವ್ ಪ್ರಶಸ್ತಿ, ಬೆಂಗಳೂರು ಗ್ರಾಮಾಂತರದ ಕನ್ನಡಪ್ರಭದ ದೇವನಹಳ್ಳಿಯ ವರದಿಗಾರ ಬಿ. ಪಿಳ್ಳರಾಜು ಅವರಿಗೆ ಕೆಯುಡಬ್ಲ್ಯೂಜೆ ವಿಶೇಷ ಪ್ರಶಸ್ತಿ ಸೇರಿದಂತೆ ಸಾಧನೆ ಮಾಡಿದ ರಾಜ್ಯದ ಹಲವು ಪತ್ರಕರ್ತರಿಗೆ ಕೆಯುಡಬ್ಲ್ಯೂಜೆ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರದಾನಮಾಡಲಾಯಿತು.