ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ರಾಜ್ಯ ಸರ್ಕಾರವು ವಿಜಯಪುರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸಾರ್ವಜನಿಕ-ಸಹಭಾಗಿತ್ವ (ಪಿಪಿಪಿ) ಮಾದರಿಯ ವೈದ್ಯಕೀಯ ಕಾಲೇಜನ್ನು ಕೈಬಿಟ್ಟು ಸಂಪೂರ್ಣವಾಗಿ ಸರ್ಕಾರದಿಂದಲೇ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಎಂಬ ಬೇಡಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸದ ಕಾರಣ ಹೋರಾಟ ತೀವ್ರಗೊಳಿಸಲು ಸಮಿತಿ ನಿರ್ಧರಿಸಿದೆ.ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಅವರ ನೇತೃತ್ವದ ನಿಯೋಗದಲ್ಲಿ ಬುಧವಾರ ವಿಧಾನಸೌಧದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ ನಿಯೋಗಕ್ಕೆ ಮುಖ್ಯಮಂತ್ರಿ ಅವರು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಸರ್ಕಾರದ ಹತ್ತಿರ ಅಷ್ಟೊಂದು ದುಡ್ಡು ಎಲ್ಲಿದೆ? ಪಿಪಿಪಿ ಮಾದರಿಯಲ್ಲಿ ಮಾಡುತ್ತೇವೆ. ಅದರಿಂದ ಯಾವುದೇ ಸಮಸ್ಯೆ ಇಲ್ಲ. ಹೋರಾಟ ನಿಲ್ಲಿಸಿ ಎಂದು ಮನವಿ ಮಾಡಿದರು.ಮುಖ್ಯಮಂತ್ರಿ ಹೇಳಿಕೆಯಿಂದ ಅಸಮಾಧಾನಗೊಂಡ ನಿಯೋಗದ ಸದಸ್ಯರು, ಸರ್ಕಾರವೇ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು. ಇಲ್ಲವಾದರೆ ಹೋರಾಟ ತೀವ್ರಗೊಳಿಸುತ್ತೇವೆ. ಯಾವುದೇ ಕಾರಣಕ್ಕೂ ಹೋರಾಟ ಹಿಂಪಡೆಯುದಿಲ್ಲಎಂದು ಎಚ್ಚರಿಕೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ನಾವು ಪಿಪಿಪಿ ಮಾದರಿಯಲ್ಲಿಯೇ ವೈದ್ಯಕೀಯ ಕಾಲೇಜು ಆರಂಭಿಸುತ್ತೇವೆ. ಪಿಪಿಪಿ ಬೇಡ ಅಂದರೆ ನಿಮ್ಮ ಜಿಲ್ಲೆಗೆ ವೈದ್ಯಕೀಯ ಕಾಲೇಜವೇ ಬೇಡ ಎಂದು ಪ್ರಶ್ನಿಸಿದರು. ಬಾಗಲಕೋಟೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ತರುತ್ತಿದ್ದಿರಿ. ವಿಜಯಪುರ ಜಿಲ್ಲೆಗೆ ಏಕಿಲ್ಲ ಎಂದು ಹೋರಾಟಗಾರರ ಪ್ರಶ್ನೆಗೆ, ಆಯ್ತು ಬಿಡಿ ಬಾಗಲಕೋಟೆಯಲ್ಲಿಯೂ ಕೂಡ ರದ್ದು ಮಾಡುತ್ತೇವೆ ಎಂದು ಉತ್ತರ ಕೊಟ್ಟರು.ಹೋರಾಟ ಸಮಿತಿಯು ತನ್ನ ಬೇಡಿಕೆಯ ಈಡೇರಿಕೆಗಾಗಿ ಎರಡು ತಿಂಗಳಿನಿಂದ ವಿಜಯಪುರ ನಗರದ ಅಂಬೇಡ್ಕರ್ ವೃತ್ತದಲ್ಲಿ ಧರಣಿ ನಡೆಸುತ್ತಿದೆ. ಪಂಜಿನ ಮೆರವಣಿಗೆ, ರಕ್ತ ಸಹಿ ಸಂಗ್ರಹ ಚಳುವಳಿ, ರಂಗೋಲಿ ಚಳುವಳಿ, ಕರಾಳ ದೀಪಾವಳಿ, ಪತ್ರ ಚಳುವಳಿ ಮುಂತಾದ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದೆ.
ಇದಕ್ಕೆ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗಿದೆ. ಖಾಸಗಿ ಸಹಭಾಗಿತ್ವದ ಕಾಲೇಜು ಆರಂಭಿಸಿದರೆ ಅಮೂಲ್ಯವಾಗಿರುವ ಸಾರ್ವಜನಿಕ ಅಸ್ತಿಪಾಸ್ತಿಗಳೆಲ್ಲ ಅವರ ಪಾಲಾಗುವ ಅಪಾಯವಿದೆ ಎಂದು ಹೋರಾಟಗಾರರು ಕಳವಳ ವ್ಯಕ್ತಪಡಿಸಿದರು. ಸಚಿವ ಶಿವಾನಂದ್ ಪಾಟೀಲ್ ಅವರು ಕೂಡ ನಮ್ಮ ಜೊತೆಗೂಡಿ ಮುಖ್ಯಮಂತ್ರಿ ಬಳಿ ಬರುತ್ತೇವೆ ಎಂದು ಹೇಳಿದರು ಅವರು ಗೈರಾಗಿದ್ದರು.ನಿಯೋಗದಲ್ಲಿ ಹೋರಾಟದ ಸದಸ್ಯರಾದ ಭಗವಾನ್ ರೆಡ್ಡಿ, ಅರವಿಂದ ಕುಲಕರ್ಣಿ, ಅನಿಲ ಹೊಸಮನಿ, ಲಲಿತಾ ಬಿಜ್ಜರಗಿ, ಆಕ್ರಂ ಮಾಶಾಲ್ಕರ್, ಜಿ.ಬಿ.ಪಾಟೀಲ್, ಚಂದ್ರಶೇಖರ್ ಲೆಂಡಿ, ಸುರೇಶ್ ಜೀಬಿ, ಸಿದ್ದನಗೌಡ ಪಾಟೀಲ್, ಸಿದ್ದಲಿಂಗ ಬಾಗೇವಾಡಿ, ಸುರೇಶ್ ಬಿಜಾಪುರ, ಜಗದೇವ್ ಸೂರ್ಯವಂಶಿ, ಗಿರೀಶ್ ಕಲಘಟಗಿ, ಪ್ರಭುಗೌಡ ಪಾಟೀಲ, ಡಾ.ಎಂ.ಆರ್. ಗುರಿಕರ್, ಸುಶೀಲಾ ಮಿಣಜಗಿ, ನೀಲಾಂಬಿಕಾ ಬಿರಾದಾರ್, ಹಮಿದಾ ಪಟೇಲ್, ಸಿದ್ದರಾಮ್ ಹಳ್ಳುರ್, ಕಿರಣ್ ಮೇಲಿನಕೇರಿ, ಮಲ್ಲಿಕಾರ್ಜುನ್ ಬಗಲಿ, ಮಲ್ಲಿಕಾರ್ಜುನ್ ಬಟಗಿ, ಫಯಾಜ್ ಕಲಾದಗಿ, ಶ್ರೀನಾಥ್ ಪೂಜಾರಿ, ಬಸವರಾಜ್ ತಾಳಿಕೋಟಿ, ಸಿದ್ದನಗೌಡ ಪಾಟೀಲ್, ದಾದಪೀರ್ ಮುಜಾವರ್, ನಾಗೇಶ್ ಪೂಜಾರಿ ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))