ಬಳ್ಳಾರಿ: ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾ ಜಂಟಿ ಕಾರ್ಯದರ್ಶಿ ಎಚ್. ದುರುಗಮ್ಮ ಅವರ ಆರೋಗ್ಯ ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿರುವ ಬಿಎಂಸಿಆರ್‌ಸಿ ವೈದ್ಯರ ವಿರುದ್ಧ ಕ್ರಮ ಜರುಗಿಸಬೇಕು ಹಾಗೂ ₹50 ಲಕ್ಷ ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಸದಸ್ಯರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ದಲಿತ ಸಮುದಾಯಕ್ಕೆ ಸೇರಿದ ಮಾಜಿ ದೇವದಾಸಿಯು ಆದ ಎಚ್. ದುರುಗಮ್ಮ ಅನಾರೋಗ್ಯದಿಂದ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಗರ್ಭಕೋಶದ ಆಪರೇಷನ್ ಸಂದರ್ಭದಲ್ಲಿ ಮಾಡಲಾದ ವೈದ್ಯರ ನಿರ್ಲಕ್ಷ್ಯದಿಂದ ಅವರು ಮತ್ತೆರಡು ಬಾರಿ ಆಪರೇಷನ್ ಗೆ ಒಳಗಾಗಿ ಅತೀವ ಯಾತನೆ ಮತ್ತು ತೀವ್ರ ಆರ್ಥಿಕ ಹೊರೆ ಅನುಭವಿಸುವಂತಾಯಿತು. ರೋಗಿಯು ಆರೇಳು ತಿಂಗಳು ಅನುಭವಿಸಿದ ಯಾತನೆಯ ಜೊತೆಗೆ ಸಾಲ ಮಾಡಿ ಲಕ್ಷಾಂತರ ವೆಚ್ಚ ಮಾಡಿ ಆಸ್ಪತ್ರೆಗಳಿಗೆ ತಿರುಗುವಂತಾಗಿದೆ. ವೈದ್ಯರ ನಿರ್ಲಕ್ಷ್ಯ ಕ್ಷಮಾರ್ಹವಲ್ಲ. ಹೀಗಾಗಿ, ಕೂಡಲೇ ಸಂಬಂಧಿಸಿದ ವೈದ್ಯರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ದುರುಗಮ್ಮ ಅವರಿಗೆ ₹50 ಲಕ್ಷ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಸಂಘದ ಜಿಲ್ಲಾಧ್ಯಕ್ಷೆ ಈರಮ್ಮ, ಪ್ರಧಾನ ಕಾರ್ಯದರ್ಶಿ ಎ.ಸ್ವಾಮಿ, ಜಂಟಿ ಕಾರ್ಯದರ್ಶಿ ಎಚ್. ದುರುಗಮ್ಮ, ಜಿಲ್ಲಾ ಪ್ರಮುಖರಾದ ವೀರೇಶ, ಮಾಳಮ್ಮ, ದೇವೀರಮ್ಮ, ರಮಣಮ್ಮ, ಜಲಜಾಕ್ಷಿ, ಹುಸೇನಮ್ಮ ಸೇರಿದಂತೆ ಸಂಘದ ಜಿಲ್ಲಾ ಸಮಿತಿ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮುಖ್ಯಮಂತ್ರಿಗಳಿಗೆ ಬರೆದ ಮನವಿಪತ್ರವನ್ನು ಜಿಲ್ಲಾಡಳಿತದ ಮೂಲಕ ಕಳುಹಿಸಿಕೊಡಲಾಯಿತು. ಅಪರ ಜಿಲ್ಲಾಧಿಕಾರಿ ಮನವಿ ಸ್ವೀಕರಿಸಿದರು.