ನೆರಿಯದಲ್ಲಿ ಚಿರತೆ ದಾಳಿಗೆ ಕಡವೆ ಬಲಿ

| Published : Jan 18 2024, 02:04 AM IST

ಸಾರಾಂಶ

ಬೆಳ್ತಂಗಡಿ ತಾಲೂಕಿನ ನೆರೆಯದಲ್ಲಿ ಚಿರತೆ ದಾಳಿ ನಡೆಸಿದ್ದು, ಕಡವೆ ಬಲಿಯಾಗಿದೆ. ಈ ಭಾಗದಲ್ಲಿ ಚಿರತೆ ದಾಳಿಗೆ ಈಗಾಗಲೇ ಸಾಕುನಾಯಿಗಳು, ಜಾನುವಾರುಗಳು ಬಲಿಯಾಗಿವೆ,

ಬೆಳ್ತಂಗಡಿ:

ನೆರಿಯದ ಬಯಲು ಮಲ್ಲ ಎಂಬಲ್ಲಿ ಚಿರತೆ ದಾಳಿಗೆ ಕಡವೆ ಬಲಿಯಾಗಿರುವ ಘಟನೆ ನಡೆದಿದೆ. ನೆರಿಯದ ಸರ್ಕಾರಿ ಅರಣ್ಯ ಪ್ರದೇಶದ ಬದಿಯಲ್ಲಿ ಬುಧವಾರ ಸುಮಾರು 3 ವರ್ಷ ಪ್ರಾಯದ ಕಡವೆಯ ಕಳೇಬರ ಕಂಡು ಬಂದಿದ್ದು ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಕಡವೆಯ ಕುತ್ತಿಗೆ ಭಾಗದಲ್ಲಿ ಆಳವಾದ ಗಾಯವಾಗಿದ್ದು, ಇದು ಚಿರತೆ ದಾಳಿಯಿಂದ ಉಂಟಾಗಿರುವ ಶಂಕೆ ವ್ಯಕ್ತವಾಗಿದೆ. ಸಮೀಪದ ತೋಟತ್ತಾಡಿ, ಚಿಬಿದ್ರೆ ಗ್ರಾಮಗಳಲ್ಲಿ ಆಗಾಗ ಚಿರತೆ ದಾಳಿ ನಡೆಯುತ್ತಿದ್ದು ಜಾನುವಾರು, ಸಾಕು ನಾಯಿಗಳು ಬಲಿಯಾಗುತ್ತಿವೆ. ಅರಣ್ಯ ಇಲಾಖೆಯ ಡಿಆರ್‌ಎಫ್‌ಒ ಯತೀಂದ್ರ, ಭವಾನಿ ಶಂಕರ, ಪಾಂಡುರಂಗ ಕಮತಿ, ಸಿಬ್ಬಂದಿ ಕಿಟ್ಟು ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೆರಿಯದ ಪಶು ಸಂಗೋಪನ ಇಲಾಖೆ ವೈದ್ಯಾಧಿಕಾರಿ ಡಾ. ಯತೀಶ್ ಕುಮಾರ್ ಮರಣೋತ್ತರ ಪರೀಕ್ಷೆ ನಡೆಸಿದರು. ಕಕ್ಕಿಂಜೆಯ ಸ್ನೇಕ್ ಅನಿಲ್ ಸಹಕರಿಸಿದರು. ಬಳಿಕ ಕಡವೆಯ ಮೃತದೇಹವನ್ನು ದಹನ ಮಾಡಲಾಯಿತು.----ನೀರಿನ ತೊಟ್ಟಿಯಲ್ಲಿ ಮಹಿಳೆಯ ಮೃತದೇಹ ಪತ್ತೆಪುತ್ತೂರು: ವಿವಾಹಿತ ಮಹಿಳೆ ಮೃತದೇಹ ಮನೆಯ ಸಮೀಪದ ನೀರಿನ ತೊಟ್ಟಿಯಲ್ಲಿ ಪತ್ತೆಯಾದ ಘಟನೆ ಬುಧವಾರ ಮಧ್ಯಾಹ್ನ ಪುತ್ತೂರು ತಾಲೂಕಿನ ಒಳಮೊಗರು ಗ್ರಾಮದ ಕೈಕಾರ ಎಂಬಲ್ಲಿ ನಡೆದಿದೆ.ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಅವರ ಪತ್ನಿ ಶುಭಲಕ್ಷ್ಮೀ (೫೦) ಮೃತ ಮಹಿಳೆ. ಮನೆಯ ಗುಡ್ಡದ ಮೇಲೆ ಮಣ್ಣಿನ ಟ್ಯಾಂಕಿ ನಿರ್ಮಿಸಿ ಅದಕ್ಕೆ ಟಾರ್ಪಾಲು ಹಾಕಿ ನೀರು ತುಂಬಿಸಲಾಗಿದ್ದ ತೊಟ್ಟಿಯಲ್ಲಿ ಅವರ ಶವ ಪತ್ತೆಯಾಗಿತ್ತು. ಗುಡ್ಡದ ಮೇಲೆ ಹೋದ ಶುಭಲಕ್ಷ್ಮೀ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಈ ನೀರಿನ ತೊಟ್ಟಿಗೆ ಬಿದ್ದಿದ್ದು, ಆ ಭಾಗದಲ್ಲಿ ಯಾರೂ ಇಲ್ಲದ ಕಾರಣ ನೀರಿನ ತೊಟ್ಟಿಯಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಮಗಳು ಕಾಲೇಜಿಗೆ ತೆರಳಿದ್ದು, ಪುತ್ರ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ. ಪತಿ ಪ್ರಕಾಶ್ಚಂದ್ರ ರೈ ಅವರು ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ. ಮೃತರು ಪತಿ, ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

---ಪೆರಿಯಶಾಂತಿ : ಅಕ್ರಮ ಮರಳು ಪೊಲೀಸ್ ವಶಕ್ಕೆಉಪ್ಪಿನಂಗಡಿ: ಕಡಬ ತಾಲೂಕು ಇಚಿಲಂಪಾಡಿ ಗ್ರಾಮದ ಪೆರಿಯಶಾಂತಿ ಎಂಬಲ್ಲಿ ಪರವಾನಗಿ ಇಲ್ಲದೆ ಹೊಳೆಯಿಂದ ಮರಳನ್ನು ತೆಗೆದು ಪಿಕಪ್ ವಾಹನದಲ್ಲಿ ಸಾಗಿಸುತ್ತಿದ್ದ ಪ್ರಕರಣವನ್ನು ಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿದ್ದು, ವಾಹನ ಸಮೇತ ಮರಳು ಹಾಗೂ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಕಡಬ ತಾಲೂಕಿನ ನೆಲ್ಯಾಡಿ ನಿವಾಸಿ ಸಿಬು ಜಾನ್ (೪೧) ಆರೋಪಿ. ಈತ ಜ.೧೬ರಂದು ಸಂಜೆ ಇಚಿಲಂಪಾಡಿ ಗ್ರಾಮದ ಹೊಳೆಯಿಂದ ಪಿಕ್‌ಅಪ್ ವಾಹನದಲ್ಲಿ ಇಚಿಲಂಪಾಡಿ ಗ್ರಾಮದ ಹೊಳೆಯಿಂದ ಮರಳನ್ನು ಅಕ್ರಮವಾಗಿ ತೆಗೆದು ಸಾಗಿಸುತ್ತಿದ್ದ. ಇದನ್ನು ಪತ್ತೆ ಹಚ್ಚಿದ ಉಪ್ಪಿನಂಗಡಿ ಪೊಲೀಸರು ಮರಳು, ವಾಹನ ಸಮೇತ ಆರೋಪಿಯನ್ನು ವಶಕ್ಕೆ ಪಡೆದುಕೊಂಡು, ಪ್ರಕರಣ ದಾಖಲಿಸಿದ್ದಾರೆ.