ಸಾರಾಂಶ
ಗದಗ: ವೈದ್ಯಕೀಯ ವಿದ್ಯಾರ್ಥಿಗಳು ಮಾನಸಿಕ ಗೊಂದಲದಿಂದಾಗಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಆತಂಕಕಾರಿ ಸಂಗತಿ. ಇಂತಹ ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನೆ ನಡೆಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕಾರ್ಯ ಆಗಬೇಕಿದೆ ಎಂದು ಸಾಹಿತಿ, ನಿರೂಪಕ ಡಾ. ನಾ. ಸೋಮೇಶ್ವರ ತಿಳಿಸಿದರು.ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಐಎಂಎ ಗದಗ ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಕೆಲವೊಮ್ಮೆ ಪಾಲಕ- ಪೋಷಕರ ಒತ್ತಾಸೆಯ ಮೇರೆಗೆ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಆರ್ಥಿಕ, ಕೌಟುಂಬಿಕ, ಒತ್ತಡ ಹಾಗೂ ಇನ್ನಿತರ ಕಾರಣಗಳಿಂದಾಗಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವರು. ಆತ್ಮಹತ್ಯೆವೊಂದೇ ಸಮಸ್ಯೆಗೆ ಪರಿಹಾರವಲ್ಲ. ಖಿನ್ನತೆಗೆ ಒಳಗಾದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ತಜ್ಞ ವೈದ್ಯರಿಂದ ಆಪ್ತ ಸಮಾಲೋಚನೆ, ಐಎಂಎದಿಂದ ಆತ್ಮಸ್ಥೈರ್ಯ ತುಂಬಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುವ ಕಾರ್ಯ ಆಗಬೇಕಿದೆ. ಈ ರೀತಿಯ ಕಾರ್ಯ ಗದುಗಿನಿಂದ ಆರಂಭಗೊಂಡು ರಾಜ್ಯದಲ್ಲಿ ಆಂದೋಲನ ರೀತಿಯಲ್ಲಿ ನಡೆಯಲಿ ಎಂದರು.ಐಎಂಎ ರಾಜ್ಯ ಘಟಕದ ನಿಕಟಪೂರ್ವ ಅಧ್ಯಕ್ಷ ಡಾ. ಮಧುಸೂದನ್ ಕಾರಿಗನೂರ ಮಾತನಾಡಿ, ರಾಜ್ಯ ಐಎಂಎಗೆ ಗದಗ ಐಎಂಎ ಬಹುದೊಡ್ಡ ಕೊಡುಗೆ ನೀಡಿದೆ. ಜತೆಗೆ ರಾಜ್ಯ ಐಎಂಎ ಅಧ್ಯಕ್ಷ ಸ್ಥಾನಕ್ಕೆ ಗದುಗಿನದ್ದೇ ಸಿಂಹಪಾಲು ಇದೆ. ಐಎಂಎ ಗದಗ ಶಾಖೆಯು ಶತಮಾನೋತ್ಸವದ ಸಂಭ್ರಮದ ವರ್ಷಾಚರಣೆಗೆ ಸಜ್ಜಾಗಿರುವುದು ಅತೀವ ಸಂತೋಷ ತಂದಿದೆ ಎಂದರು.ಐಎಂಎ ನೂತನ ಅಧ್ಯಕ್ಷ ಡಾ. ಶ್ರೀಧರ ಕುರಡಗಿ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಡಾ. ಸುನೀತಾ ಕುರಡಗಿ ಮಾತನಾಡಿ, ಐಎಂಎ ಗದಗ ಶಾಖೆಯ ಶತಮಾನೋತ್ಸವ ವರ್ಷಾಚರಣೆಯನ್ನು ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸಿ ಸರ್ವರ ಸಹಕಾರದೊಂದಿಗೆ ಯಶಸ್ವಿಗೊಳಿಸುವುದಾಗಿ ತಿಳಿಸಿದರು.ಈ ವೇಳೆ ಐಎಂಎ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಜಿ.ಬಿ. ಬಿಡಿನಹಾಳ, ಡಾ. ರಾಹುಲ್ ಶಿರೋಳ, ಡಾ. ಜಯರಾಜ ಪಾಟೀಲ, ಡಾ. ಸುನೀತಾ ಕುರಡಗಿ, ಡಾ. ಸಪನಾ ಜೋಷಿ, ಡಾ. ಜ್ಯೋತಿ ಪಾಟೀಲ ಇದ್ದರು. ಡಾ. ಪವನ ಪಾಟೀಲ ಸ್ವಾಗತಿಸಿದರು. ಡಾ. ತುಕಾರಾಮ ಸೋರಿ ವರದಿ ವಾಚಿಸಿದರು. ಡಾ. ಶೃತಿ ಪಾಟೀಲ ಹಾಗೂ ಡಾ. ಅರವಿಂದ ಕರಿನಾಗಣ್ಣವರ ನಿರೂಪಿಸಿದರು. ಡಾ. ರಾಹುಲ್ ಶಿರೋಳ ವಂದಿಸಿದರು.