ದಾಬಸ್‍ಪೇಟೆ: ನೆಲಮಂಗಲ ತಾಲೂಕಿನ ಕಣ್ವ ಶಾಲೆ ಸಮೀಪದ ಮಲ್ಲಾಪುರ ಬಡಾವಣೆ ರಸ್ತೆ ಬದಿ ಅವಧಿ ಮೀರಿದ ಮಾತ್ರೆಗಳು ಹಾಗೂ ವೈದ್ಯಕೀಯ ತ್ಯಾಜ್ಯವನ್ನು ಅಕ್ರಮವಾಗಿ ಸುರಿದಿರುವ ಪ್ರಕರಣದ ಸಂಬಂಧ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ನೆಲಮಂಗಲ ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಕುರಿತು ಸಾರ್ವಜನಿಕರು ಛಾಯಾಚಿತ್ರಗಳೊಂದಿಗೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ತಹಸೀಲ್ದಾರರು, ಕಂದಾಯ ನಿರೀಕ್ಷಕ ಚಂದ್ರು, ಗ್ರಾಮ ಆಡಳಿತಾಧಿಕಾರಿ ರೋಹಿತ್ ಹಾಗೂ ಔಷಧಿ ಪರಿಶೀಲನಾ ಇಲಾಖೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು. ವೈದ್ಯಕೀಯ ತ್ಯಾಜ್ಯ ಎಸೆದಿರುವ ಆಸ್ಪತ್ರೆ ಅಥವಾ ಔಷಧ ಅಂಗಡಿ ಪತ್ತೆಹಚ್ಚಲು ಸ್ಥಳದಲ್ಲಿ ದೊರೆತ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡರು.ಎಫ್‍ಐಆರ್ ದಾಖಲಿಸಲು ಸೂಚನೆ:
ಸಾರ್ವಜನಿಕ ಸ್ಥಳಗಳಲ್ಲಿ ವೈದ್ಯಕೀಯ ತ್ಯಾಜ್ಯ ಸುರಿದು ಪರಿಸರ ಹಾಗೂ ಸಾರ್ವಜನಿಕರ ಆರೋಗ್ಯಕ್ಕೆ ಅಪಾಯ ಉಂಟು ಮಾಡುವವರ ವಿರುದ್ಧ ಎಫ್‍ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.ಆಸ್ಪತ್ರೆಗಳು ಹಾಗೂ ಔಷಧ ಅಂಗಡಿಗಳು ನಿಯಮಾನುಸಾರ ತ್ಯಾಜ್ಯ ವಿಲೇವಾರಿ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಎಸೆದು ಹೋಗುವುದು ಗಂಭೀರ ಅಪರಾಧ ಎಂದು ತಹಸೀಲ್ದಾರ್ ಎಚ್ಚರಿಸಿದರು.
ಪೋಟೋ 10 :
ರಸ್ತೆ ಬದಿ ಸುರಿದಿರುವ ಅವಧಿ ಮೀರಿದ ಮಾತ್ರೆ ಹಾಗೂ ವೈದ್ಯಕೀಯ ತ್ಯಾಜ್ಯ ರಾಶಿ.