ದಾಬಸ್‍ಪೇಟೆ: ಕೆರೆಯಲ್ಲಿ ವೈದ್ಯಕೀಯ ತ್ಯಾಜ್ಯ ಸುರಿದವರ ಮೇಲೆ ಕಾನೂನು ಕ್ರಮಕ್ಕೆ ಸಚಿವ ಈಶ್ವರ್ ಖಂಡ್ರೆ ಸೂಚಿಸಿದ್ದರೂ ಕ್ರಮ ತೆಗೆದುಕೊಳ್ಳದ ತಾಲೂಕು ವೈದ್ಯಾಧಿಕಾರಿ ವಿರುದ್ಧ ಯಂಟಗಾನಹಳ್ಳಿ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು
ದಾಬಸ್‍ಪೇಟೆ: ಕೆರೆಯಲ್ಲಿ ವೈದ್ಯಕೀಯ ತ್ಯಾಜ್ಯ ಸುರಿದವರ ಮೇಲೆ ಕಾನೂನು ಕ್ರಮಕ್ಕೆ ಸಚಿವ ಈಶ್ವರ್ ಖಂಡ್ರೆ ಸೂಚಿಸಿದ್ದರೂ ಕ್ರಮ ತೆಗೆದುಕೊಳ್ಳದ ತಾಲೂಕು ವೈದ್ಯಾಧಿಕಾರಿ ವಿರುದ್ಧ ಯಂಟಗಾನಹಳ್ಳಿ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಕಳೆದ ನಾಲ್ಕೈದು ದಿನಗಳ ಹಿಂದೆ ಯಂಟಗಾನಹಳ್ಳಿ ಗ್ರಾಮದ ಕೆರೆಯಲ್ಲಿ ತ್ಯಾಜ್ಯ ಸುರಿದ ಬಗ್ಗೆ ಗ್ರಾಮಸ್ಥರು ಸಚಿವರಿಗೆ ದೂರು ನೀಡಿದಾಗ, ಸ್ಥಳ ಪರಿಶೀಲಿಸಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಇಒಗೆ ಸೂಚಿಸಿದ್ದರು.ತ್ಯಾಜ್ಯ ಸುರಿದ ಸ್ಥಳ ಪರಿಶೀಲಿಸಿದ ತಾಪಂ ಇಒ ಬಿಂದು, ಕ್ರಮ ವಹಿಸುವಂತೆ ತಾಲೂಕು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಕ್ರಮ ವಹಿಸದೇ ಖಾಸಗಿ ಕ್ಲಿನಿಕ್ ವೈದ್ಯನಿಗೆ ಕರೆ ಮಾಡಿ ತ್ಯಾಜ್ಯವನ್ನು ಜೆಸಿಬಿಯಲ್ಲಿ ಮುಚ್ಚುವಂತೆ ತಿಳಿಸಿದ್ದರು. ಖಾಸಗಿ ಕ್ಲಿನಿಕ್ ವೈದ್ಯ ಕೆರೆಯಲ್ಲಿ ಗುಂಡಿ ತೆಗೆದು ಮುಚ್ಚುವಾಗ ಗ್ರಾಮಸ್ಥರು ಹಿಡಿದು ಸ್ಥಳಕ್ಕೆ ಟಿಎಚ್‍ಒ ಹಾಗೂ ಅಧಿಕಾರಿಗಳು ಬರುವಂತೆ ಆಗ್ರಹಿಸಿ, ತ್ಯಾಜ್ಯ ಸುರಿದ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.
ಸಾಕ್ಷಿನಾಶಕ್ಕೆ ಪ್ರಯತ್ನ:ವೈದ್ಯಕೀಯ ತ್ಯಾಜ್ಯವನ್ನು ಆರೋಗ್ಯ ಇಲಾಖೆ ನಿಯಮದಂತೆ ತೆರವು ಮಾಡಬೇಕಿತ್ತು, ಆದರೆ ನಿರ್ಲಕ್ಷ್ಯ ಮಾಡಿದ್ದಲ್ಲದೆ, ಟಿಎಚ್‍ಒ ಹೇಳಿದರೆಂದು ವೈದ್ಯಕೀಯ ತ್ಯಾಜ್ಯವನ್ನು ಕೆರೆಯಲ್ಲೇ ಗುಂಡಿ ತೋಡಿ ಮುಚ್ಚಲು ಮುಂದಾಗಿದ್ದು, ಗ್ರಾಮಸ್ಥರು ಸ್ಥಳಕ್ಕೆ ಟಿಎಚ್‍ಒ ಕರೆಸಿ ಪ್ರಶ್ನಿಸಿದಾಗ ತಪ್ಪಾಗಿದೆ, ಮುಂದೆ ಈ ರೀತಿ ಆಗದಂತೆ ನಡೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ದೂರು ದಾಖಲಿಸಿಲ್ಲ:ಖಾಸಗಿ ಕ್ಲಿನಿಕ್‍ಗೆ ಹೋಗಿ ಬಂದ ಟಿಎಚ್‍ಒ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿಲ್ಲ. ಕಾರಣ ಕೇಳಿದರೆ ಟೈಪಿಂಗ್ ಮಾಡಿ ಕೊಡಿ ಕೈ ಬರಹ ಬೇಡ ಎಂದರೂ ಅದಕ್ಕೆ ವಾಪಸ್ ಬಂದೆವು ಎಂದು ಟಿಎಚ್‍ಒ ಪದ್ಮಿನಿ ಗ್ರಾಮಸ್ಥರಿಗೆ ತಿಳಿಸಿದ್ದು ಶನಿವಾರ ಸಂಜೆ 7 ಗಂಟೆಯಾದರೂ ದೂರು ದಾಖಲಾಗಿರಲಿಲ್ಲ ಎಂದು ಟಿಎಚ್‍ಒ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಬಳಿಕ ದೂರು:ಗ್ರಾಮಸ್ಥರು ಪ್ರತಿಭಟಿಸಿದ ಬಳಿಕ ಟಿಎಚ್‍ಒ ಎಚ್ಚೆತ್ತುಕೊಂಡು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತ್ಯಾಜ್ಯ ಸುರಿದಿದ್ದ ಮಾತೃಶ್ರೀ ಕ್ಲಿನಿಕ್ ಡಾ.ಅರುಣ್ ಗಿರೀಶ್ ಸಾಗರ್ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಪ್ರಕರಣ ದಾಖಲಿಸಿದ್ದಾರೆ.
ಕೋಟ್.......ತ್ಯಾಜ್ಯ ಸುರಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ತ್ಯಾಜ್ಯ ಸುರಿದಿರುವ ವೈದ್ಯರ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಕಾನೂನು ಕ್ರಮ ಕೈಗೊಳ್ಳಲಾಗುವುದು.
ಡಾ.ಪದ್ಮಿನಿ, ತಾಲೂಕು ವೈದ್ಯಾಧಿಕಾರಿಪೋಟೋ 1 : ಯಂಟಗಾನಹಳ್ಳಿ ಕೆರೆಯಲ್ಲಿ ವೈದ್ಯಕೀಯ ತ್ಯಾಜ್ಯ ಸುರಿದವರ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.