ಸಾರಾಂಶ
ಕನ್ನಡಪ್ರಭ, ತುಮಕೂರು
ಆಸ್ಪತ್ರೆಗಳಲ್ಲಿ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆ, ಮತ್ತು ಶಿಷ್ಟಾಚಾರಗಳನ್ನು ಪಾಲಿಸುವುದು, ಸೋಂಕುಗಳನ್ನು ತಡೆಗಟ್ಟಲು ಮತ್ತು ಸಾರ್ವಜನಿಕ ಆರೋಗ್ಯವನ್ನು ರಕ್ಷಿಸಲು ಕೈಗೊಳ್ಳಬೇಕಾದ ಮಾರ್ಗೋಪಾಯಗಳ ಕುರಿತು ಒಂದು ದಿನದ ಕಾರ್ಯಾಗಾರವನ್ನು ನಗರದ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು.ಕರ್ನಾಟಕ ಅಲೈಡ್ & ಹೆಲ್ತ್ ಕೇರ್ ಪ್ರೊಫೆಷನಲ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ನಗರದ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ನಾಗಾರ್ಜುನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿದ ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ.ಬಿ. ಲಿಂಗೇಗೌಡ ಆರೋಗ್ಯ ಕ್ಷೇತ್ರದ ವೃತ್ತಿಪರರಿಗೆ ಉತ್ತಮ ಕಾರ್ಯತತ್ಪರತೆಯ ಪರಿಸ್ಥಿತಿಗಳನ್ನು ಅನಾವರಣಗೊಳಿಸುವುದು, ವೃತ್ತಿಜೀವನದ ನಿರಂತರ ಜ್ಞಾನದ ಉನ್ನತೀಕರಣ, ಮಾಹಿತಿ ಮತ್ತು ಆಲೋಚನೆಗಳು, ಜ್ಞಾನ, ಅನುಭವಗಳು ಮತ್ತು ಉತ್ತಮ ಅಭ್ಯಾಸಗಳ ಕಲಿಕೆಗೆ ಕಾರ್ಯಾಗಾರಗಳು ಅನುಕೂಲವಾಗುತ್ತವೆ ಎಂದರು.
ಸಾಹೇ ರಿಜಿಸ್ಟಾರ್ ಡಾ.ಅಶೋಕ್ ಮೆಹ್ತಾ ಮಾತನಾಡಿ, ಆಸ್ಪತ್ರೆಯ ವ್ಯವಸ್ಥೆಯಲ್ಲಿ, ಪ್ರಯೋಗಾಲಯದಲ್ಲಿ ಗುಣಮಟ್ಟ ನಿಯಂತ್ರಣ , ವಿಶ್ವಾಸಾರ್ಹ ಮತ್ತು ಸಕಾಲಿಕ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳುವುದು ವೈದ್ಯಕೀಯ ಕ್ಷೇತ್ರದ ವೃತ್ತಿಪರ ಕಾರ್ಯಕತರ ಮೇಲೆ ಕೇಂದ್ರೀಕರಿಸುತ್ತದೆ. ರೋಗಿಗಳ ಯೋಗಕ್ಷೇಮಕ್ಕೆ ಆದ್ಯತೆ ನೀಡಬೇಕು ಎಂದರು.ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ಉಪಪ್ರಾಂಶುಪಾಲ ಡಾ. ಪ್ರಭಾಕರ್ ಮಾತನಾಡಿ, ಅಲೈಡ್ ಹೆಲ್ತ್ ಮತ್ತು ಹೆಲ್ತ್ ಕೇರ್ ಪ್ರೊಫೆಷನಲ್ಸ್ ಸದಸ್ಯರ ವೃತ್ತಿಜೀವನವನ್ನು ಉತ್ಕೃಷ್ಟಗೊಳಿಸಲು ಕ್ಲಿನಿಕಲ್ ಸ್ನೇಹಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಅನಾವರಣಗೊಳಿಸುವುದು ಈ ಕಾರ್ಯಾಗಾರದ ಉದ್ದೇಶವಾಗಿದೆ ಎಂದರು.
ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ಸೂಕ್ಷ್ಮ ಜೀವವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಎಸ್.ಸಿ. ಚಂದ್ರಶೇಖರ್, ಆಸ್ಪತ್ರೆಗಳಲ್ಲಿ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆಯು ಹಲವಾರು ಸವಾಲುಗಳನ್ನು ಒಳಗೊಂಡಿದೆ. ತಾಜ್ಯಗಳ ಸಂಗ್ರಹಣೆ, ಪ್ರತ್ಯೇಕತೆ, ಸಂಸ್ಕರಣೆ ಮತ್ತು ವಿಲೇವಾರಿ ಇಂದು ಬಹುದೊಡ್ಡ ಸವಾಲಗಿದೆ. ಆರೋಗ್ಯ ಕಾರ್ಯಕರ್ತರು, ರೋಗಿಗಳು ಮತ್ತು ಪರಿಸರದ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಳ್ಳುವುದರ ಜೊತೆಗೆ ನಿಯಮಗಳು ಮತ್ತು ಶಿಷ್ಟಾಚಾರಗಳನ್ನು ಪಾಲಿಸುವತ್ತ ಗಮನಹರಿಸಬೇಕು. ಅಲ್ಲದೆ ಸೋಂಕುಗಳನ್ನು ತಡೆಗಟ್ಟಲು ಮತ್ತು ಸಾರ್ವಜನಿಕ ಆರೋಗ್ಯವನ್ನು ರಕ್ಷಿಸಲು ಅನುಸರಿಸಬೇಕಾದ ಕಾರ್ಯತತ್ಪರತೆ ಮತ್ತು ಗುಣಗಳನ್ನು ವಿವರಿಸಿದರು.ಆಪರೇಷನ್ ಥಿಯೇಟರ್ ಮತ್ತು ಅರಿವಳಿಕೆಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ಎಸ್.ಬಿ.ಗಂಗಾಧರ್, ಸಾಹೇ ವಿವಿ ಪರೀಕ್ಷಾಂಗ ನಿಯಂತ್ರಕರಾದ ಡಾ.ಗುರುಶಂಕರ್, ಕಾಲೇಜಿನ ವೈದ್ಯಕೀಯ ಅಧೀಕ್ಷಕರಾದ ಡಾ.ರಾಜೇಶ್ವರಿ ದೇವಿ, ವೈದ್ಯರಾದ ಡಾ.ಚೈತ್ರಾ.ಎಚ್., ಡಾ.ಎಚ್. ಆರ್.ವಿನೋದ್ ಕುಮಾರ್, ಡಾ.ಟಿ.ನಂದಿನಿ, ಡಾ.ರಮೇಶ್, ಡಾ.ಮಸ್ತಾನ್, ಡಾ.ಶ್ರದ್ಧಾ, ಡಾ.ಕೊಟ್ರೇಶ್, ಡಾ.ಸುರೇಶ್ ಬಾಬು, ಅನಿಲ್ ಕುಮಾರ್, ನೇಹಾ ಅವರು ಪ್ರಾಯೋಗಿಕವಾಗಿ ಉಪನ್ಯಾಸ ನೀಡಿದರು.
ಸೂಕ್ಷ್ಮ ಜೀವವಿಜ್ಞಾನ ವಿಭಾಗದ ಪ್ರಾಧ್ಯಾಪಕರು ಹಾಗೂ ಕಾರ್ಯಾಗಾರದ ಸಂಯೋಜಕರಾದ ಡಾ. ವೀಣಾ ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತುಮಕೂರು ನಗರದ ಶ್ರೀದೇವಿ, ಸಿದ್ದಗಂಗಾ ವೈದ್ಯಕೀಯ ಕಾಲೇಜು ಸೇರಿದಂತೆ ವಿವಿಧ ಕಡೆಯಿಂದ ೧೦೦ಕ್ಕೂ ಹೆಚ್ಚು ಅಲೈಡ್ & ಹೆಲ್ತ್ಕೇರ್ ವಿಭಾಗದ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.