ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಭಾರತೀಯ ವೈದ್ಯಕೀಯ ಪದ್ಧತಿಗೆ ದೊಡ್ಡ ಪರಂಪರೆ ಇದ್ದು, ಆಯುರ್ವೇದದಲ್ಲಿ ಎಲ್ಲ ರೋಗಗಳಿಗೂ ಔಷಧ ಇದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ಬಾದಾಮಿಯ ವೀರ ಪುಲಕೇಶಿ ಗ್ರಾಮೀಣ ಆಯುರ್ವೇದಿಕ ವೈದ್ಯಕೀಯ ಮಹಾವಿದ್ಯಾಲಯದ ದೀಕ್ಷಾಂತ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈದ್ಯ ವೃತ್ತಿ ಅಂದರೆ ನೋಬಲ್ ಪೊಫೆಷನ್. ನೀವು ಎಂಜನೀಯರ್, ಬಿಜಿನೆಸ್ ಮ್ಯಾನ್, ಪೊಲಿಟಿಷಿಯನ್ ಆಗಬಹುದಿತ್ತು. ಆದರೆ, ನೀವು ವೈದ್ಯರಾಗಲು ಆಶೀರ್ವಾದ ಪಡೆದುಕೊಂಡಿದ್ದೀರಿ. ಇದು ಗೌರವದ ವೃತ್ತಿ ಎಂದರೆ ಗೌರವದ ಜೀವನ., ಯಾರು ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳ ನೋವನ್ನು ದೂರ ಮಾಡುತ್ತಾರೋ ಅವರು ವೈದ್ಯರು ಎಂದು ತಿಳಿಸಿದರು.ಬಸವಣ್ಣನವರು ದಯವೇ ಧರ್ಮದ ಮೂಲವಯ್ಯ ಎಂದು ಹೇಳಿದರು. ಸಕಲ ಜೀವಾತ್ಮರಿಗೆ ಲೇಸನ್ನು ಬಯಸಯ್ಯ ಎಂದು ಹೇಳಿದ್ದಾರೆ. ವೈದ್ಯರು ಖುಷಿಯಾಗಿದ್ದರೆ ಎಲ್ಲರೂ ಖುಷಿಯಾಗಿರುತ್ತಾರೆ. ವೈದ್ಯರು ತಮ್ಮ ಮನೆಯ ಜಗಳವನ್ನು ತಂದು ರೋಗಿಯ ಮೇಲೆ ಹಾಕಿದರೆ ರೋಗಿಯ ಪರಿಸ್ಥಿತಿ ಏನಾಗುತ್ತದೆ. ಹೀಗಾಗಿ ವೈದ್ಯರು ಯಾವಾಗಲೂ ನಗುನಗುತ್ತ ಇರಬೇಕು. ನಗುವು ಮನಸ್ಸಿನ ಆರೋಗ್ಯದ ಸಂಕೇತ, ಮನಸ್ಸು ಆರೋಗ್ಯವಾಗಿದ್ದರೆ ಮುಖದಲ್ಲಿ ಅದರ ಪ್ರತಿಬಿಂಬ ಕಾಣಿಸುತ್ತದೆ ಎಂದರು.ನೀವು ಜ್ಞಾನ ಹೊಂದಿರಬೇಕು. ಮನುಷ್ಯ ಮತ್ತು ಪ್ರಾಣಿಗಳ ನಡುವೆ ಇರುವ ವ್ಯತ್ಯಾಸವೇ ಜ್ಞಾನ, ಜ್ಞಾನದಿಂದ ವಿಜ್ಞಾನ, ಅದರಿಂದ ತಂತಜ್ಞಾನ, ತಂತಜ್ಞಾನದಿಂದ ತಂತ್ರಾಂಶಜ್ಞಾನ, ಇದನ್ನು ಪಡೆದರೆ ನೀವು ಯಶಸ್ವಿಯಾಗುತ್ತೀರಿ. ನಿಮ್ಮ ಯಶಸ್ಸನ್ನು ನೀವು ಹೇಗೆ ಅಳತೆ ಮಾಡುತ್ತೀರಿ. ಎಲ್ಲ ರೋಗಿಗಳು ಆಸ್ಪತ್ರೆಯಿಂದ ಹೊರ ಹೋಗುವಾಗ ಅವರ ರೋಗ ಗುಣವಾದರೆ ನಗುತ್ತ ಹೋಗುತ್ತಾರೆ. ಅವರು ನಗುತ್ತ ಹೋಗುವಂತೆ ಮಾಡುವ ಕೆಲಸ ವೈದ್ಯರು ಮಾಡುತ್ತಾರೆ. ವೈದ್ಯರು ಅಂದರೆ ದೇವರು ಇದ್ದಂತೆ, ಅವರು ಎಲ್ಲ ಸಮಸ್ಯೆಗಳನ್ನು ಬಗೆ ಹರಿಸುತ್ತಾರೆ ಎಂದರು.ವೈದ್ಯರು ಮತ್ತು ಮೆಡಿಕಲ್ ಶಾಪ್ ನವರ ನಡುವೆ ಒಂದು ರೀತಿಯ ಸಂಬಂಧ ಇರುತ್ತದೆ. ಹಣ ಮಾಡುವುದು ಒಂದು ಭಾಗ, ಆದರೆ, ಹಣ ಕೆಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ನೀವು ಎಷ್ಟು ಜನರನ್ನು ಖುಷಿಯಾಗಿಡುತ್ತೀರಿ ಅದು ಬಹಳ ಮುಖ್ಯವಾಗುತ್ತದೆ. ಬಾದಾಮಿ ಚಾಲುಕ್ಯ ಸಾಮಾಜ್ಯ ಇಮ್ಮಡಿ ಪುಲಕೇಶಿಯಿಂದ ಆಳಲ್ಪಟ್ಟಿದೆ. ಪುಲಕೇಶಿ ಬಹಳ ಶೂರನಾಗಿದ್ದ. ಅವನು ಉತ್ತರದ ರಾಜ ಹರ್ಷವರ್ಧನನ ವಿರುದ್ಧ ಯುದ್ಧ ಮಾಡಿ ಅವನನ್ನು ಸೋಲಿಸುತ್ತಾನೆ. ಹರ್ಷವರ್ಧನನ್ನು ಸೋಲಿಸಿದ ದಕ್ಷಿಣದ ಏಕೈಕ ರಾಜ ಇಮ್ಮಡಿ ಪುಲಕೇಶಿ, ಇಂತಹ ಶೌರ್ಯದ ನಾಡಿನಿಂದ ನೀವು ಪದವಿ ಪಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದರು.ಅನೇಕ ಹಿರಿಯರು ಈ ಸಂಸ್ಥೆಯನ್ನು ಬಹಳ ಕಷ್ಟ ಪಟ್ಟು ಕಟ್ಟಿದ್ದಾರೆ. ಈ ಸಂಸ್ಥೆ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯಲಿ, ಮುಂದೆ ಒಂದು ವೈದ್ಯಕೀಯ ಕಾಲೇಜು ಆಗಲಿ, ಕೇಂದ್ರ ಸರ್ಕಾರ ಮೆಡಿಕಲ್ ಕಾಲೇಜುಗಳನ್ನು ಸ್ಥಾಪನೆಗೆ ಸಾಕಷ್ಟು ಬೆಂಬಲ ಕೊಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಅವಧಿಯಲ್ಲಿ ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳು ಸ್ಥಾಪನೆಯಾಗಿವೆ ಎಂದು ತಿಳಿಸಿದರು.ನಾವು ಭಾರತೀಯ ವೈದ್ಯಕೀಯ ಪದ್ಧತಿಯನ್ನು ನಂಬುತ್ತೇವೆ. ಭಾರತೀಯ ವೈದ್ಯಕೀಯ ಪದ್ಧತಿಗೆ ದೊಡ್ಡ ಪರಂಪರೆ ಇದೆ. ಪಾಶ್ಚಿಮಾತ್ಮರು ಬರುವ ಮೊದಲೇ ಇಲ್ಲಿನ ವೈದ್ಯಕೀಯ ಪದ್ಧತಿಯಲ್ಲಿ ಎಲ್ಲ ರೋಗಗಳಿಗೂ ಔಷಧ ಇತ್ತು. ಆಯುರ್ವೇದಿಕ್ ಪದ್ಧತಿಯಲ್ಲಿಯೇ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿತ್ತು. ಆಯುರ್ವೆದಿಕ್‌ನಲ್ಲಿ ಶಾಸ್ತ್ರತ ಪರಿಹಾರ ಇದೆ. ಅಲೋಪತಿ ಮತ್ತು ಆಯುರ್ವೇದಿಕ್ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಅಲೋಪತಿ ನೋವನ್ನು ಮಾತ್ರ ಕಡಿಮೆ ಮಾಡುತ್ತದೆ. ಆಯುರ್ವೇದ ರೋಗದ ಮೂಲವನ್ನೇ ತೆಗೆದು ಹಾಕುತ್ತದೆ. ವೈದ್ಯಕೀಯ ವೃತ್ತಿ ಒಂದು ಗೌರವ, ಈ ಪದವಿ ಪಡೆದು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿ, ವೃತ್ತಿಪರರಾಗಿ ಕೆಲಸ ಮಾಡಿ, ಎಲ್ಲರನ್ನೂ ಖುಷಿಯಾಗಿರುವಂತೆ ಮಾಡಿ ಎಂದು ಕಿವಿ ಮಾತು ಹೇಳಿದರು.ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಎಸ್.ಕೆ.ಪಟ್ಟಣಶೆಟ್ಟಿ, ಡಾ.ಕಾಂತಿಕಿರಣ್, ಎಸ್.ಬಿ.ನಿಡಗುಂದಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.