ಜಿಲ್ಲಾ ಕಾರಾಗೃಹ ಆವರಣದಲ್ಲಿ ವಿಶ್ವ ಧ್ಯಾನ ದಿನಾಚರಣೆ ಅಂಗವಾಗಿ ಖೈದಿಗಳಿಗೆ ಏರ್ಪಡಿಸಿದ್ದ ಧ್ಯಾನ ಹಾಗೂ ಮನಃ ಪರಿವರ್ತನಾ ಕಾರ್ಯಕ್ರಮವನ್ನು ಜಿಲ್ಲಾ ಕಾರಾಗೃಹದ ಅಧೀಕ್ಷಕ ಸಿದ್ಧರಾಮ ಬಿ. ಪಾಟೀಲ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಧ್ಯಾನ ಎಂಬುದು ಒತ್ತಡಗಳಿಂದ ದೂರ ಸರಿಯುವ ಸರಳ ಮಾರ್ಗವಾಗಿದೆ ಎಂದು ಜಿಲ್ಲಾ ಕಾರಾಗೃಹದ ಅಧೀಕ್ಷಕ ಸಿದ್ಧರಾಮ ಬಿ.ಪಾಟೀಲ್ ಹೇಳಿದರು.ಜಿಲ್ಲಾ ಕಾರಾಗೃಹ ಆವರಣದಲ್ಲಿ ಚಿನ್ಮಯ ಮಯೂರ ಯೋಗ ಕ್ರೀಡಾ ಸಾಂಸ್ಕೃತಿಕ ಸಂಸ್ಥೆ, ಜಿಲ್ಲಾ ಕಾರಾಗೃಹ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ವಿಶ್ವ ಧ್ಯಾನ ದಿನಾಚರಣೆ ಅಂಗವಾಗಿ ಖೈದಿಗಳಿಗೆ ಏರ್ಪಡಿಸಿದ್ದ ಧ್ಯಾನ ಹಾಗೂ ಮನಃ ಪರಿವರ್ತನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಧ್ಯಾನ ಪದವು ಆಧ್ಯಾತ್ಮಿಕ ಶಕ್ತಿ ತುಂಬಿರುವುದರಿಂದ ಅದರ ಮಹತ್ವವನ್ನು ಅರಿಯುವಲ್ಲಿ ಜನಸಾಮಾನ್ಯರೂ ಸೇರಿದಂತೆ ಜ್ಞಾನವಿರುವ ಎಲ್ಲಾ ಜೀವಿಗಳು ಅಶಕ್ತರಾಗಿದ್ದಾರೆ .ಇಡೀ ವಿಶ್ವದಲ್ಲೇ ಎರಡನೇ ಬಾರಿಗೆ ವಿಶ್ವಧ್ಯಾನ ದಿನಾಚರಣೆ ಆಚರಿಸುತ್ತಿದೆ. ಬುದ್ಧಿಮತ್ತೆಯಿಂದ ವಿಕೃತ ಮನಸ್ಸುಗಳಿಗೆ ಒಳಗಾಗದೆ ನೆಮ್ಮದಿ, ಸುಖ, ಶಾಂತಿ ನಿತ್ಯದ ಬದುಕಿನಲ್ಲಿ ನೆಲೆಸುವಂತೆ ಮಾಡುವ ಶಕ್ತಿ ಧ್ಯಾನಕ್ಕಿದೆ ಎಂದರು.ಪ್ರತಿದಿನ ಧ್ಯಾನಕ್ಕೊಂದು ಸಮಯ ಮೀಸಲಿಡಬೇಕು. ಮನುಷ್ಯ ಇಂದು ಸಕಲ ರೋಗ ಬಾಧ್ಯಸ್ಥನಾಗಿದ್ದಾನೆ. ಆಂಗಿಕ ಸೌಷ್ಠವ ಹಾಗೂ ಮಾನಸಿಕ ಆರೋಗ್ಯ ಕಳೆದುಕೊಳ್ಳಬಾರದು. ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಟ್ಟರೆ ಅನಾಹುತಗಳಿಗೆ ನಾಂದಿಯಾಗುತ್ತದೆ. ಹಾಗಾಗಿ ಪ್ರತಿಯೊಬ್ಬರು ಧ್ಯಾನವನ್ನು ಜೀವನದಲ್ಲಿ ಅಳವಡಿಸಿಕೊಂಡು ತೃಪ್ತಿದಾಯಕ ಬದುಕನ್ನು ಕಂಡುಕೊಳ್ಳಬೇಕು ಎಂದರು.
ಚಿನ್ಮಯ ಮಯೂರ ಯೋಗ ಕ್ರೀಡಾ ಸಾಂಸ್ಕೃತಿಕ ಸಂಸ್ಥೆ ಕಾರ್ಯದರ್ಶಿ ಮತ್ತು ಯೋಗ ಚಿಕಿತ್ಸಕ ಎಂ.ಬಿ.ಮುರುಳಿ ಧ್ಯಾನ ಮಾಡುವ ವಿಧಾನಗಳ ಬಗ್ಗೆ ಮಾಹಿತಿಯೊಂದಿಗೆ ಪ್ರಾಯೋಗಿಕ ಆಸನಗಳನ್ನು ತಿಳಿಸಿಕೊಟ್ಟರು.ಈ ವೇಳೆ ಜೈಲರ್ ರಾಜೇಂದ್ರ ಕೋಪರ್ಡೆ, ಸಹಾಯಕ ಜೈಲರ್ ರಾಮಣ್ಣ ಎರಕ್ಕಲ್, ಜೈಲಿನ ಶಿಕ್ಷಕ ಆರ್.ಎ.ಶ್ರೀರಾಮರೆಡ್ಡಿ, ಜೈಲು ಸಿಬ್ಬಂದಿಗಳಾದ ಪ್ರವೀಣ, ಸೌಭಾಗ್ಯ, ಪಂಕಜ, ವಿಜಯಲಕ್ಷಿö್ಮ ಬಸವರಾಜ್, ವಿಜಯ್ ಹಾಗೂ ತಾರಾ ಉಪಸ್ಥಿತರಿದ್ದರು.