ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಸರ್ಕಾರಿ ಅಭಿಯೋಜನಾ ಇಲಾಖೆ ಮತ್ತು ಜಿಲ್ಲಾ ಆಯುಷ್ ಇಲಾಖೆ ಆಶ್ರಯದಲ್ಲಿ ನಗರದ ನ್ಯಾಯಾಲಯದ ಸಂಕೀರ್ಣದಲ್ಲಿ ‘ಆರೋಗ್ಯ ವಯೋವೃದ್ಧಿಗಾಗಿ ಯೋಗ’ ಎಂಬ ಘೋಷವಾಕ್ಯದಡಿ 12ನೇ ಅಂತರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಸಿ.ಕೆ. ಬಸವರಾಜು ಮಾತನಾಡಿ, ಯೋಗ ಮತ್ತು ಧ್ಯಾನ ಮನುಷ್ಯನ ಜೀವನಕ್ಕೆ ಮುಖ್ಯವಾಗಿದೆ. ದಿನನಿತ್ಯ ಒತ್ತಡದ ಬದುಕಿನಲ್ಲಿರುವ ನಮಗೆ ಯೋಗ ಅವಶ್ಯಕವಾಗಿದೆ. ಇದು ಇಂದಿಗೆ ಸೀಮಿತವಾಗದೆ ಪ್ರತಿ ದಿನ ಯೋಗಭ್ಯಾಸ ಮುಖ್ಯ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅವರು ಮಾತನಾಡಿ, ಮಾನಸಿಕ ಮತ್ತು ದೈಹಿಕ ಆರೋಗ್ಯವೇ ನಿಜವಾದ ಆರೋಗ್ಯ. ಒತ್ತಡ, ಕೋಪದ ನಿಗ್ರಹಕ್ಕೆ ಯೋಗ ಅವಶ್ಯಕ. ಅನಾರೋಗ್ಯ ಮುಕ್ತ ಜೀವನ ಆಗಬೇಕು. ಜೀವನದ ಪ್ರಮುಖ 10 ಸೂತ್ರಗಳ ಬಗ್ಗೆ ಮಾಹಿತಿ ನೀಡಿದರು.ಮಡಿಕೇರಿ ವಕೀಲರ ಸಂಘದ ಅಧ್ಯಕ್ಷರಾದ ಸಿ.ಟಿ. ಜೋಸೆಫ್ ಮಾತನಾಡಿ, ಯೋಗ ಎಂದರೆ ವಿಶ್ವಕ್ಕೆ ಭಾರತ ನೀಡಿದ ಕೊಡುಗೆ ಎಂದರು.
3ನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಜಿ. ಸುರೇಂದ್ರ, ಜೆಎಂಎಫ್ ಸಿ ಮತ್ತು ಅಪರ ಸಿವಿಲ್ ನ್ಯಾಯಾಧೀಶ ಬಿ. ಯಶಸ್ವಿನಿ ಅಮೀನ್, ಮಡಿಕೇರಿ ಸರ್ಕಾರಿ ಸಹಾಯಕ ಅಭಿಯೋಜಕ ರಘು, ಪ್ರಭಾರ ಮುಖ್ಯ ಆಡಳಿತಾಧಿಕಾರಿ ಎಸ್.ಟಿ. ಶಮ್ಮಿ ಇದ್ದರು. ಆಯುಷ್ ಇಲಾಖೆಯ ತರಬೇತುದಾರರಾದ ಕೌಶಿಕ್ ಮತ್ತು ದೇವೇಂದ್ರ ಕಾರ್ಯಕ್ರಮ ನಡೆಸಿಕೊಟ್ಟರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ ಸ್ವಾಗತಿಸಿ, ನಿರೂಪಿಸಿದರು.