ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಭಾಷೆ ಅಭಿವ್ಯಕ್ತಿ ಮಾಧ್ಯಮ, ಆಲೋಚನೆಗಳನ್ನು ದಾಟಿಸುವ ವಾಹಕ ಎಂದು ಕುವೆಂಪು ವಿವಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ.ಬಿ.ಬಿ.ರಾಮಪ್ರಸಾದ್ ಪ್ರತಿಪಾದಿಸಿದರು.ಇಲ್ಲಿನ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣೆ ಕಾಲೇಜ್‍ನಲ್ಲಿ ಬುಧವಾರ ಕಡೆಕೊಪ್ಪಲು ಪ್ರತಿಷ್ಠಾನ, ವಾಣಿಜ್ಯ ಕಾಲೇಜ್‍ನ ಇಂಗ್ಲಿಷ್ ವಿಭಾಗ ಸಹಯೋಗದಲ್ಲಿ ಆಯೋಜಿಸಿದ್ದ ಒಂದು ದಿನದ ಇಂಗ್ಲಿಷ್ ಸಂವಹನ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಭಾಷೆಯನ್ನು ಸಮರ್ಥವಾಗಿ ಬಳಸಿಕೊಂಡಾಗ ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಮಾಡಿಕೊಳ್ಳಬಹುದಾಗಿದೆ. ಯಾವುದೇ ಭಾಷೆ ಕೇವಲ ಸಂವಹನ ಮಾತ್ರ ಆಗಿರುವುದಿಲ್ಲ. ಅದು ಸಂಸ್ಕೃತಿಯ ಒಂದು ಭಾಗವೇ ಆಗಿರುತ್ತದೆ. ಅಭಿವ್ಯಕ್ತಿಯ ಜೊತೆಗೆ ಆಲೋಚನಾ ಕ್ರಮವಾಗಿರುತ್ತದೆ. ಇಂಗ್ಲಿಷ್ ಭಾಷೆ ಜಗತ್ತನ್ನು ಹತ್ತಿರದಿಂದ ನೋಡಲು ಸಹಾಯಕವಾಗುತ್ತದೆ ಎಂದರು.ಭಾಷೆ ಮನುಷ್ಯನಿಗೆ ಧಕ್ಕಿರುವ ಒಂದು ವಿಶಿಷ್ಟ ಶಕ್ತಿ ಭಾಷೆಯನ್ನು ಬೇರೆ ಬೇರೆ ಆಯಾಮಗಳಲ್ಲಿ ಬಳಸಲಾಗುತ್ತಿದೆ. ಬದಲಾಗಿ ಭಾಷೆಯಲ್ಲಿ ಮನುಷ್ಯನ ಬೇರೆ ಬೇರೆ ಅಭಿವ್ಯಕ್ತಿಗಳು ದಾಖಲಾಗುತ್ತವೆ. ಭಾಷೆಯ ಮೂಲಕವೇ ಜಗತ್ತಿನ ವಿದ್ಯಮಾನಗಳನ್ನು ಪಡೆಯಬಹುದು. ಅಲ್ಲದೇ ಅರಿವನ್ನು ಕೂಡ ವಿಸ್ತರಿಸಬಹುದಾಗಿದೆ. ಇದು ಕೇವಲ ವರ್ತಮಾನಕ್ಕೆ ಸೀಮಿತವಾಗಿಲ್ಲ. ಬದಲಾಗಿ ಅದು ಮಾನವ ಜಗತ್ತಿನ ಭವಿಷ್ಯ ಮತ್ತು ಸಾಧ್ಯತೆಗಳನ್ನು ವ್ಯಕ್ತಪಡಿಸಲು ಬಳಸಲಾಗುತ್ತದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಾಣಿಜ್ಯ ನಿರ್ವಹಣಾ ಕಾಲೇಜಿನ ಪ್ರಾಂಶುಪಾಲ ಹಾಗೂ ಕಾರ್ಯಕ್ರಮ ಆಯೋಜಕ ಡಾ.ಟಿ.ಅವಿನಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಭಾಷೆ ಮನುಷ್ಯನಿಗೆ ಒಂದು ವರ ಮತ್ತು ಕೂತೂಹಲಕಾರಿಯಾದದ್ದು, ಯಾವುದೇ ಮಗು ಭಾಷೆಯನ್ನು ಆಯಾ ಸ್ಥಳದಿಂದ ಆಯಾ ಭಾಷೆಯನ್ನೇ ಕಲಿಯುತ್ತದೆ. ಎರಡು ವರ್ಷದ ಮಗುವೊಂದು ಇಂಗ್ಲೆಂಡ್‍ನಲ್ಲಿದ್ದರೆ ಇಂಗ್ಲಿಷ್ ಭಾಷೆ, ಕರ್ನಾಟಕದಲ್ಲಿದ್ದರೆ ಕನ್ನಡ ಭಾಷೆ ಕಲಿಯುತ್ತದೆ ಎಂದು ತಿಳಿಸಿದರು.ಇಂಗ್ಲಿಷ್ ಇಂದು ಅನಿವಾರ್ಯ ಮತ್ತು ಅಗತ್ಯದ ಭಾಷೆಯಾಗಿದೆ. ಸರ್ಕಾರಿ ಉದ್ಯೋಗಗಳು ಕ್ಷೀಣಿಸುತ್ತಿರುವ ಈ ಹೊತ್ತಿನಲ್ಲಿ ಖಾಸಗಿ ಉದ್ಯೋಗಗಳೇ ನಮ್ಮ ಮುಂದಿವೆ. ಖಾಸಗಿ ಉದ್ಯಮಗಳು ಕೌಶಲ್ಯವನ್ನು ಬಯಸುತ್ತವೆ. ಇಂಗ್ಲಿಷ್ ಭಾಷೆ ಕೂಡ ಕೌಶಲ್ಯದ ಒಂದು ಭಾಗವೇ ಆಗಿರುವುದರಿಂದ ಇಂಗ್ಲಿಷ್ ಜೊತಗೆ ಕೌಶಲ್ಯ ಕಲಿತವಿರಿಗೆ ಉದ್ಯೋಗ ಅವಕಾಶಗಳು ಹೆಚ್ಚಿಸುತ್ತವೆ ಎಂದರು.
ಇಂಗ್ಲಿಷ್ ಪಠ್ಯ ಕ್ರಮವು ಸಾಹಿತಿಕ ಅಂಶಗಳು ಮತ್ತು ಸಂವಹನದ ಕೌಶಲ್ಯಗಳನ್ನು ಒಳಗೊಂಡಿರಬೇಕಾಗಿರುತ್ತದೆ. ಒಂದು ಅಂಶಕ್ಕೆ ಮಾತ್ರ ಹೆಚ್ಚು ಒತ್ತನ್ನು ನೀಡದೇ ಕೌಶಲ್ಯ ಮತ್ತು ಸಾಹಿತಿಕ ಘಟಕಗಳನ್ನು ಒಟ್ಟೋಟ್ಟಾಗಿ ನೋಡುವ ಅಗತ್ಯ ಇಂದಿದೆ. ಭಾಷೆಗಿರುವ ಸಾಂಸತಿಕ ಮತ್ತು ಸಾಮಾಜಿಕ ಆಯಾಮಗಳು ಮುಖ್ಯವಾಗುತ್ತವೆ. ಹಾಗಾಗಿ ಭಾಷೆ ಕೇವಲ ಭಾಷೆಯಲ್ಲ, ಅದೊಂದು ಸಂಸ್ಕøತಿಯ ಭಾಗವು ಆಗಿದೆ. ಮತ್ತು ಇತ್ತೀಚಿನ ವರ್ಷಗಳಲ್ಲಿ ಅದು ಅನ್ನ ಕೊಡುವ ಭಾಷೆಯೂ ಆಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಣಿಪಾಲ್ ವಿವಿಯ ಪ್ರಾಧ್ಯಾಪಕ ಪ್ರವೀಣ್ ಶೆಟ್ಟಿ ಇಂಗ್ಲಿಷ್ ಅಧ್ಯಾಪಕ ಡಾ. ಪ್ರಾನ್ಸಿಸ್ ಡಿಸೋಜ ಭಾಗವಹಿಸಿ ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು.ಕಾರ್ಯಕ್ರಮದಲ್ಲಿ ಡಾ.ಕೆ.ಎಸ್.ಸರಳ , ಡಾ.ಎ.ಶಿವಮೂರ್ತಿ , ಎಂ.ಪರಶುರಾಮ್, ಕಡೆಕೊಪ್ಪಲು ಪ್ರತಿಷ್ಠಾನದ ಲಕ್ಷ್ಮೀನಾರಾಯಣ್ ಮುಂತಾದವರು ಇದ್ದರು. ಸಿಂಚನ ಸ್ವಾಗತಿಸಿದರು.ಕಾರ್ಯಗಾರದಲ್ಲಿ ಗುಂಪು ಚರ್ಚೆ, ಸಂದರ್ಶನಗಳಲ್ಲಿ ಭಾಗವಹಿಸುವ ಮುನ್ನ ಕ್ರಮ ಇಂಗ್ಲಿಷ್ ಸಂವಹನ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಿದರು.