ಕೂಡ್ಲಿಗಿ: ತಾಲೂಕಿನ ಮೀನಕೆರೆ ಗ್ರಾಮದಲ್ಲಿ ಟ್ರಾನ್ಸ್‌ಫಾರ್ಮರ್ ಸುಟ್ಟು ಮೂರು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದ್ದರೂ ಅಧಿಕಾರಿಗಳು ಮಾತ್ರ ಇನ್ನು ಟ್ರಾನ್ಸ್‌ಫಾರ್ಮರ್ ದುರಸ್ತಿಗೊಳಿಸಿ ಕುಡಿಯುವ ನೀರು ಒದಗಿಸಿಲ್ಲ. ಗ್ರಾಮಸ್ಥರು ದೂರದ ಖಾಸಗಿ ಬಾವಿಯಲ್ಲಿ ನೀರು ತರುವ ಪರಿಸ್ಥಿತಿ ಉಲ್ಬಣವಾಗಿದೆ. ಮನೆಗೆ ಕುಡಿಯುವ ನೀರು ತರಲು ಹರಸಾಹಸ ಪಡಬೇಕಾಗಿದೆ.
ತಾಲೂಕಿನ ಹುರುಳಿಹಾಳ್ ಗ್ರಾಪಂಗೆ ಸೇರಿದ ಮೀನಕೆರೆ ಗ್ರಾಮದಲ್ಲಿ ಜನತೆ ನೀರಿಗಾಗಿ ಪರಿತಪಿಸುವ ದೖಶ್ಯ ಬಿರು ಬಿಸಿಲಿನಲ್ಲಿ ಮನ ಕರಗುವಂತಿದೆ. ನೀರಿನ ಸಮಸ್ಯೆ ಹೇಗಿದೆ, ನೀರಿನ ಸಮಸ್ಯೆಗೆ ಕಾರಣ ಏನು? ಎಂದು ಕೇಳಲು ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಎಇಇ ಪ್ರಸನ್ನ ಅವರಿಗೂ ಫೋನ್ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ಜೆಸ್ಕಾಂ ಅಧಿಕಾರಿಗಳಿಗೆ ಮಾತನಾಡಿದರೆ ಅವರು ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಅಧಿಕಾರಿಗಳ ಬೇಜವಾಬ್ದಾರಿತನದಿಂದ ತಾಲೂಕಿನ ಗಡಿಗ್ರಾಮ ಮೀನಕೆರೆಯಲ್ಲಿ ಜನತೆ ನೀರಿಲ್ಲದೇ ಪಡಿಪಾಟಲು ಪಡುತ್ತಿದ್ದು, ಕುಡಿಯುವ ನೀರಿಗಾಗಿ ದೂರದ ಪಂಪ್‌ಸೆಟ್‌ಗಳ ಮೊರೆ ಹೋಗಬೇಕಿದೆ. ಅಧಿಕಾರಿಗಳು, ಶಾಸಕರು ಸಭೆಯಲ್ಲಿ ಮಾತ್ರ ಕುಡಿಯುವ ನೀರು ಮುಂಜಾಗೃತಿಗೆ ಸಭೆ ಮೇಲೆ ಸಭೆ ಮಾಡುತ್ತಾರೆ. ಆದರೆ 1 ಟ್ರಾನ್ಸ್‌ಫಾರ್ಮರ್ ತರಲು 3 ದಿನಗಳು ಬೇಕಾ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಾರೆ.ಶಾಸಕರು ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಅಧಿಕಾರಿಗಳನ್ನು ಅಲರ್ಟ್ ಮಾಡಿದ್ದೇವೆ, ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಸಭೆಯಲ್ಲಿ ಹೇಳುತ್ತಾರೆ. ಆದರೆ ಮೀನಕೆರೆ ಗ್ರಾಮದಲ್ಲಿ ಟ್ರಾನ್ಸ್‌ಫಾರ್ಮರ್ ಸುಟ್ಟರೆ, ಅದನ್ನು ದುರಸ್ತಿಪಡಿಸಲು 3 ದಿನ ಬೇಕಾ? ಎನ್ನುತ್ತಾರೆ ಮೀನಕೆರೆ ಗ್ರಾಮದ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಕಾರ್ಯದರ್ಶಿ ಕೆ.ಪಿ.ಪಂಪಾಪತಿ.
ಮೀನಕೆರೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದು ನಿಜ. ಮೊನ್ನೆ ಬಂದ ಗಾಳಿ-ಮಳೆಗೆ ಟ್ರಾನ್ಸ್‌ಫಾರ್ಮರ್ ಸುಟ್ಟಿದೆ. ಸದ್ಯಕ್ಕೆ ಊರಿನ ಪಕ್ಕದ ಖಾಸಗಿ ಪಂಪ್‌ಸೆಟ್‌ನಿಂದ ವಿದ್ಯುತ್ ವೈರ್ ತೆಗೆದುಕೊಂಡು ಬಂದು ಕುಡಿಯುವ ನೀರಿನ ಪಂಪ್‌ಸೆಟ್ ಆರಂಭಿಸಲಾಗಿದೆ. ಖಾಸಗಿ ಬೋರ್‌ವೆಲ್‌ಗೆ ವಿದ್ಯುತ್ ಶಿಪ್ಟ್ ಇರುವುದರಿಂದ ಬೆಳಿಗ್ಗೆಯಿಂದ 12 ಗಂಟೆವರೆಗೂ ಮಾತ್ರನೀರು ಲಭ್ಯವಿದೆ ಎನ್ನುತ್ತಾರೆ ಹುರುಳಿಹಾಳ್ ಪಿಡಿಒ ಶ್ರೀನಿವಾಸ್.