ಸಾರಾಂಶ
ಬಳ್ಳಾರಿ: ಕೊಲೆ ಪ್ರಕರಣದಲ್ಲಿ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಅವರನ್ನು ಗುರುವಾರ ಸಂಜೆ ಭೇಟಿಯಾದ ಪತ್ನಿ ವಿಜಯಲಕ್ಷ್ಮಿ, ಕುಟುಂಬ ಸದಸ್ಯರು ಚಾರ್ಜ್‌ಶೀಟ್ ಸಲ್ಲಿಕೆ ಹಿನ್ನೆಲೆಯಲ್ಲಿ ಮುಂದಿನ ಹಂತದಲ್ಲಿ ಕೈಗೊಳ್ಳಬೇಕಾದ ನ್ಯಾಯಾಂಗ ಹೋರಾಟ, ಜಾಮೀನು ಅರ್ಜಿ ಸಲ್ಲಿಕೆ ಕುರಿತು ಚರ್ಚಿಸಿದ್ದಾರೆ.
ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್ ತೂಗುದೀಪ್ ಹಾಗೂ ದರ್ಶನ್ ಸಂಬಂಧಿ ಸುಶಾಂತ್ ನಾಯ್ಡು ಅವರ ಜೊತೆ ನಟ ದರ್ಶನ್ ಸುಮಾರು 20 ನಿಮಿಷ ಚರ್ಚೆ ನಡೆಸಿದ್ದಾರೆ.ಸಂಜೆ 4 ಗಂಟೆಗೆ ಆಗಮಿಸಿದ ದರ್ಶನ್ ಕುಟುಂಬ ಸದಸ್ಯರು ಜೈಲಿನ ಅಧಿಕಾರಿಗಳಿಗೆ ಪತ್ರ ನೀಡಿ ಭೇಟಿಗೆ ಅವಕಾಶ ಕೋರಿದರು. ಬಳಿಕ 4.30ಕ್ಕೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ ತೂಗುದೀಪ್ ಮತ್ತು ಸಂಬಂಧಿ ಸುಶಾಂತ್ ನಾಯ್ಡು ಅವರನ್ನು ಆಂತರಿಕ ಭದ್ರತಾ ವಿಭಾಗದಲ್ಲಿ ಪರಿಶೀಲಿಸಿ, ಹೆಸರು ನೋಂದಾಯಿಸಿಕೊಂಡು ವಿಜಿಟರ್ಸ್ ಕೊಠಡಿಗೆ ಕಳಿಸಿದರು.
ಬಳಿಕ ಹೈಸೆಕ್ಯೂರಿಟಿ ಸೆಲ್‌ನಲ್ಲಿದ್ದ ಆರೋಪಿ ದರ್ಶನ್‌ನನ್ನು ಜೈಲಿನ ಸಿಬ್ಬಂದಿ ವಿಜಿಟರ್ಸ್ ರೂಂಗೆ ಕರೆತಂದರು. ಇದೇ ವೇಳೆ ಪತ್ನಿ ವಿಜಯಲಕ್ಷ್ಮಿ ಬ್ಯಾಗ್‌ನಲ್ಲಿ ತಂದಿದ್ದ ಡ್ರೈಫ್ರೂರ್ಟ್ಸ್‌ನ್ನು ದರ್ಶನ್ ಗೆ ನೀಡಿದರು. ನಟ ದರ್ಶನ್ ಬಳ್ಳಾರಿ ಜೈಲು ಪಾಲಾದ ಬಳಿಕ ಪತ್ನಿ ವಿಜಯಲಕ್ಷ್ಮಿಯದು ಇದು ಎರಡನೇ ಭೇಟಿಯಾಗಿದೆ. ಸೆ.9ಕ್ಕೆ ನ್ಯಾಯಾಂಗ ಬಂಧನದ ಅವಧಿ ಕೊನೆಗೊಳ್ಳುವ ಹಿನ್ನೆಲೆಯಲ್ಲಿ ನೋಟರಿಯೊಂದಿಗೆ ಬಂದ ಕುಟುಂಬಸ್ಥರು ಜಾಮೀನು ಅರ್ಜಿ ಬಗ್ಗೆ ಚರ್ಚಿಸಿ ಸಹಿ ಮಾಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ಅಭಿಮಾನಿಯ ರಂಪಾಟ: ಇಲ್ಲಿನ ಕೇಂದ್ರ ಕಾರಾಗೃಹದ ಮುಂದೆ ನಟ ದರ್ಶನ್‌ನ ಮಹಿಳಾ ಅಭಿಮಾನಿಯೊಬ್ಬರು ಪಟ್ಟು ಹಿಡಿದ ಘಟನೆ ನಡೆದಿದೆ. ದರ್ಶನ್‌ನನ್ನು ನೋಡಬೇಕು. ಅವರ ಜೊತೆ ಮಾತನಾಡಬೇಕು ಎಂದು ಕಲಬುರಗಿ ಮೂಲದ ಲಕ್ಷ್ಮಿ ಎಂಬ ಮಹಿಳೆ ಜೈಲು ಮುಂದೆ ಹೈಡ್ರಾಮಾ ಮಾಡಿದ್ದಾಳೆ. ಜೈಲು ಪ್ರವೇಶದ್ವಾರದ ಗೇಟ್ ಬಳಿ ಭದ್ರತಾ ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದಿದ್ದು, ಅವರ ಕುಟುಂಬಸ್ಥರಿಗೆ ಮಾತ್ರ ಭೇಟಿಗೆ ಅವಕಾಶ ಎನ್ನುವುದಾದರೆ, ನಾನು ದರ್ಶನ್ ಅವರನ್ನು ಮದುವೆ ಆಗೋದಕ್ಕೂ ಸಿದ್ಧವಾಗಿ ಬಂದಿರುವೆ ಎಂದು ಹೇಳಿದ್ದಾಳೆ. ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಹೋದರೂ ಅಲ್ಲೂ ಬಿಡಲಿಲ್ಲ. ಈಗ ಇಲ್ಲಿಗೆ ಬಂದಿರುವೆ. ನಟ ದರ್ಶನ್ ಅವರಿಗೆ ಹಣ್ಣು ಕೊಟ್ಟು ನೋಡಿ ಹೋಗುವೆ ಎಂದು ಕೇಳಿಕೊಂಡಿದ್ದಾಳೆ. ಕೊನೆಗೆ ಜೈಲು ಸಿಬ್ಬಂದಿ ಮನವೊಲಿಸಿ ವಾಪಸ್ ಕಳಿಸಿದ್ದಾರೆ.