ಹನೂರು ಮಾದಿಗ ಸಮುದಾಯ ಮುಖಂಡರಿಂದ ಸಭೆ

| Published : Jan 12 2025, 01:17 AM IST

ಸಾರಾಂಶ

ಮುಂಬರುವ ಜಿಲ್ಲಾ ಹಾಗೂ ತಾಪಂ ಚುನಾವಣೆ ಮತ್ತು ಸಮುದಾಯ ಸಂಘಟನೆ ಕುರಿತು ಹನೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮಾದಿಗ ಸಮುದಾಯ ಮುಖಂಡರು ಶನಿವಾರ ಹನೂರು ಪಟ್ಟಣದ ಡಾ.ಬಾಬು ಜಗಜೀವನ ರಾಂ ಸಮುದಾಯದ ಭವನದಲ್ಲಿ ಸಭೆ ನೆಡೆಸಿದರು.

ಕನ್ನಡಪ್ರಭ ವಾರ್ತೆ ಹನೂರು

ಮುಂಬರುವ ಜಿಲ್ಲಾ ಹಾಗೂ ತಾಪಂ ಚುನಾವಣೆ ಮತ್ತು ಸಮುದಾಯ ಸಂಘಟನೆ ಕುರಿತು ಹನೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮಾದಿಗ ಸಮುದಾಯ ಮುಖಂಡರು ಶನಿವಾರ ಪಟ್ಟಣದ ಡಾ.ಬಾಬು ಜಗಜೀವನ ರಾಂ ಸಮುದಾಯದ ಭವನದಲ್ಲಿ ಸಭೆ ನೆಡೆಸಿದರು.

ತಾಲೂಕಿನಲ್ಲಿ ಕನ್ನಡ, ತಮಿಳು, ತೆಲುಗು ಭಾಷೆಯ ಮಾದಿಗ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಒಗ್ಗಟ್ಟಾಗಿ ಒಂದೇ ನಾಯಕತ್ವದಲ್ಲಿ ಮುಂದಾಗಬೇಕಿದೆ. ಏಕತೆ ಕಾಪಾಡುವ, ಸಮುದಾಯದ ಹಿತದೃಷ್ಟಿಯಿಂದ ಮಾದಿಗ ಸಮುದಾಯ ಮಠ ಹಾಗೂ ಗುರು, ಸ್ವಾಮೀಜಿಯವರ ನಿಕಟ ಸಂಪರ್ಕ ಸಾಧಿಸಬೇಕು. ಸಮಾಜದಲ್ಲಿ ತಾರತಮ್ಯ ಮಾಡದೇ ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಪಕ್ಷಾತೀತವಾಗಿ ಹಕ್ಕು, ಅಧಿಕಾರ ಹೊಂದಲು ಚಿಂತನೆ ನೆಡೆಸಿ ಗಟ್ಟಿದ್ವನಿ ಎತ್ತಬೇಕಿದೆ. ಈ ನಿಟ್ಟಿನಲ್ಲಿ ಮಾದಿಗ ಸಮುದಾಯ ಮುಖಂಡರ ಸಮಿತಿ ರಚನೆ ಮಾಡಲು ಸಭೆಯಲ್ಲಿ ತೀರ್ಮಾನ ಮಾಡಲಾಗಿ ದಿನಾಂಕ ನಿಗದಿ, ಕರಪತ್ರ ಹಾಗೂ ಇನ್ನಿತರ ಕುರಿತು ಸುಧೀರ್ಘ ಚರ್ಚೆ ನೆಡೆಯಿತು. ಅಲ್ಲದೆ ಡಾ.ಬಾಬು ಜಗಜೀವನರಾಂ ಸಂಘದ ನಾಮಫಲಕವನ್ನು ಸಮುದಾಯದ ಎಲ್ಲ ಗ್ರಾಮಗಳಲ್ಲೂ ಅಳವಡಿಕೆ ಮಾಡಬೇಕು ಎಂಬ ತೀರ್ಮಾನ ಕೈಗೊಂಡರು.

ಜಿಲ್ಲಾ ಹಾಗೂ ತಾಪಂ ಚುನಾವಣೆ ಬರಲಿದೆ. ಹೀಗಾಗಿ ಹನೂರು ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಪಕ್ಷವಾಗಲಿ ಸಮುದಾಯಕ್ಕೆ ಮೀಸಲು ಪ್ರಾತಿನಿಧ್ಯ ನೀಡಬೇಕು. ಒಳಮೀಸಲಾತಿ ಕೂಗು ಎದ್ದಿದ್ದ ಪರಿಣಾಮ ಜಾರಿ ಕಾರ್ಯ ಅಂತಿಮ ಹಂತಕ್ಕೆ ಬಂದಿದೆ. ಹೀಗಾಗಿ ಸಮುದಾಯದ ಬಂಧುಗಳು ಜಾಗೃತರಾಗಿ ಒಂದಾಗಲು ಮುಂದಾಗಬೇಕಿದೆ ಎಂದು ಸಭೆಯಲ್ಲಿ ಚರ್ಚೆ ನೆಡೆಸಿದರು.ಈ ವೇಳೆ ಮುಖಂಡರು ಮಾತನಾಡಿ, ರಾಜಕೀಯ ಪಕ್ಷಗಳು ಆಕಾಂಕ್ಷಿಗಳಿಗೆ ತಾರತಮ್ಯ ಮಾಡದೆ ನ್ಯಾಯಯುತವಾಗಿ ಸಮುದಾಯದವರೆಗೆ ಅವಕಾಶ ನೀಡಬೇಕು. ಇಲ್ಲವಾದರೆ ಈ ಬಗ್ಗೆ ಮುಖಂಡರು ಒಟ್ಟಾಗಿ ಧ್ವನಿ ಎತ್ತಿ ಬೇಡಿಕೆಯಿಟ್ಟು ಪರ್ಯಾಯವಾಗಿ ಆಲೋಚಿಸುವ ಬಗ್ಗೆ ಪ್ರಸ್ತಾಪಿಸಿದರು. ಸಮುದಾಯದ ಮುಖಂಡರು ಇದಕ್ಕೆ ಕೈಜೋಡಿಸಬೇಕು ಎಂದು ಒಮ್ಮತ ತೀರ್ಮಾನ ತೆಗದುಕೊಂಡರು.

ಮುಖಂಡರಾದ ಪಾಳ್ಯರಾಚಪ್ಪ ಮಾತನಾಡಿ, ಮಾದಿಗ ಸಮುದಾಯಕ್ಕೆ ವಿವಿಧ ರಂಗದಲ್ಲಿ ಅನ್ಯಾಯವಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ಸಮುದಾಯದ ಒಕ್ಕೂಟ ರಚನೆ ಅಗತ್ಯವಾಗಿದೆ. ಹೀಗಾಗಿ ಆಯಾ ತಾಲೂಕುವಾರು ಸಭೆ ಮಾಡಲಾಗುತ್ತಿದೆ. ಸಮುದಾಯದ ಹಳ್ಳಿಯ ಜನರಿಗೆ ಕರಪತ್ರ ನೀಡಿ ಸಭೆ ಮೂಲಕ ಮುಂದಿನ ತಿರ್ಮಾನ ಕೈಗೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ ಇದಕ್ಕೆ ಎಲ್ಲರು ಸಹಕಾರ ನೀಡಬೇಕು ಎಂದರು.

ಹನೂರು ಪಪಂ ಸದಸ್ಯ ಸುದೇಶ್, ದೊಡ್ಡಿಂದುವಾಡಿ ಗ್ರಾಪಂ ಸದಸ್ಯ ಮುತ್ತುರಾಜು, ಬೂದುಬಾಳು ಮಾದೇವ, ರಾಜೇಶ್, ಕಾಮಗೆರೆಮಹದೇವ, ಕರಿಯನಪುರ ರಾಚಣ್ಣ, ಪಿಜಿ.ಪಾಳ್ಯ ಪಾಪಣ್ಣ, ಎಲ್ಲೇಮಾಳ ಸೆಕ್ರದೇವನ್, ಬೈರನತ್ತ ಬಸವಣ್ಣ, ಮಾದೇಶ್, ವಡಕೆಹಳ್ಳ ವೀರ, ರಾಮಾಪುರ ರವಿ, ಕಾಂಚಳ್ಳಿ ತಿಮ್ಮಣ್ಣ, ಮಾದೇವ, ಪ್ರವೀಣ್ ಸೇರಿದಂತೆ ಹನೂರು, ಲೊಕ್ಕನಹಳ್ಳಿ, ರಾಮಾಪುರ ಹೋಬಳಿ ಭಾಗದ ವಿವಿಧ ಗ್ರಾಮದ ಮುಖಂಡರು ಹಾಜರಿದ್ದರು.