ದೇಶದ ಎಲ್ಲಾ ರಾಜ್ಯಗಳ ಶಾಸನ ಸಭೆಗಳ ಕಾರ್ಯಕಲಾಪಗಳಲ್ಲಿ ಏಕರೂಪತೆ ತರುವ ಉದ್ದೇಶದಿಂದ ಲೋಕಸಭಾ ಸಭಾಧ್ಯಕ್ಷರು ರಚಿಸಿರುವ ಆರು ಸದಸ್ಯರ ಉನ್ನತ ಮಟ್ಟದ ಸಭಾಧ್ಯಕ್ಷರ ಸಮಿತಿ ಸಭೆ ಅ. 27ರಂದು ನವದೆಹಲಿಯಲ್ಲಿ ನಡೆಯಿತು.
ಕರ್ನಾಟಕ ಪ್ರತಿನಿಧಿಸಿದ ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ
ಕನ್ನಡಪ್ರಭ ವಾರ್ತೆ ಗದಗದೇಶದ ಎಲ್ಲಾ ರಾಜ್ಯಗಳ ಶಾಸನ ಸಭೆಗಳ ಕಾರ್ಯಕಲಾಪಗಳಲ್ಲಿ ಏಕರೂಪತೆ ತರುವ ಉದ್ದೇಶದಿಂದ ಲೋಕಸಭಾ ಸಭಾಧ್ಯಕ್ಷರು ರಚಿಸಿರುವ ಆರು ಸದಸ್ಯರ ಉನ್ನತ ಮಟ್ಟದ ಸಭಾಧ್ಯಕ್ಷರ ಸಮಿತಿ ಸಭೆ ಅ. 27ರಂದು ನವದೆಹಲಿಯಲ್ಲಿ ನಡೆಯಿತು.
ಉತ್ತರ ಪ್ರದೇಶ ವಿಧಾನಸಭೆಯ ಸಭಾಧ್ಯಕ್ಷ ಸತೀಶ್ ಮಹಾನಾ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಜಿ.ಎಸ್. ಪಾಟೀಲ ಸಮಿತಿಯ ಸದಸ್ಯರಾಗಿ ಪಾಲ್ಗೊಂಡಿದ್ದರು. ಮಹಾರಾಷ್ಟ್ರದ ರಾಹುಲ್ ನಾರ್ವೇಕರ್, ದೆಹಲಿಯ ವಿಜೇಂದ್ರ ಗುಪ್ತಾ ಹಾಗೂ ಹಿಮಾಚಲ ಪ್ರದೇಶದ ಕುಲದೀಪ್ ಸಿಂಗ್ ಪಠಾನಿಯಾ ಸಭೆಯಲ್ಲಿದ್ದ ಇತರ ಸದಸ್ಯರು.ಪ್ರಸ್ತುತ ವಿವಿಧ ರಾಜ್ಯಗಳಲ್ಲಿ ಪ್ರಶ್ನೋತ್ತರ ಅವಧಿ, ಗಮನ ಸೆಳೆಯುವ ಸೂಚನೆ, ಹಕ್ಕುಬಾಧ್ಯತೆ ಪ್ರಕ್ರಿಯೆ ಹಾಗೂ ಸದನ ಸಮಿತಿಗಳ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಾಸಗಳಿದ್ದು, ಇವುಗಳನ್ನು ಸರಿಪಡಿಸಿ ಎಲ್ಲಾ ಶಾಸನ ಸಭೆಗಳಿಗೆ ಮಾರ್ಗದರ್ಶಿಯಾಗುವ ಸಮಗ್ರ ಮಾದರಿ ನಿಯಮಾವಳಿ ರೂಪಿಸುವ ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಸದನದ ಕಲಾಪಗಳನ್ನು ಸುಗಮ ಹಾಗೂ ಶಿಸ್ತುಬದ್ಧವಾಗಿ ನಡೆಸುವುದು, ಸದನದ ಘನತೆ ಎತ್ತಿಹಿಡಿಯುವುದು ಹಾಗೂ ಕಾಗದರಹಿತ ಕಲಾಪಗಳಿಗಾಗಿ ತಂತ್ರಜ್ಞಾನ ವಿಸ್ತರಿಸುವ ಬಗ್ಗೆಯೂ ಸಮಾಲೋಚನೆ ನಡೆಸಲಾಯಿತು.
ಸಂಸದೀಯ ಮೌಲ್ಯಗಳು ಮತ್ತಷ್ಟು ಬಲಗೊಳ್ಳಲಿವೆ:ಏಕರೂಪ ಮಾದರಿ ನಿಯಮಗಳನ್ನು ರೂಪಿಸುವ ಸಂದರ್ಭದಲ್ಲಿ ಪ್ರತಿಯೊಂದು ರಾಜ್ಯದ ವಿಶಿಷ್ಟ ಸಂಪ್ರದಾಯಗಳು ಮತ್ತು ಉತ್ತಮ ಪದ್ಧತಿಗಳನ್ನು ಗೌರವಿಸುವುದು ಅತ್ಯಗತ್ಯ. ಕರ್ನಾಟಕ ವಿಧಾನಸಭೆಯ ಪ್ರಶ್ನೋತ್ತರ ಅವಧಿಯ ಕಾರ್ಯವಿಧಾನ ಹಾಗೂ ಸಂಪೂರ್ಣ ಕಾಗದರಹಿತ ಇ-ವಿಧಾನ ವ್ಯವಸ್ಥೆಯು ದೇಶಕ್ಕೇ ಮಾದರಿಯಾಗಿದ್ದು, ಇಂತಹ ಉತ್ತಮ ಪದ್ಧತಿಗಳನ್ನು ಇತರ ರಾಜ್ಯಗಳೂ ಅಳವಡಿಸಿಕೊಳ್ಳಬೇಕು. ಈ ಏಕರೂಪ ನಿಯಮಾವಳಿಯಿಂದ ಶಾಸನ ಸಭೆಗಳ ಕಾರ್ಯಕ್ಷಮತೆ ಹಾಗೂ ಸಂಸದೀಯ ಮೌಲ್ಯಗಳು ಮತ್ತಷ್ಟು ಬಲಗೊಳ್ಳಲಿವೆ ಎಂದು ವಿಧಾನಸಭಾಧ್ಯಕ್ಷ ಜಿ.ಎಸ್.ಪಾಟೀಲ ತಿಳಿಸಿದ್ದಾರೆ.