ಮಾ.1ರಂದು ಬಿಜೆಪಿ ವೀರಶೈವ ಲಿಂಗಾಯತ ಮುಖಂಡರ ಸಭೆ

| Published : Feb 27 2025, 12:31 AM IST

ಸಾರಾಂಶ

ರಾಜ್ಯದಲ್ಲಿ ಬಿಜೆಪಿಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಮಾ.1ರಂದು ಚಿತ್ರದುರ್ಗ, ಹಾವೇರಿ, ದಾವಣಗೆರೆ ಜಿಲ್ಲೆಗಳ ವೀರಶೈವ ಲಿಂಗಾಯತ ಸಮಾಜದ ಪ್ರಮುಖರ ಸಭೆಯನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜ ಹಾಗೂ ಪಕ್ಷದ ಯುವ ಮುಖಂಡ ಲೋಕಿಕೆರೆ ನಾಗರಾಜ ಹೇಳಿದ್ದಾರೆ.

- ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳ ಸಮಾಜದ ಒಳಪಂಗಡಗಳ ಸಭೆ: ಮುಖಂಡ ಲೋಕಿಕೆರೆ ನಾಗರಾಜ ಮಾಹಿತಿ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದಲ್ಲಿ ಬಿಜೆಪಿಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಮಾ.1ರಂದು ಚಿತ್ರದುರ್ಗ, ಹಾವೇರಿ, ದಾವಣಗೆರೆ ಜಿಲ್ಲೆಗಳ ವೀರಶೈವ ಲಿಂಗಾಯತ ಸಮಾಜದ ಪ್ರಮುಖರ ಸಭೆಯನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜ ಹಾಗೂ ಪಕ್ಷದ ಯುವ ಮುಖಂಡ ಲೋಕಿಕೆರೆ ನಾಗರಾಜ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ಜಿಲ್ಲೆಗಳ ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳ ಪ್ರಮುಖರ ಸಭೆಯನ್ನು ದಾವಣಗೆರೆಯಲ್ಲಿ ಆಯೋಜಿಸಲಾಗುವುದು. ಬೆಳಗ್ಗೆ 11.30ಕ್ಕೆ ವಿದ್ಯಾನಗರದ ರಾಷ್ಟ್ರೀಯ ಹೆದ್ದಾರಿ ಸರ್ವೀಸ್‌ ರಸ್ತೆಯ ಸಮೃದ್ಧಿ ಬ್ಯಾಂಕ್‌ ವೆಟ್ ಹಾಲ್‌ನಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದರು.

ಮೂರೂ ಜಿಲ್ಲೆಗಳ ವೀರಶೈವ ಲಿಂಗಾಯತ ಸಮಾಜದ ಪ್ರಮುಖರು, ಹಾಲಿ-ಮಾಜಿ ಶಾಸಕರು, ಹಾಲಿ-ಮಾಜಿ ಸಂಸದರು, ಮಾಜಿ ಸಚಿವರು ಸಭೆಯಲ್ಲಿ ಭಾಗವಹಿಸುವರು. ಮುಂಬರುವ ದಿನಗಳಲ್ಲಿ ಬೆಂಗಳೂರು ಅಥವಾ ದಾವಣಗೆರೆಯಲ್ಲಿ ರಾಜ್ಯಮಟ್ಟದ ಸಭೆ ನಡೆಸಿ, ಪಕ್ಷವನ್ನು ಸಂಘಟಿಸುವ ಬಗ್ಗೆ ಸಭೆ ಚರ್ಚಿಸಲಿದೆ ಎಂದು ಅವರು ಹೇಳಿದರು.

ಇಡೀ ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮಾಜದ ಏಕೈಕ ಮಾಸ್ ಲೀಡರ್ ಅಂದರೆ ಮಾಜಿ ಮುಖ್ಯಮಂತ್ರಿ, ಪಕ್ಷದ ಹಿರಿಯರಾದ ಬಿ.ಎಸ್.ಯಡಿಯೂರಪ್ಪ ಮಾತ್ರ. ಯಾವುದೇ ಒಳಪಂಗಡಗಳ ಬೇಧವಿಲ್ಲದೇ ಎಲ್ಲ ಒಳಪಂಗಡಗಳವರೂ ಸಾಮೂಹಿಕವಾಗಿ ನಾಯಕನೆಂದು ಒಪ್ಪಿದ್ದಾರೆ. ಈಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನೂ ಮಾಸ್ ಲೀಡರ್ ಅಂತಾ ಒಪ್ಪಿ, ಬೆಂಬಲಕ್ಕೆ ನಿಂತಿದ್ದಾರೆ ಎಂದರು.

ಯಡಿಯೂರಪ್ಪ 2021ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆರಾಜೀನಾಮೆ ನೀಡಿದ ನಂತರ ಪಕ್ಷದ ಬಹುತೇಕ ಮುಖಂಡರು, ಕಾರ್ಯಕರ್ತರಿಗೆ ಬೇಸರವಾಗಿ, ಪಕ್ಷದಿಂದಲೇ ದೂರ ಸರಿದಿದ್ದಾರೆ. ಅಂತಹವರನ್ನೆಲ್ಲಾ ಮತ್ತೆ ಒಗ್ಗೂಡಿಸಿ, ಪಕ್ಷಕ್ಕೆ ಬಲ ತುಂಬಿಸುವ ನಿಟ್ಟಿನಲ್ಲಿ ಮೂರೂ ಜಿಲ್ಲೆಗಳ ಸಭೆ ಆಯೋಜಿಸಲಾಗಿದೆ. ಸಮಾಜದ ಎಲ್ಲ ಮುಖಂಡರು, ಕಾರ್ಯಕರ್ತರನ್ನು ಮತ್ತೆ ಬಿಜೆಪಿಗೆ ಕರೆ ತಂದು, ಪಕ್ಷಕ್ಕೆ ಬಲ ತುಂಬುವ ಪ್ರಯತ್ನದ ಸಭೆ ಇದಾಗಿದೆ ಎಂದು ಹೇಳಿದರು.

ಪಕ್ಷದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ಚಂದ್ರಶೇಖರ ಪೂಜಾರ, ರಾಜು ವೀರಣ್ಣ, ಜಯಣ್ಣ, ಬಾತಿ ಶಿವಕುಮಾರ, ತೋಟಪ್ಪ ಇತರರು ಇದ್ದರು.

- - -

ಬಾಕ್ಸ್‌* ವಿಜಯೇಂದ್ರ ಹಠಾವೋ ಹೇಳಿಕೆಗೆ ಆಕ್ಷೇಪ

ಸಾಮೂಹಿಕ ನಾಯಕ ಬಿ.ವೈ.ವಿಜಯೇಂದ್ರ ಬಗ್ಗೆ ಪಕ್ಷದ ದಾವಣಗೆರೆ ಜಿಲ್ಲಾ ನಿಕಟಪೂರ್ವ ಜಿಲ್ಲಾಧ್ಯಕ್ಷರೊಬ್ಬರು ಬಿ.ವೈ.ವಿಜಯೇಂದ್ರ ಹಠಾವೋ, ಬಿಜೆಪಿ ಬಚಾವೋ ಅಂತಾ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಅದೇ ವ್ಯಕ್ತಿ ಇಂದು ಪಕ್ಷದಲ್ಲಿ ಗುರುತಿಸಿಕೊಳ್ಳಲು, ಈ ಮಟ್ಟಕ್ಕೆ ಬೆಳೆಯಲು ಯಡಿಯೂರಪ್ಪನವರೇ ಕಾರಣ. ಬಿಎಸ್‌ವೈ ಹೆಸರು ಹೇಳಿಕೊಂಡು, ಪಕ್ಷದಲ್ಲಿ ಬೆಳೆದಿದ್ದಲ್ಲದೇ, ಜಿಲ್ಲಾಧ್ಯಕ್ಷರಾಗಿ, ಹರಿಹರ ಕ್ಷೇತ್ರದ ಟಿಕೆಟ್ ಪಡೆದು, ಕಳೆದ ಲೋಕಸಭೆ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ವಹಿಸಿದ್ದ ವ್ಯಕ್ತಿಯೇ ಈಗ ಭಿನ್ನರ ಜೊತೆಗೂಡಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಮುಖಂಡ ಲೋಕಿಕೆರೆ ನಾಗರಾಜ ಆಕ್ರೋಶ ವ್ಯಕ್ತಪಡಿಸಿದರು.

- - - -26ಕೆಡಿವಿಜಿ1.ಜೆಪಿಜಿ:

ದಾವಣಗೆರೆಯಲ್ಲಿ ಬುಧವಾರ ಬಿಜೆಪಿ ಜಿಲ್ಲಾ ಮುಖಂಡ ಲೋಕಿಕೆರೆ ನಾಗರಾಜ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.