ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಜಿಲ್ಲೆಯಲ್ಲಿ ಕೈಗೊಳ್ಳಲಾದ ಜಲಜೀವನ್ ಮಿಷನ್ ಕಾಮಗಾರಿಗಳ ಪ್ರಗತಿ ಹಾಗೂ ಸಮಸ್ಯೆಗಳ ಕುರಿತು ನ.೧೦ ರಂದು ವಿಸ್ತೃತವಾಗಿ ಚರ್ಚೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ೨೦೨೫-೨೬ನೇ ಸಾಲಿನ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (೨೦ ಅಂಶಗಳ ಕಾರ್ಯಕ್ರಮಗಳೂ ಸೇರಿದಂತೆ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಕೈಗೊಳ್ಳಲಾದ ಜಲಜೀವನ್ ಮಿಷನ್ ಕಾಮಗಾರಿಗಳಲ್ಲಿ ಎದುರಾದ ಸಮಸ್ಯೆಗಳು, ಅಸಮರ್ಪಕ ಕಾಮಗಾರಿಗಳು ಅವುಗಳ ಪರಿಹಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳು, ಕಾಮಗಾರಿಗೆ ಬಿಡುಗಡೆಯಾದ ಅನುದಾನ, ಬಳಕೆ ಮೊತ್ತ ಸೇರಿದಂತೆ ಜೆಜೆಎಂನ ಕಾಮಗಾರಿಗಳನ್ನು ಸವಿವರವಾಗಿ ಚರ್ಚಿಸಲು, ಜಿಲ್ಲೆಯ ಹಿರಿಯ ಅಧಿಕಾರಿಗಳು, ಜೆಜೆಎಂ ಅಧಿಕಾರಿಗಳು, ಕೆಡಿಪಿ ಸಮಿತಿ ಸದಸ್ಯರು ಸಭೆಗೆ ನ.೧೦ರಂದು ಹಾಜರಾಗಬೇಕು ಎಂದು ಸೂಚಿಸಿದರು.ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು, ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ, ಗೊಬ್ಬರ ಪೂರೈಕೆ ಆಗಿರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು, ಜಿಲ್ಲೆಯಲ್ಲಿ ಯಾವುದೇ ಸಮಸ್ಯೆಗಳು ಎದುರಾಗಬಾರದು. ಅಗತ್ಯ ಇರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಪೂರೈಸುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಅಂಬಿಕಾ ಅವರಿಗೆ ಸೂಚನೆ ನೀಡಿದರು.
ವಿವಿಧ ಕಾರಣಗಳಿಂದ ಬೆಳೆ ಹಾನಿಗೊಂಡ ತೋಟಗಾರಿಕಾ ರೈತರಿಗೆ ಪರಿಹಾರ ಕಾರ್ಯಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಹಾಗೂ ಬೆಳೆಹಾನಿಯಾದ ತೋಟಗಾರಿಕೆ ರೈತರಿಗೆ ಪರಿಹಾರ ಭರಿಸುವಂತೆ ಅವರು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಿದರು.ಪಶುಪಾಲನ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸಂಬಂಧಿಸಿ ಸಚಿವರೊಂದಿಗೆ ಚರ್ಚಿಸಿ ಅವುಗಳನ್ನು ಭರ್ತಿ ಮಾಡುವ ಬಗ್ಗೆ ಕ್ರಮ ವಹಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಖಾಲಿ ಇರುವ ಹುದ್ದೆಗಳ ಪಟ್ಟಿ ನೀಡುವಂತೆ ಪಶು ಪಾಲನ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಿಗೆ ತಿಳಿಸಿದರು.
ಅದೇ ರೀತಿ ಕೇಂದ್ರ ಸರ್ಕಾರದಿಂದ ವಿವಿಧ ರೀತಿಯ ಪರಿಹಾರ ಮೊತ್ತ ಬಿಡುಗಡೆ ಯೋಜನೆಗಳ ಬಗ್ಗೆ ಚರ್ಚಿಸಲು ಸಂಬಂಧಿಸಿದ ಅಧಿಕಾರಿಗಳನ್ನು ನ.೧೦ರ ಸಭೆಗೆ ಆಹ್ವಾನಿಸುವಂತೆ ಅವರು ಉಪ ನಿರ್ದೇಶಕರಿಗೆ ತಿಳಿಸಿದರು.ಮೀನುಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಕೆರೆಗಳಿಗೆ ಸರ್ಕಾರದ ವತಿಯಿಂದಲೇ ಮೀನು ಮರಿಗಳನ್ನು ಬಿಟ್ಟು ಅವುಗಳನ್ನು ಪೋಷಿಸಿ ಮಾರಾಟ ಮಾಡುವ ಬಗ್ಗೆ ಚರ್ಚಿಸಿದರು ಹಾಗೂ ಜಿಲ್ಲಾ ಕೇಂದ್ರದಲ್ಲಿ ಮೀನು ಮಾರಾಟ ಕೇಂದ್ರವನ್ನು ಸ್ಥಾಪಿಸಲು ಕ್ರಮ ವಹಿಸುವಂತೆ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಿದರು.
ಜಿಲ್ಲೆಯ ಪ್ರವಾಸಿ ಕೇಂದ್ರಗಳನ್ನು ಉತ್ತೇಜಿಸಲು ಹೆಚ್ಚಿನ ಪ್ರವಾಸಿಗರು ಭೇಟಿ ನೀಡಲು ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಟಿಪ್ಪಣಿಯನ್ನು ನೀಡುವಂತೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.ಜಿಲ್ಲೆಯ ವಿವಿಧೆಡೆ ಶಾಸಕರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಬೋರ್‌ವೆಲ್‌ಗಳ ಅಳವಡಿಕೆಗೆ ಕೊಟ್ಟಿರುವ ಪಟ್ಟಿಯನ್ನು ಜಿಲ್ಲಾಧಿಕಾರಿಯವರಿಂದ ಅನುಮೋದಿಸಿ ಪಟ್ಟಿ ಸಲ್ಲಿಸಿದ್ದಲ್ಲಿ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ಅವುಗಳನ್ನು ಅಳವಡಿಸಲು ಕ್ರಮವಹಿಸಲಾಗುವುದು ಎಂದು ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗೆ ಸಚಿವರು ನಿರ್ದೇಶನ ನೀಡಿದರು.
ಅಕ್ರಮ ವಿದ್ಯುತ್ ಸಂಪರ್ಕ ತಡೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಹಾಗೂ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದವರ ವಿರುದ್ಧ ಕಾನೂನು ಪ್ರಕಾರ ಕ್ರಮವಹಿಸಬೇಕು ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್ ಅವರಿಗೆ ಸೂಚನೆ ನೀಡಿದರು.ರಾಮನಗರ ತಾಲೂಕಿಗೆ ೨೧ ಅಂಬೇಡ್ಕರ್ ಭವನಗಳು ಮಂಜೂರಾಗಿದ್ದು, ೨೧ ಭವನ ನಿರ್ಮಾಣಕ್ಕೆ ಜಾಗ ಗುರುತಿಸಿ ಭವನ ನಿರ್ಮಾಣಕ್ಕೆ ಕ್ರಮ ವಹಿಸುವಂತೆ ಶಾಸಕರಾದ ಇಕ್ಬಾಲ್ ಹುಸೇನ್ ಅವರು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಶಿವಕುಮಾರ್ ಅವರಿಗೆ ತಿಳಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿಲಾಲ್ ಅವರು ಮಾತನಾಡಿ, ಜಿಲ್ಲೆಯಲ್ಲಿ ೩,೧೬೪ ಬ್ಲಾಕ್ ಗಳು ರಚನೆಯಾಗಿದ್ದು ೩,೧೪೯ ಗಣತಿದಾರರು ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ ಕಾರ್ಯದಲ್ಲಿ ಭಾಗವಹಿಸಿ ಶೇ. ೯೧.೩೮ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಿದ್ದಾರೆ, ಉಳಿದ ಸಮೀಕ್ಷೆ ಪೂರ್ಣಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು.ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು, ಶೇ. ೮ ರಷ್ಟು ಬಾಕಿ ಉಳಿದ ಸಮೀಕ್ಷಾ ಕಾರ್ಯಕ್ಕೆ ಸಮೀಕ್ಷೆಯಲ್ಲಿ ಭಾಗವಹಿಸಿದವರ ಬಗ್ಗೆ, ಆಸಕ್ತಿ ಇಲ್ಲದವರ ಬಗ್ಗೆ, ವಲಸಿಗರು ಈ ಸಮೀಕ್ಷೆಯಲ್ಲಿ ಭಾಗವಹಿಸದಿರುವ ಬಗ್ಗೆ ಸ್ಪಷ್ಟವಾಗಿ ನಮೂದಿಸಿಕೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಹೊಸದಾಗಿ ೩೫ ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಬಗ್ಗೆ ಅನುಮತಿ ದೊರತಿದ್ದು, ಅವುಗಳಿಗೆ ನಿವೇಶನ ಹುಡುಕಲು ತುರ್ತಾಗಿ ಯತ್ನಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದರು.ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ರಜನಿ ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೂ ೭೩ ಪೋಕ್ಸೋ ಕೇಸ್‌ಗಳು ದಾಖಲಾಗಿದ್ದು, ೭೩ ಪ್ರಕರಣಗಳಿಗೂ ಎಫ್ ಐಆರ್ ದಾಖಲಿಸಲಾಗಿದೆ. ಒಟ್ಟು ಎಂಟು ಬಾಲ್ಯ ವಿವಾಹಗಳನ್ನು ತಡೆಗಟ್ಟಿದ್ದು ಎಫ್.ಐ.ಆರ್ ದಾಖಲಿಸಲಾಗಿದೆ ಎಂದರು.
ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಔಷಧಿಗೆ ಕೊರತೆಯಾದಂತೆ ಎಚ್ಚರ ವಹಿಸಬೇಕು ಹಾಗೂ ಕಡ್ಡಾಯವಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಿರಂಜನ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರು ತಾಕೀತು ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತದ ಅಧ್ಯಕ್ಷರಾದ ಎಸ್. ಗಂಗಾಧರ್, ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ರಕ್ಷಾ ಸಮಿತಿಯ ಸಭೆ ನಡೆಸಲೇಬೇಕು. ಸಭೆ ನಡೆಯದಿದ್ದರೆ ಆರೋಗ್ಯ ಮಂತ್ರಿಗಳಿಗೆ ದೂರು ನೀಡಲಾಗುವುದು. ಅನುದಾನ ಲಭ್ಯವಿದ್ದರೂ ರಕ್ಷಾ ಸಮಿತಿ ಸಭೆ ನಡೆಯದಿದ್ದರೆ ಅದು ಮ್ಯಾನೇಜ್ಮೆಂಟ್ ಕೊರತೆ ಎಂದಾಗುತ್ತದೆ, ಇಂತಹ ಕೊರತೆಗಳಿಗೆ ಡಿಎಚ್‌ಒ ಆಸ್ಪದ ನೀಡಬಾರದು ಎಂದು ಎಚ್ಚರಿಸಿದರು.
ಆಸ್ಪತ್ರೆಗಳು, ಪಿಎಚ್‌ಸಿಗಳು, ಕ್ವಾಟ್ರಸ್‌ಗಳ ಸ್ವಚ್ಛತೆಗೆ ಸಂಬಂಧಿಸಿದಂತೆ ಅಲ್ಲಿ ಕಾಪಾಡಿಕೊಂಡು ಬರುವ ಸ್ವಚ್ಛತೆ ಬಗ್ಗೆ ಆರೋಗ್ಯ ಅಧಿಕಾರಿಗಳು, ಹೌಸ್ ಕೀಪಿಂಗ್ ಹಾಗೂ ಸಂಬಂಧಿಸಿದವರ ಮೊಬೈಲ್ ವಾಟ್ಸಪ್ ಗ್ರೂಪ್ ರಚಿಸಿಕೊಂಡು ಸ್ವಚ್ಛತೆ ಬಗ್ಗೆ ಎಚ್ಚರ ವಹಿಸಬೇಕು ಎಂದು ಸಚಿವರು ಕಟ್ಟುನಿಟ್ಟಾಗಿ ಸೂಚಿಸಿದರು.ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ.ಪಿ. ಯೋಗೇಶ್ವರ್, ವಿಧಾನ ಪರಿಷತ್ ಸದಸ್ಯರಾದ ಎಸ್.ರವಿ, ರಾಮೋಜಿಗೌಡ, ಬೆಂಗಳೂರು ವಿಭಾಗದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ಸೂರಜ್ ಹೆಗಡೆ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಕೆ.ರಾಜು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಟರಾಜು ಗಾಣಕಲ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಪಂ ಸಿಇಒ ಅನ್ಮೋಲ್ ಜೈನ್, ಎಸ್ ಪಿ ಶ್ರೀನಿವಾಸಗೌಡ, ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಜಿಪಂ ಉಪ ಕಾರ್ಯದರ್ಶಿ ಧನರಾಜ್, ಮುಖ್ಯ ಯೋಜನಾಧಿಕಾರಿ ಚಿಕ್ಕಸುಬ್ಬಯ್ಯ ವೇದಿಕೆಯಲ್ಲಿದ್ದರು.ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ಗುರುಮೂರ್ತಿ, ಮುಕುಂದ, ಸುಕನ್ಯಾ, ದೌಲತ್ ಪಾಷ ಹಾಗೂ ವರದರಾಜ್ ಇದ್ದರು.
;Resize=(128,128))
;Resize=(128,128))