ಕುರುಬರ ಎಸ್‌ಟಿ ಮೀಸಲಾತಿ ಸಭೆ: ರಾಜು ಮೌರ್ಯ

| Published : Oct 25 2025, 01:00 AM IST

ಸಾರಾಂಶ

ರಾಜ್ಯಮಟ್ಟದ ಕುರುಬ ಸಮುದಾಯದ ರಾಜಕೀಯ ಭವಿಷ್ಯ ಸಭೆ, ನೀವೂ ನಾಯಕರಾಗಿ, ಕುರುಬರ ಎಸ್‌ಟಿ ಮೀಸಲಾತಿ ಮಾಹಿತಿ-ಜಾಗೃತಿ ಸಭೆಯನ್ನು ಅ.26ರಂದು ನಗರದ ಕುವೆಂಪು ಕನ್ನಡ ಭವನದಲ್ಲಿ ಹಾಲುಮತ ಮಹಾಸಭಾದಿಂದ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾದ ರಾಜ್ಯ ಸಂಚಾಲಕ ರಾಜು ಮೌರ್ಯ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯಮಟ್ಟದ ಕುರುಬ ಸಮುದಾಯದ ರಾಜಕೀಯ ಭವಿಷ್ಯ ಸಭೆ, ನೀವೂ ನಾಯಕರಾಗಿ, ಕುರುಬರ ಎಸ್‌ಟಿ ಮೀಸಲಾತಿ ಮಾಹಿತಿ-ಜಾಗೃತಿ ಸಭೆಯನ್ನು ಅ.26ರಂದು ನಗರದ ಕುವೆಂಪು ಕನ್ನಡ ಭವನದಲ್ಲಿ ಹಾಲುಮತ ಮಹಾಸಭಾದಿಂದ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾದ ರಾಜ್ಯ ಸಂಚಾಲಕ ರಾಜು ಮೌರ್ಯ ತಿಳಿಸಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಕುರುಬ ಸಮುದಾಯದವರಿಗಾಗಿ ರಾಜ್ಯಮಟ್ಟದ ನೀವೂ ನಾಯಕರಾಗಿ ಎಂಬ ಚಿಂತನ ಮಂಥನ ಭೆ ನಡೆಯಲಿದ್ದು, ಮುಂಬರುವ ತಾಪಂ, ಜಿಪಂ, ಪಪಂ, ಪುರಸಭೆ, ನಗರಸಭೆ, ಮಹಾ ನಗರ ಪಾಲಿಕೆಯಂತಹ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲಿಚ್ಛಿಸುವ ಕುರುಬ ಸಮಾಜ ಬಾಂಧವರು ಪಾಲ್ಗೊಳ್ಳುವರು ಎಂದರು.

ಸಮಾಜದ ಮುಖಂಡರಾದ ಬಯಲು ಸೀಮೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಬಿ.ಮಂಜಪ್ಪ, ನಿಕೇತ್‌ರಾಜ್‌, ಶರಣಪ್ಪ ಸದಾಪುರ, ಗಣೇಶ ಪಿರಿಯಾಪಟ್ಟಣ, ಐಶ್ವರ್ಯ ಮಹಾದೇವ, ಮಡಿವಾಳಪ್ಪ ಕರಡಿ ಸೇರಿದಂತೆ ಅನೇಕ ಮುಖಂಡರು, ಗಣ್ಯರು ಭಾಗವಹಿಸುವರು ಎಂದು ಹೇಳಿದರು.

ಕುರುಬ ಸಮುದಾಯ ಎದುರಿಸುತ್ತಿರುವ ಮೊದಲ ಹಾಗೂ 2ನೇ ಹಂತದ ರಾಜಕೀಯ ನಾಯಕತ್ವ ಕೊರತೆ ನೀಗಿಸಲು ಮುಂಬರುವ ವಿಧಾನಸಭೆ, ವಿಧಾನ ಪರಿಷತ್ ಚುನಾವಣೆಗಳಲ್ಲಿ ಸ್ಪರ್ಧಿಸಲಿಚ್ಛಿಸುವ ಆಕಾಂಕ್ಷಿಗಳಿಗೂ ಚುನಾವಣೆಗಳ ಬಗ್ಗೆ ರಾಜ್ಯಮಟ್ಟದ ಸಭೆಗಳನ್ನು ಆಯೋಜಿಸಲು ರಾಜ್ಯಮಟ್ಟದಲ್ಲಿ ಹಾಲುಮತ ಮಹಾಸಭಾ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದು ಸ್ಪಷ್ಟಪಡಿಸಿದರು.

ಮಹಾಸಭಾದ ಜಿಲ್ಲಾಧ್ಯಕ್ಷ ಸಿ.ವೀರಣ್ಣ ಅಧ್ಯಕ್ಷತೆಯಲ್ಲಿ ಮಹಾಸಭಾದ ರಾಜ್ಯ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಮಧ್ಯಾಹ್ನ 3ರಿಂದ 5ರವರೆಗೆ ರಾಜ್ಯಮಟ್ಟದ ಕುರುಬರ ಎಸ್‌ಟಿ ಮೀಸಲಾತಿ ಮಾಹಿತಿ, ಜಾಗೃತಿ ಸಭೆ ನಡೆಯಲಿದೆ. ಎಸ್‌ಟಿ ಮೀಸಲಾತಿ ಪಟ್ಟಿಯಲ್ಲಿ ಕ್ರಮ ಸಂಖ್ಯೆ 28ರಲ್ಲಿ ಕುರುಬ ಸೇರಿದಂತೆ ಗೊಂಡ, ಜೇನು ಕುರುಬ, ಕಾಡು ಕುರುಬ, ಬೆಟ್ಟ ಕುರುಬ, ಕುರುಮನ್ಸ್‌, ಕಾಟ್ಟು ನಾಯಕನ್ 6 ಸಮನಾರ್ಥ ಪದಗಳಿದ್ದರೂ ಅಖಂಡ ಕರ್ನಾಟಕದ ಕುರುಬರಿಗೆ ಎಸ್‌ಟಿ ಮೀಸಲಾತಿ ವಿಸ್ತರಿಸುವಂತೆ ಹೋರಾಟ ನಡೆಸುವ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.

ಮಹಾಸಭಾದ ಜಿಲ್ಲಾಧ್ಯಕ್ಷ ಸಿ.ವೀರಣ್ಣ, ಕಾರ್ಯಾಧ್ಯಕ್ಷ ಚಂದ್ರು ದೀಟೂರು, ಉಪಾಧ್ಯಕ್ಷ ಜೆ.ಷಣ್ಮುಖಪ್ಪ, ಕಾರ್ಯದರ್ಶಿ ಎಸ್.ಎಂ.ಸಿದ್ದಲಿಂಗಪ್ಪ, ಬಿ.ಎಂ.ಗಿರೀಶ, ರವೀಂದ್ರ ಬಾಬು ಇತರರು ಇದ್ದರು.

ಎಸ್‌ಟಿ ಮೀಸಲಾತಿ ಹೋರಾಟಕ್ಕೆ ಸಭೆ

ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮಿಗಳ ಮಾರ್ಗದರ್ಶನ, ನೇತೃತ್ವದಲ್ಲಿ 10 ವರ್ಷಗಳ ನಿರಂತರ ಹೋರಾಟ, ಸರ್ಕಾರಗಳ ಜತೆ ಮಾತುಕತೆಯಿಂದಾಗಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ 2023ರ ಜುಲೈ 20 ರಂದು ಶಿಫಾರಸ್ಸು ಮಾಡಿತ್ತು. ಪ್ರಕ್ರಿಯೆ ನಡೆಯುತ್ತಿರುವಾಗಲೇ ಕುರುಬರ ಎಸ್‌ಟಿ ಮೀಸಲಾತಿ ವಿಷಯದಲ್ಲಿ 1976, 1986, 1991ರಲ್ಲಿ ಕೈತಪ್ಪಿದ್ದರ ಬಗ್ಗೆ ಪ್ರಸ್ತುತ ಆಗುತ್ತಿರುವ ಬೆಳವಣಿಗೆ, ಮುಂದಿನ ಪ್ರಕ್ರಿಯೆ, ಹೋರಾಟದ ಬಗ್ಗೆ ರಾಜ್ಯಾದ್ಯಂತ ಮಾಹಿತಿ, ಜಾಗೃತಿ ಸಭೆ ನಡೆಸಲು ದಾವಣಗೆರೆಯಲ್ಲಿ ಪೂರ್ವಭಾವಿ ಸಭೆ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಅಧ್ಯಕ್ಷತೆಯಲ್ಲಿ ಕರೆದಿದ್ದು, ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ರಾಜು ಮೌರ್ಯ ತಿಳಿಸಿದರು.