ಸಾರಾಂಶ
ದೇವನಹಳ್ಳಿ ತಾಲೂಕು ರೈತ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಸಭೆ ಅಪೂರ್ಣವಾಗಿದ್ದು, ಕಾನೂನು ತಜ್ಞರ ಅಭಿಪ್ರಾಯ ಪಡೆದು ಜು.15 ರಂದು ಮತ್ತೊಮ್ಮೆ ಸಭೆ ನಡೆಸಿ ಸರ್ಕಾರದ ಅಂತಿಮ ನಿಲುವು ಪ್ರಕಟಿಸುವುದಾಗಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು : ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ ಗ್ರಾಮಗಳ ಜಮೀನು ಸ್ವಾಧೀನ ಕೈಬಿಡುವಂತೆ ಹೋರಾಟ ನಿರತರಾಗಿರುವ ರೈತ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಸಭೆ ಅಪೂರ್ಣವಾಗಿದ್ದು, ಕಾನೂನು ತಜ್ಞರ ಅಭಿಪ್ರಾಯ ಪಡೆದು ಜು.15 ರಂದು ಮತ್ತೊಮ್ಮೆ ಸಭೆ ನಡೆಸಿ ಸರ್ಕಾರದ ಅಂತಿಮ ನಿಲುವು ಪ್ರಕಟಿಸುವುದಾಗಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ದೇವನಹಳ್ಳಿ ಚನ್ನರಾಯಪಟ್ಟಣದ ರೈತ ಹೋರಾಟಗಾರರು, ಸ್ಥಳೀಯ ಮುಖಂಡರು ಹಾಗೂ ಹೋರಾಟ ಒಕ್ಕೂಟದ ಮುಖಂಡರೊಂದಿಗೆ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಶುಕ್ರವಾರ ಸಭೆ ನಡೆಸಿದರು.
ಈ ವೇಳೆ ಈಗಾಗಲೇ ಜಮೀನು ಸ್ವಾಧೀನ ಸಂಬಂಧ ಪ್ರಾಥಮಿಕ ಅಧಿಸೂಚನೆ ಹಾಗೂ ಅಂತಿಮ ಅಧಿಸೂಚನೆ ಎರಡೂ ಹೊರಡಿಸಲಾಗಿದೆ. ಈ ಹಂತದಲ್ಲಿ ಸ್ವಾಧೀನದಿಂದ ಕೈಬಿಡಲು ಕಾನೂನು ತೊಡಕುಗಳು ಉಂಟಾಗಲಿವೆ. ಹೀಗಾಗಿ ಕಾನೂನು ತಜ್ಞರೊಂದಿಗೆ ಚರ್ಚಿಸಿ ತೀರ್ಮಾನಿಸಲು ಸಿದ್ದರಾಮಯ್ಯ ಅವರು ಕಾಲಾವಕಾಶ ಕೋರಿದರು. ಅಲ್ಲಿಯವರೆಗೆ ಹೋರಾಟ ಹತ್ತಿಕ್ಕುವ ಕೆಲಸ ಮಾಡುವುದಿಲ್ಲ ಎಂದು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಚರ್ಚೆ ಅಪೂರ್ಣವಾಗಿದೆ ಎಂದು ತಿಳಿದುಬಂದಿದೆ.
ಜು.15ಕ್ಕೆ ಮತ್ತೊಂದು ಸಭೆ: ಸಿಎಂ
ಈಗಾಗಲೇ ಭೂಸ್ವಾಧೀನ ಸಂಬಂಧ ಪ್ರಾಥಮಿಕ ಹಾಗೂ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಹೀಗಾಗಿ ಸ್ವಲ್ಪ ಕಾನೂನು ಬದ್ಧವಾದ ವಿಚಾರಗಳಿದ್ದು, ಕಾನೂನು ತೊಡಕು ಬಗೆಹರಿಸಲು ಸರ್ಕಾರಕ್ಕೆ ಹತ್ತು ದಿನ ಸಮಯ ಬೇಕು ಎಂದು ಹೇಳಿದ್ದೇನೆ. ಜು. 15 ರಂದು ಬೆಳಗ್ಗೆ 11 ಗಂಟೆಗೆ ಸಭೆ ಮಾಡುತ್ತೇವೆ. ಬಳಿಕ ಸ್ಪಷ್ಟ ನಿರ್ಧಾರಕ್ಕೆ ಬರುತ್ತೇವೆ ಎಂದು ಸಭೆ ಬಳಿಕ ಸುದ್ದಿಗಾರರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಾನೂನು ವಿರುದ್ಧ ಯಾವುದೇ
ಕ್ರಮವಿಲ್ಲ: ಸಿಎಂ ಭರವಸೆಇದಕ್ಕೂ ಮೊದಲು ಸಭೆಯಲ್ಲಿ ಮಾತನಾಡಿರುವ ಸಿದ್ದರಾಮಯ್ಯ, ಕಾನೂನು ಕಾಯ್ದೆಗೆ ವಿರುದ್ಧವಾಗಿ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ. ನಿಯಮಾನುಸಾರ ಅಂತಿಮ ನೋಟಿಫಿಕೇಶ್ ಆಗಿರುವ ಕಾರಣ, ಅದರ ಕಾನೂನು ಅಂಶಗಳನ್ನು ಪರಿಶೀಲಿಸುವ ಅಗತ್ಯವಿದೆ. ಹೀಗಾಗಿ ಇಂದೇ (ಶುಕ್ರವಾರ) ಸರ್ಕಾರದ ನಿಲುವು ಪ್ರಕಟಿಸಲು ಸಾಧ್ಯವಿಲ್ಲ. 10ದಿನಗಳ ಬಳಿಕ ಮತ್ತೆ ಸಭೆ ನಡೆಸಿ ಸರ್ಕಾರದ ನಿಲುವು ಸ್ಪಷ್ಟಪಡಿಸಲಾಗುವುದು.
ನಾನೂ ರೈತ ಸಂಘದಲ್ಲಿದ್ದವನು. ನಾವು ಪ್ರಜಾಪ್ರಭುತ್ವದಲ್ಲಿ ಮತ್ತು ಸಂವಾದದಲ್ಲಿ ನಂಬಿಕೆಯಿರುವವರು. ಪ್ರತಿಭಟನೆಗೆ ಯಾವುದೇ ಅಡ್ಡಿಪಡಿಸಿಲ್ಲ. ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಸರ್ಕಾರ ಮಾಡಲ್ಲ ಎಂದು ಸ್ಪಷ್ಟಪಡಿಸಿದರು ಎಂದು ತಿಳಿದುಬಂದಿದೆ.
ಈ ವೇಳೆ ರೈತರು ಭೂಸ್ವಾಧೀನಕ್ಕೆ ಮುಂದಾಗಿರುವ ಜಮೀನುಗಳಲ್ಲಿ ಬೆಳೆದಿರುವ ಹಣ್ಣು ಹಾಗೂ ತರಕಾರಿಗಳನ್ನು ಮುಖ್ಯಮಂತ್ರಿಗಳ ಮುಂದಿಟ್ಟು ಫಲವತ್ತಾದ ಕೃಷಿ ಭೂಮಿಯನ್ನು ಹಾಳಾಗದಂತೆ ಕಾಪಾಡಿ ಎಂದು ಮನವಿ ಮಾಡಿದರು.ಸಭೆಯಲ್ಲಿ ಸಚಿವರಾದ ಕೆ.ಎಚ್.ಮುನಿಯಪ್ಪ, ಬೈರತಿ ಸುರೇಶ್, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್, ಚಿತ್ರನಟ ಪ್ರಕಾಶ್ ರಾಜ್, ರೈತ ಮುಖಂಡರಾದ ಬಡಗಲಪುರ ನಾಗೇಂದ್ರ ಸೇರಿದಂತೆ ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಹೋರಾಟದ ಅಗತ್ಯ ಬೀಳದೇ
ಇರಬಹುದು: ಪ್ರಕಾಶ್ ರಾಜ್
ಹೋರಾಟಕ್ಕೆ ಸಂಬಂಧಿಸಿ ಮುಖ್ಯಮಂತ್ರಿಗಳಿಂದ ಪೂರಕ ಸ್ಪಂದನೆ ಲಭಿಸಿದೆ. ಹತ್ತು ದಿನಗಳ ಅವಕಾಶ ಕೋರಿದ್ದಾರೆ ನೀಡಿದ್ದೇವೆ. ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರೆಯುತ್ತದೆ. ಕಾನೂನಾತ್ಮಕ ಅಂಶಗಳನ್ನು ಇತ್ಯರ್ಥಪಡಿಸಿಕೊಂಡು ಜು.15ಕ್ಕೆ ಸಭೆ ನಿಗದಿ ಮಾಡುವುದಾಗಿ ಹೇಳಿದ್ದಾರೆ. ಆ ಬಳಿಕ ಹೋರಾಟದ ಅಗತ್ಯ ಬೀಳದೇ ಹೋಗಬಹುದುದು ಎಂದು ನಟ ಪ್ರಕಾಶ್ ರಾಜ್ ವಿಶ್ವಾಸ ವ್ಯಕ್ತಪಡಿಸಿದರು.
ಸಿಎಂ ಜತೆಗಿನ ಸಭೆ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿ, ಇದು ದೇವನಹಳ್ಳಿಯ ಹೋರಾಟವಾಗಿ ಉಳಿದಿಲ್ಲ. ದೆಹಲಿ ಮಟ್ಟದಲ್ಲಿ ಮೇಧಾಪಾಟ್ಕರ್, ಕಿಸಾನ್ ಮೋರ್ಚಾದಂತಹ ಸಂಘಟನೆ, ಮುಖಂಡರಿಂದ ಬಲ ಬರುತ್ತಿದೆ. ದೇವನೂರು ಮಹದೇವ ಅವರು ಸೇರಿದಂತೆ ಎಲ್ಲರೂ ಜತೆ ಇದ್ದಾರೆ. ರೈತರ ಭೂಮಿ ರೈತರಿಗೆ ಧಕ್ಕುತ್ತದೆ ಎಂಬ ಭರವಸೆ ಇದೆ. ಒಂದಿಂಚೂ ಜಾಗ ಕೂಡ ಬಿಡುವುದಿಲ್ಲ. ಭೂಮಿ ಸ್ವಾಧೀನಕ್ಕೆ ಮುಂದಾದರೆ ರಾಷ್ಟ್ರಾದ್ಯಂತ ಹೋರಾಟ ನಡೆಯಲಿದೆ ಎಂದರು.
ರೈತ ಮುಖಂಡ ಬಡಗಲಪುರ ನಾಗೇಂದ್ರ ಮಾತನಾಡಿ, ಮುಖ್ಯಮಂತ್ರಿಗಳು ಕಾನೂನಾತ್ಮಕ ಅಂಶಗಳನ್ನು ಪರಿಶೀಲಿಸುವುದಾಗಿ ಸಮಯಾವಕಾಶ ಕೋರಿದ್ದಾರೆ. ಜು.15 ರಂದು ನಡೆಯುವ ಸಭೆಯಲ್ಲಿ ನಮಗೆ ನ್ಯಾಯ ಸಿಗದಿದ್ದರೆ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.