ಗ್ರಾಮೀಣ ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸದ ಹಿನ್ನೆಲೆಯಲ್ಲಿ ಹೆಚ್ಚಾಗಿ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಹಳ್ಳಿಗಳಲ್ಲಿ ಆರೋಗ್ಯ ಶಿಬಿರಗಳು ಆಯೋಜಿಸಿದರೇ ರೈತರಿಗೆ ಅನುಕೂಲವಾಗುತ್ತದೆ ಎಂಬ ನಿಟ್ಟಿನಲ್ಲಿ ಶಿಬಿರವನ್ನು ಆಯೋಜಿಸಲಾಗುತ್ತಿದೆ. ತಾಲೂಕು, ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಬಿ.ಎಂ.ಎಜುಕೇಷನಲ್ ಟ್ರಸ್ಟ್ನಿಂದ 71ನೇ ಕನ್ನಡ ರಾಜೋತ್ಸವದ ಅಂಗವಾಗಿ ನ.1ರಂದು ಪಟ್ಟಣ ಸಮೀಪದ ಶೆಟ್ಟಹಳ್ಳಿಯ ಬಿ.ಎಂ.ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ತಿಳಿಸಿದರು.ಶಾಲಾ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9 ರಿಂದ 5 ಗಂಟೆವರೆಗೆ ನಡೆಯುವ ಆರೋಗ್ಯ ಶಿಬಿರದಲ್ಲಿ ಸಂಜೀವಿನಿ ಮಲ್ಪಿಸ್ಪೆಷಾಲಿಟಿ ಆಸ್ಪತ್ರೆ ಬೆಂಗಳೂರು, ಜೆಎಸ್ಎಸ್ ಆಸ್ಪತ್ರೆ, ವಾಸನ್ ಐಕೇರ್ ಆಸ್ಪತ್ರೆ ವೈದ್ಯರು ಆಗಮಿಸಿ ರೋಗಿಗಳ ತಪಾಸಣೆ ನಡೆಸಲಿದ್ದಾರೆ ಎಂದರು.
ಶಿಬಿರದಲ್ಲಿ ವೈದ್ಯಕೀಯ ತಪಾಸಣೆ, ಬಿ.ಪಿ, ಷುಗರ್, ಸ್ತ್ರೀರೋಗ, ಮೂಳೆ ಮತ್ತು ಕೀಲು, ಶಸ್ತ್ರ ಚಿಕಿತ್ಸಾ ವಿಭಾಗ ತಪಾಸಣೆ, ಸ್ತನ ಮತ್ತು ಗರ್ಭಾಶಯ ಕ್ಯಾನ್ಸರ್ ತಪಾಸಣೆ, ದಂತ, ಕಣ್ಣು, ತಪಾಸಣೆ ಹಾಗೂ ಇಸಿಜಿ, ರಕ್ತಪರೀಕ್ಷೆ, ಪೈಲ್ಸ್, ಕಿಡ್ನಿ ಮತ್ತು ಪಿತ್ತ ಕೋಶದ ಕಲ್ಲು ಚಿಕಿತ್ಸೆ ಸೇರಿದಂತೆ ಹಲವು ರೀತಿಯ ತಪಾಸಣೆಗಳನ್ನು ಮಾಡಲಾಗುತ್ತದೆ ಎಂದರು.ಶಿಬಿರಕ್ಕೆ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಮಳವಳ್ಳಿ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ವಾಹನ ಸೌಲಭ್ಯವನ್ನು ಕಲ್ಪಿಸಲಾಗಿದೆ. ಜೊತೆಗೆ ರೋಗಿಗಳಿಗೆ ಉಪಹಾರ ಸೌಲಭ್ಯವನ್ನು ಮಾಡಲಾಗಿದೆ ಎಂದರು.
ಗ್ರಾಮೀಣ ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸದ ಹಿನ್ನೆಲೆಯಲ್ಲಿ ಹೆಚ್ಚಾಗಿ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಹಳ್ಳಿಗಳಲ್ಲಿ ಆರೋಗ್ಯ ಶಿಬಿರಗಳು ಆಯೋಜಿಸಿದರೇ ರೈತರಿಗೆ ಅನುಕೂಲವಾಗುತ್ತದೆ ಎಂಬ ನಿಟ್ಟಿನಲ್ಲಿ ಶಿಬಿರವನ್ನು ಆಯೋಜಿಸಲಾಗುತ್ತಿದೆ. ತಾಲೂಕು, ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳಬೇಕೆಂದು ಕೋರಿದರು.ನಿವೃತ್ತ ಸೈನಿಕ ಸುರೇಶ್ ಮಾತನಾಡಿ, ಶಿಬಿರದಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ವಿಶೇಷ ಮಾಹಿತಿಯನ್ನು ವಿಡಿಯೋ ಮೂಲಕ ರೋಗಿಗಳಿಗೆ ತಿಳಿಸಿಕೊಡಲಾಗುವುದು. ಜೊತೆಗೆ ಆಧುನಿಕ ಯುಗದಲ್ಲಿ ಜೀವನ ಶೈಲಿ ಹಾಗೂ ಆಹಾರ ಪದ್ದತಿಗಳ ಬಗ್ಗೆ ತಿಳುವಳಿಕೆ ಮೂಡಿಸಲು ಜಾಗೃತಿ ಕಾರ್ಯಕ್ರಮವನ್ನು ಶಿಬಿರದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ತಳಗವಾದಿ ಪ್ರಕಾಶ್, ವಿದ್ಯಾಪ್ಯಾರಮೆಡಿಕಲ್ ಪ್ರಾಂಶುಪಾಲ ಚಂದ್ರಮೋಹನ್, ಮುಖಂಡರಾದ ರವಿ ಸೇರಿದಂತೆ ಇತರರು ಇದ್ದರು.