ಸಾರಾಂಶ
ಶಿವಮೊಗ್ಗದ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಶುಕ್ರವಾರ ಶಾಸಕ ಎಸ್.ಎನ್.ಚನ್ನಬಸಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜೀವ ಉಳಿಸುವ ಪ್ರಮುಖ ಔಷಧಿಗಳನ್ನು ಕೂಡ ವೈದ್ಯರು ಹೊರಗಡೆ ಬರೆದುಕೊಡುತ್ತಿದ್ದಾರೆ. ವಾಂತಿ ಭೇದಿಗೂ ಸಹಿತ ಮೆಗ್ಗಾನ್ ಆಸ್ಪತ್ರೆಯಲ್ಲಿ ಔಷಧಿ ಲಭ್ಯವಿಲ್ಲ.ಈ ಕರಿತು ವೈದ್ಯರನ್ನು ವಿಚಾರಿಸಿದರೆ ಮೂರು ತಿಂಗಳದರೂ ಔಷಧಿಗಳು ಬಂದಿಲ್ಲ. ನಾವು ಈಗಾಗಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಟೆಂಡರ್ ಪ್ರಕ್ರಿಯೆ ಮುಗಿದಿದೆ ಎಂದು ಹಾರಿಕೆಯ ಉತ್ತರ ನೀಡುತ್ತಿರುವ ವೈದ್ಯರು ರೋಗಿಗಳ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಶಾಸಕ ಎಸ್.ಎನ್.ಚನ್ನಬಸಪ್ಪ ಗರಂ ಆದರು.ಸಾರ್ವಜನಿಕರಿಂದ ಹಲವು ದೂರು ಬಂದ ಹಿನ್ನಲೆ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಜೀವನಾವಶ್ಯಕ ಔಷಧಿಗಳೇ ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿಲ್ಲದಿದ್ದರೆ ಬಡ ರೋಗಿಗಳ ಕಥೆ ಏನಾಗಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಸಕರು, ಜಿಲ್ಲಾ ಅಧೀಕ್ಷಕ ಮತ್ತು ಸಿಮ್ಸ್ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು.
ಬಿಪಿಎಲ್ ಕಾರ್ಡುದಾರರಿಗೆ ಉಚಿತ ಚಿಕಿತ್ಸೆ ನೀಡಬೇಕಾಗಿರುವುದು ಆಸ್ಪತ್ರೆ ಕರ್ತವ್ಯ. ಆದರೆ, ಹಣ ಪಡೆಯುತ್ತಿರುವ ಸಂಗತಿ ಗಮನಕ್ಕೆ ಬಂದಿದೆ. ಈ ಕುರಿತು ಹಣ ಪಡೆಯುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಬಿಪಿಎಲ್ ಕಾರ್ಡುದಾರರಿಗೆ ಚಿಕಿತ್ಸೆ ನೀಡುವಲ್ಲಿ ಆಗುತ್ತಿರುವ ವಿಳಂಬ ಮತ್ತು ಸಮಸ್ಯೆ ಕಂಡು ಗರಂ ಆದ ಅವರು, ಆಸ್ಪತ್ರೆಯ ಕೌಂಟರ್‌ನಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ತಾಕೀತು ಮಾಡಿದರು.ಆಸ್ಪತ್ರೆಯ ಸ್ಕ್ಯಾನಿಂಗ್ ವಿಭಾಗದಲ್ಲಿ ವಿಳಂಬವಾಗುತ್ತಿರುವ ಕುರಿತು ಗಮನಕ್ಕೆ ಬಂದಿದ್ದು, ಅದನ್ನು ಕೂಡಲೇ ಸರಿಪಡಿಸಬೇಕು ಎಂದರು.
ಆಸ್ಪತ್ರೆಯ ಔಷಧಿ ಉಗ್ರಾಣದಲ್ಲೂ ಹಲವಾರು ಸಮಸ್ಯೆಗಳಿವೆ. ಸರ್ಕಾರ ಬಡವರನ್ನೇ ಬಗ್ಗುಬಡಿಯುವ ಕಾರ್ಯ ಮಾಡುತ್ತಿದೆ. ಗ್ಯಾರಂಟಿಯ ಯೋಜನೆಗೆ ಹಣ ಜೋಡಿಸಲು ಬಡವರಿಂದಲೇ ಹಣ ಕಿತ್ತುಕೊಳ್ಳುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸರ್ಕಾರಿ ಆಸ್ಪತ್ರೆಯ ಎಲ್ಲ ಚಿಕಿತ್ಸಾ ವೆಚ್ಚ ದ್ವಿಗುಣಗೊಂಡಿದೆ ಎಂದು ಆರೋಪಿಸಿದರು.ರಕ್ತ ಪರೀಕ್ಷೆ ಸೇರಿದಂತೆ ತುರ್ತು ಅವಶ್ಯಕ ಮೆಡಿಸಿನ್‍ಗಳು ಹಾಗೂ ಎಲ್ಲಾ ಸೌಲಭ್ಯಗಳು ರೋಗಿಗಳಿಗೆ ಸಿಗುವಂತೆ ಮಾಡಲು ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ, ಸಿಮ್ಸ್ ನಿರ್ದೇಶಕ ವಿರೂಪಾಕ್ಷಪ್ಪ ಮತ್ತಿತರರು ಇದ್ದರು.