ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ ನೀರಾವರಿ ಪರಿಕಲ್ಪನೆಯ ಚಿಂತನೆಯೊಂದಿಗೆ ಇನ್ನೊಬ್ಬರನ್ನು ಮೇಲೆತ್ತುವಲ್ಲಿ ಸಾರ್ಥಕತೆ ಮೆರೆದ ಶಿವಗೊಂಡಪ್ಪ ಮೇತ್ರಿ ಕಾಕಾ ಅವರು ಕೆಸರಲ್ಲಿ ಅರಳಿದ ಕಮಲದಂತೆ, ಸಮಾಜಮುಖಿ ಕೆಲಸದಲ್ಲಿ ಸಮಾಜಕ್ಕೆ ಬೆಳಕಾಗಿದ್ದರು ಎಂದು ಸಚಿವ ಶಿವಾನಂದ ಪಾಟೀಲ ಶ್ಲಾಘಿಸಿದರು.
ಕನ್ನಡಪ್ರಭ ವಾರ್ತೆ ಇಂಡಿ
ನೀರಾವರಿ ಪರಿಕಲ್ಪನೆಯ ಚಿಂತನೆಯೊಂದಿಗೆ ಇನ್ನೊಬ್ಬರನ್ನು ಮೇಲೆತ್ತುವಲ್ಲಿ ಸಾರ್ಥಕತೆ ಮೆರೆದ ಶಿವಗೊಂಡಪ್ಪ ಮೇತ್ರಿ ಕಾಕಾ ಅವರು ಕೆಸರಲ್ಲಿ ಅರಳಿದ ಕಮಲದಂತೆ, ಸಮಾಜಮುಖಿ ಕೆಲಸದಲ್ಲಿ ಸಮಾಜಕ್ಕೆ ಬೆಳಕಾಗಿದ್ದರು ಎಂದು ಸಚಿವ ಶಿವಾನಂದ ಪಾಟೀಲ ಶ್ಲಾಘಿಸಿದರು.ತಾಲೂಕಿನ ತಡವಲಗಾ ಜೋಡಗುಡಿ ಆವರಣದಲ್ಲಿ ಹಮ್ಮಿಕೊಂಡ ಸಮಾಜಮುಖಿ ಮೇತ್ರಿಕಾಕಾ ಸಂಸ್ಮರಣ ಗ್ರಂಥ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಹುಟ್ಟು ಸಾವಿನ ಮಧ್ಯ ಬದುಕಿನ ದಿನದಲ್ಲಿ ಮಾಡಿದ ಸಮಾಜಮುಖಿ ಸಾಧನೆ ಜನಮಾನಸದಲ್ಲಿ ಉಳಿಯುತ್ತವೆ. ಇಷ್ಟು ಜನರ ಮಧ್ಯ ಮೇತ್ರಿ ಕಾಕಾ ಅವರನ್ನು ಸ್ಮರಣೆ ಮಾಡುವುದರ ಹಿಂದೆ ಮೇತ್ರಿ ಕಾಕಾ ಅವರ ಸಾಧನೆ ಅಡಗಿದೆ ಎಂದು ಸ್ಮರಿಸಿದರು.
ಬರದ ನಾಡಿನಲ್ಲಿ ಲಿಂಬೆ ಬೆಳೆದು ರಾಜ್ಯಕ್ಕೆ ಇಂಡಿ ತಾಲೂಕಿನ ಲಿಂಬೆ ಎಂಬುದನ್ನು ತೊರಿಸಿಕೊಟ್ಟಿದ್ದು ತಡವಲಗಾದ ಶಿವಗೊಂಡಪ್ಪ ಮೇತ್ರಿ ಕಾಕಾ. ಇಂದು ಲಿಂಬೆ ವಾಣಿಜ್ಯ ಬೆಳೆಯಾಗಿ ರೂಪುಗೊಂಡು, ಸಮಾಜದಲ್ಲಿ ಆರ್ಥಿಕ ಬದಲಾವಣೆಯನ್ನು ಮರೆಯುವಂತಿಲ್ಲ. ತಮ್ಮ ನಿಷ್ಠೆ, ಪ್ರಾಮಾಣಿಕತೆ, ಗಟ್ಟಿತನದಿಂದ ಸಮಾಜ, ಗ್ರಾಮಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತರುವುದುರ ಜತೆಗೆ ಸಂಸದ ರಮೇಶ ಜಿಗಜಿಣಗಿ ಅವರಂತವರನ್ನು ರಾಜಕೀಯದಲ್ಲಿ ಮೇಲೆತ್ತರಕ್ಕೆ ಬೆಳೆಸಿದ ಕೀರ್ತಿ ಮೇತ್ರಿ ಕಾಕಾ ಅವರಿಗೆ ಸಲ್ಲುತ್ತದೆ. ತಾವೇ ಸ್ವತ ಶಾಸಕರಾಗಬಹುದಿತ್ತು. ಆದರೆ ಅವರು ಇನ್ನೊಬ್ಬರನ್ನು ಬೆಳೆಸುವ ಕಿಂಗ್ ಮೇಕರ್ ಆಗಿ ಕೆಲಸ ಮಾಡಿದರು ಎಂದರು.ಹಿರಿಯರ ಇತಿಹಾಸ ಜಿಲ್ಲೆ, ಸಮಾಜದಲ್ಲಿ ಇಂದು ಉಳಿಯುತ್ತಿಲ್ಲ. ಇಂಡಿ ತಾಲೂಕಿನಲ್ಲಿ ಮೇತ್ರಿ ಕಾಕಾನಂತ ಹಿರಿಯರು, ಸಾಹಿತಿಗಳು ಆಗಿ ಹೋಗಿದ್ದಾರೆ ಅವರ ಬದುಕಿನ ದಾರಿಯನ್ನು ಯುವ ಸಮುದಾಯ ಬದುಕಿನಲ್ಲಿ ಅಳವಡಿಸಿಕೊಂಡು ನಡೆದು ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೊಡಿಸಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಮೇತ್ರಿ ಕಾಕಾ ಅವರ ಬದುಕು, ನಡೆದು ಬಂದ ದಾರಿ ಇಂದಿನ, ಮುಂದಿನ ಪೀಳಿಗೆಗೆ ಪ್ರೇರಣೆಯಾಗಿದೆ. ಸರ್ವರನ್ನು ಪ್ರೀತಿಸುವ, ಸಮಾಜದ ಹಿತ ಕಾಪಾಡುವ ಕೆಲಸ ಮೇತ್ರಿ ಕಾಕಾ ಮಾಡಿದ್ದಾರೆ. ವಾಸ್ತವತೆ ಹಾಗೂ ಸತ್ಯವನ್ನು ಪ್ರತಿಬಿಂಬಿಸುವ ಕೆಲಸ ಮೇತ್ರಿ ಕಾಕಾನಂತ ಹಿರಿಯರು ಸಮಾಜದಲ್ಲಿ ಆಗಿಹೋಗಿದ್ದಾರೆ. ಭೀಮಾತೀರದ ಜನರು ನಿಷ್ಕಳಂಕ ಹೃದಯದವರು. ಇನ್ನೊಬ್ಬರ ಸುಖ, ದುಖದಲ್ಲಿ ತಾವೂ ಪಾಲ್ಗೊಳ್ಳುವ ಹೃದಯ ಶ್ರೀಮಂತಿಕೆ ಹೊಂದಿದ ನಾಡಾಗಿದೆ. ಸಂಗನ ಬಸವ ಮಹಾಶಿವಯೋಗಿಗಳಂತ ಶರಣರು, ಶಿವಯೋಗಿಗಳು, ಸಂತರು ಜನಿಸಿದ ಜಿಲ್ಲೆಯಲ್ಲಿ ಅವರು ಹಾಕಿದ ಮಾರ್ಗದಲ್ಲಿ ನಡೆಯೋಣ ಎಂದು ಹೇಳಿದರು.ಬಾಗಲಕೋಟ ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಸಮಾಜಮುಖಿ ದೂರದೃಷ್ಠಿ ಹೊಂದಿ, ಈ ಸಮಾಜ ಚನ್ನಾಗಿ ನಿರ್ಮಾಣ ಮಾಡಬೇಕು. ಇಲ್ಲಿಯ ಜನರು ಸುಂದರಾಗಿ ಬದುಕು ಸಾಗಿಸಬೇಕು ಎಂಬ ಚಿಂತನೆಯೊಂದಿಗೆ ಬದುಕಿದವರು ಮೇತ್ರಿ ಕಾಕಾ. ರಾಮಕೃಷ್ಣ ಹೆಗಡೆಯವರು ನನಗೆ ರಾಜಕಾರಣದಲ್ಲಿ ಗುರುವಾಗಿ ಬಂದು, ರಮೇಶ ಜಿಗಜಿಣಗಿ, ಮೇತ್ರಿ ಕಾಕಾನವರಿಂದ ರಾಜಕಾರಣದಲ್ಲಿ ಬೆಳೆದು ಬಂದಿದ್ದೇನೆ ಎಂದು ಹೇಳಿದರು. ನಮಗೆ ಬೆಳೆಸಿದವರ ಹೆಸರಿಗೆ ಕುಂದು, ಕಳಂಕ ತರದಂತೆ ಒಳ್ಳೆಯವರಾಗಿ ಬದುಕಬೇಕಾಗಿದೆ ಎಂದು ಹೇಳಿದರು.ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಗೌರವ ಸಂಪಾದಕ ಡಾ.ವಿ.ಡಿ.ಐಹೊಳ್ಳಿ, ಪ್ರಧಾನ ಸಂಪಾದಕ ಡಾ.ವಿ.ಎಂ.ಬಾಗಾಯತ, ಪ್ರೊ.ಎ.ಎಸ್.ಗಾಣಗೇರ ಮಾತನಾಡಿದರು. ಡಾ.ಜಯಬಸವಕುಮಾರ ಮಹಾಸ್ವಾಮೀಜಿ, ಚನ್ನಮಲ್ಲಿಕಾರ್ಜುನ ಶಿವಾಚಾರ್ಯ, ಅಭಿನವ ರಾಚೋಟೇಶ್ವರ ಶಿವಾಚಾರ್ಯ, ಗುರು ಗುರುಪಾದೇಶ್ವರ ಶಿವಾಚಾರ್ಯ, ಅಭಿನವ ಪುಂಡಲಿಂಗ ಶ್ರೀ, ಅಡವಿಲಿಂಗ ಮಹಾರಾಜ, ಶಂಕರಾನಂದ ಸ್ವಾಮೀಜಿ, ಸುಗಲಾದೇವಿ, ಮಹಾಂತೇಶ ಹಿರೇಮಠ, ಸಿದ್ದಯ್ಯ ಹಿರೇಮಠ, ಶಿವಾನಂದಯ್ಯ ಶಾಸ್ತ್ರಿ ಸಾನಿಧ್ಯ ವಹಿಸಿದ್ದರು.
ಜಿ.ಎಸ್.ನ್ಯಾಮಗೌಡ, ರಮೇಶ ಭೂಸನೂರ, ಬಿ.ಜಿ.ಪಾಟೀಲ, ಬಾಬು ಸಾಹುಕಾರ ಮೇತ್ರಿ ಮೊದಲಾದವರು ವೇದಿಕೆ ಮೇಲೆ ಇದ್ದರು. ಅರವಿಂದ ಮೇತ್ರಿ ಸ್ವಾಗತಿಸಿದರು. ಕಬೂಲ್ ಕೊಕಟನೂರ ನಿರೂಪಿಸಿ, ವಂದಿಸಿದರು.ಕೋಟ್
ಸಬ್ ಇನ್ಸಪೆಕ್ಟರ್ ಆಗಲು ಹೊರಟಿದ್ದ ನನಗೆ ಎಷ್ಟು ಪ್ರಯತ್ನ ಮಾಡಿದರೂ ಅದು ಲಭಿಸಲಿಲ್ಲ. ಅಥರ್ಗಾದ ಮಲಕನಗೌಡರು, ಮೇತ್ರಿ ಕಾಕಾ ಅವರು ನನಗೆ ಇಂಡಿ ತೋರಿಸಿಕೊಟ್ಟಿದ್ದಾರೆ. ಹಲಸಂಗಿಯ ಪಟೇಲರು, ಶಾಮರಾಯ ಕುಲಕರ್ಣಿ, ನಡಗೇರಿ, ಮದಪ್ಪ ಕಾಕಾನಂತ ಇಂಡಿ ತಾಲೂಕಿನ ಹಿರಿಯರು ನನಗೆ ಈ ಮಟ್ಟಕ್ಕೆ ನನಗೆ ಬೆಳೆಸಿದ್ದಾರೆ. ರಾಜಕಾರಣದಲ್ಲಿ ಹಣ, ಅಧಿಕಾರ ಶಾಶ್ವತವಲ್ಲ, ಅದು ಉಳಿಯುವುದಿಲ್ಲ. ನಮ್ಮ ಕೊನೆಯಲ್ಲಿ ಉಳಿಯುವುದು ಒಳ್ಳೆಯದು, ಕೆಟ್ಟದ್ದು.ಯಶವಂತರಾಯಗೌಡ ಪಾಟೀಲ, ಇಂಡಿ ಶಾಸಕ