ಮಾವು ಪ್ರಿಯರ ಕೈಬೀಸಿ ಕರೆಯುತಿದೆ ಮೇಳ

| Published : May 14 2024, 01:03 AM IST

ಸಾರಾಂಶ

ತೋಟಗಾರಿಕೆ ಇಲಾಖೆ ವತಿಯಿಂದ 8ನೇ ವರ್ಷದ ಮಾವು ಮೇಳವನ್ನು ಮೇ 13ರಿಂದ ಮೇ 21ರ ವರೆಗೆ ತೋಟಗಾರಿಕೆ ಇಲಾಖೆ ಕೊಪ್ಪಳ ಕಚೇರಿಯ ಆವರಣದಲ್ಲಿ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ತೋಟಗಾರಿಕೆ ಇಲಾಖೆಯಿಂದ ಮೇ 13ರಿಂದ ಮೇ 21ರ ವರೆಗೆ ಕೊಪ್ಪಳ ನಗರದ ಎಲ್.ಐ.ಸಿ. ಆಫೀಸ್ ಹತ್ತಿರವಿರುವ ತೋಟಗಾರಿಕೆ ಇಲಾಖೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಸೋಮವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಕೃಷ್ಣ ಸಿ. ಉಕ್ಕುಂದ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ತೋಟಗಾರಿಕೆ ಇಲಾಖೆ (ಜಿಲ್ಲಾ ಪಂಚಾಯತ್) ವತಿಯಿಂದ 8ನೇ ವರ್ಷದ ಮಾವು ಮೇಳವನ್ನು ಮೇ 13ರಿಂದ ಮೇ 21ರ ವರೆಗೆ ತೋಟಗಾರಿಕೆ ಇಲಾಖೆ (ಜಿಪಂ) ಕೊಪ್ಪಳ ಕಚೇರಿಯ ಆವರಣದಲ್ಲಿ ಆಯೋಜಿಸಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ 5000 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತಳಿಯ ಮಾವಿನ ಹಣ್ಣಿನ ಬೆಳೆಗಳನ್ನು ಬೆಳೆಯುತ್ತಿದ್ದು, ಇವುಗಳಲ್ಲಿ ಮುಖ್ಯವಾಗಿ ಕೇಸರ್ ತಳಿಯು ಅತ್ಯಂತ ಬೇಡಿಕೆ ಹೊಂದಿದೆ. ದಶಹರಿ, ತೋತಾಪೂರಿ, ಮಲ್ಲಿಕಾ, ಬೆನೆಶಾನ್, ಸಿಂಧೂರಿ, ಇಮಾಮ ಪಸಂದ, ಉಪ್ಪಿನಕಾಯಿ ತಳಿಗಳನ್ನು ಬೆಳೆಯತ್ತಿದ್ದು ರೈತರ ಅನುಕೂಲಕ್ಕಾಗಿ ಹಾಗೂ ಗ್ರಾಹಕರಿಗೆ ಯೋಗ್ಯ ಬೆಲೆಗೆ ಗುಣಮಟ್ಟದ ಹಣ್ಣುಗಳನ್ನು ಮಾರಾಟ ಮಾಡಲು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸಲು ಈ ಮೇಳವನ್ನು ಆಯೋಜಿಸಲಾಗಿದೆ.

ಈ ಮೇಳದಲ್ಲಿ ಕೇಸರ್, ಬೆನೆಶಾನ್, ದಶಹರಿ, ರಸಪುರಿ, ಸ್ವರ್ಣರೇಖಾ, ಇಮಾಮ ಪಸಂಧ, ಆಪೂಸ್‌, ಮಲ್ಲಿಕಾ, ತೋತಾಪೂರಿ, ಪುನಾಸ್ ಸೇರಿದಂತೆ 100ಕ್ಕೂ ಅಧಿಕ ವಿವಿಧ ಮಾವಿನ ತಳಿಗಳನ್ನು ಹಾಗೂ ಪುನಾಸ್ ಮತ್ತು ಮಂಡಪ್ಪ ಉಪ್ಪಿನಕಾಯಿ ತಳಿಯ ಮಾವು ಹಾಗೂ ಉಪ ಉತ್ಪನ್ನಗಳು ಹಾಗೂ ಮೌಲ್ಯವರ್ಧಿತ ಉತ್ಪನ್ನಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ. ಜೊತೆಗೆ ತೋಟಗಾರಿಕೆ ಕ್ಷೇತ್ರದಲ್ಲಿ ಬೆಳೆದ ಮಾವಿನ ವಿವಿಧ ತಳಿಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ. ಉಪ್ಪಿನಕಾಯಿ ಮಾವನ್ನು ಸಹ ಮಾರಾಟ ಮಾಡಲಾಗುತ್ತಿದ್ದು, ರೈತರೇ ತಯಾರಿಸಿದ ಉಪ್ಪಿನಕಾಯಿ ಮಾರಾಟ ಮಾಡಲಾಗುತ್ತಿದೆ.ಮೀಯಾ ಜಾಕಿ ಪ್ರದರ್ಶನ:

ಮೇಳದಲ್ಲಿ ವಿಶೇಷವಾಗಿ ಪ್ರಪಂಚದ ಅತ್ಯಂತ ದುಬಾರಿ ಮಾವಿನ ಹಣ್ಣಾದ ಮೀಯಾ ಜಾಕಿ ಎಂಬ ಜಪಾನ ತಳಿಯ ಹಣ್ಣನ್ನು ಪ್ರದರ್ಶನಕ್ಕೆ ಇಡಲಾಗಿದೆ. ಈ ಮಾವಿನ ತಳಿಯ ಬೆಲೆಯು 1 ಕೆ.ಜಿ.ಗೆ ₹2.50 ಲಕ್ಷ ಬೆಲೆ ಬಾಳುತ್ತದೆ. ಈ ಮೇಳದಲ್ಲಿ ಮಿಯಾ ಜಾಕಿ ಹಣ್ಣಿನ ಗಿಡಗಳನ್ನು ಬೆಳೆಯಲು ಆಸಕ್ತಿ ಇರುವ ರೈತರಿಗೆ ಗುಣಮಟ್ಟದ ಗಿಡಗಳ ಪೂರೈಕೆ ಕುರಿತು ಸಹ ಮಾಹಿತಿ ನೀಡಲಾಗುತ್ತಿದೆ.

12ಕ್ಕೂ ಹೆಚ್ಚಿನ ಮಾವಿನ ತಳಿಗಳನ್ನು ನೇರವಾಗಿ ಮಾರಾಟ ಮಾಡಲು ರೈತರಿಗೆ ಅನುಕೂಲ ಕಲ್ಪಿಸಲಾಗಿದೆ. ಸಾವಯವದಲ್ಲಿ ಬೆಳೆದ ಹಾಗೂ ದೃಢೀಕರಣ ಪ್ರಮಾಣ ಪತ್ರ ಹೊಂದಿದ ರೈತರು ಭಾಗವಹಿಸಿದ್ದಾರೆ. ವಿವಿಧ ತಳಿಗೆ ಯೋಗ್ಯ ಬೆಲೆಯನ್ನು ನಿರ್ಧರಿಸಲಾಗಿದ್ದು, ಸಾರ್ವಜನಿಕರು ಮಾವು ಮೇಳದಲ್ಲಿ ಭಾಗವಹಿಸಿ ರೈತರ ಆದಾಯ ಹೆಚ್ಚಿಸಬೇಕು.

22ಕ್ಕೂ ಹೆಚ್ಚಿನ ಸ್ಟಾಲ್‌ಗಳ ವ್ಯವಸ್ಥೆ

ಮೇಳದಲ್ಲಿ ಭಾಗವಹಿಸಲು 55ಕ್ಕೂ ಹೆಚ್ಚಿನ ರೈತರು ನೋಂದಾಯಿಸಿರುತ್ತಾರೆ. ರೈತರಿಗಾಗಿ ಉಚಿತವಾಗಿ 22 ಕ್ಕೂ ಹೆಚ್ಚಿನ ಸ್ಟಾಲ್‌ಗಳನ್ನು ನಿರ್ಮಿಸಿ ಕೊಡಲಾಗಿದೆ ಮತ್ತು ಪ್ರದರ್ಶನದಲ್ಲಿ 100ಕ್ಕೂ ಹೆಚ್ಚಿನ ದೇಶಿ ಮತ್ತು ವಿದೇಶಿ ಮಾವಿನ ತಳಿಗಳನ್ನು ಸುಸಜ್ಜಿತವಾಗಿ ಪ್ರದರ್ಶನದಲ್ಲಿ ಇಡಲಾಗಿದೆ. 10ಕ್ಕೂ ಹೆಚ್ಚಿನ ತೋಟಗಾರಿಕೆ ರೈತ ಉತ್ಪಾದಕ ಕಂಪನಿಗಳಲ್ಲದೇ ಜಿಲ್ಲಾ ಹಾಪ್‌ಕಾಮ್ಸ್ ಸಂಸ್ಥೆಗಳಿಗೆ ಮಾವಿನ ಹಣ್ಣು ಮಾರಲು ಸ್ಟಾಲ್‌ಗಳ ವ್ಯವಸ್ಥೆ ಮಾಡಲಾಗಿದೆ. ರೈತ ಉತ್ಪಾದಕ ಕಂಪನಿಗಳು ಹಾಗೂ ಜಿಲ್ಲಾ ಹಾಪ್‌ಕಾಮ್ಸ್ ಕೊಪ್ಪಳದ ಸದಸ್ಯ ರೈತರಿಂದ ಮಾವಿನ ಹಣ್ಣುಗಳನ್ನು ಖರೀದಿಸಿ ಈ ಮೇಳದಲ್ಲಿ ಮಾರಾಟ ಮಾಡುವುದರಿಂದ ಈ ಮೇಳದಲ್ಲಿ ನೇರವಾಗಿ ಭಾಗವಹಿಸದ ರೈತರಿಗೂ ಅನುಕೂಲವಾಗಿ ಯೋಗ್ಯ ಬೆಲೆ ಸಿಗುವಂತಾಗಿದೆ.

ಈ ಮೇಳದಲ್ಲಿ ಆಸಕ್ತ ರೈತರಿಗೆ ಮಾವನ್ನು ಬೆಳೆಯುವ ಬಗ್ಗೆ ಹಾಗೂ ಮಾರುಕಟ್ಟೆ, ಗುಣಮಟ್ಟದ ಮಾವು ಮತ್ತು ಇಳುವರಿ ಹೇಗೆ ತೆಗೆಯಬೇಕು ಎಂಬುದರ ಬಗ್ಗೆಯೂ ತಿಳಿಸಿಕೊಡಲಾಗುತ್ತಿದೆ. ಸಾವಯವ ಪದ್ಧತಿಯಲ್ಲಿ ಮಾವು ಬೆಳೆಯುವ ಬಗ್ಗೆ ಹಾಗೂ ವಿವಿಧ ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡುವ ಕುರಿತು ಮಾಹಿತಿ ಸಹ ನೀಡಲಾಗುತ್ತಿದೆ.

ಕೊಪ್ಪಳ ಕೇಸರ್ ಮಾವಿನ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ

“ಕೊಪ್ಪಳ ಕೇಸರ್ ಮಾವು” ಬ್ರ್ಯಾಂಡ್‌ನ ಬಾಕ್ಸ್‌ನಲ್ಲಿನ ಕೊಪ್ಪಳ ಕೇಸರ್ ಮಾವಿನ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಸಾರ್ವಜನಿಕರಿಗೆ ಬಾಕ್ಸ್‌ನಲ್ಲಿನ ಹಣ್ಣುಗಳು ಸಿಗುವಂತೆ ಅನುಕೂಲ ಮಾಡಲಾಗಿದೆ. ಈ ಬಾರಿ ಮೇಳವನ್ನು ಪ್ಲಾಸ್ಟಿಕ್ ಮುಕ್ತವಾಗಿಡುವ ಉದ್ದೇಶದಿಂದ ಸಾರ್ವಜನಿಕರಿಗೆ ಹಣ್ಣುಗಳನ್ನು ತೆಗೆದುಕೊಂಡು ಹೋಗಲು ಅನುಕೂಲವಾಗುವಂತೆ ತೋಟಗಾರಿಕೆ ಇಲಾಖೆಯಿಂದ ಪೇಪರ್ ಬ್ಯಾಗ್‌ಗಳನ್ನು ನೀಡಲಾಗಿದೆ. ಇದರಿಂದ ಕೊಪ್ಪಳ ಕೇಸರ್ ಹೆಚ್ಚು ಜನಪ್ರಿಯವಾಗಿದೆ, ಅಲ್ಲದೇ ಸಾರ್ವಜನಿಕರು ಪೇಪರ್ ಬ್ಯಾಗ್‌ಗಳನ್ನು ಮೆಚ್ಚಿಕೊಂಡಿದ್ದಾರೆ.

ಅತ್ಯಾಕರ್ಷಣೆಯ ಸೆಲ್ಫಿ ಪಾಯಿಂಟ್

ಮಾವಿನ ಹಣ್ಣುಗಳಲ್ಲಿ ಲಭ್ಯವಿರುವ ಪೋಷಕಾಂಶಗಳು, ಖನಿಜಗಳು ಮತ್ತು ಅವುಗಳ ಆರೋಗ್ಯದ ಬಗ್ಗೆ ಮಹತ್ವ ತಿಳಿಸುವ ಬ್ಯಾನರ್‌ಗಳನ್ನು ಈ ಮೇಳದಲ್ಲಿ ಪ್ರದರ್ಶಿಸಲಾಗುತ್ತಿದ್ದು, ಗ್ರಾಹಕರಿಗೆ ಇದೊಂದು ವಿಶಿಷ್ಟ ಅನುಭವ ನೀಡಬಲ್ಲದಾಗಿದೆ. ಈ ಮೇಳದಲ್ಲಿ ಮಕ್ಕಳು ಮತ್ತು ಸಾರ್ವಜನಿಕರಿಗೆ ಸೆಲ್ಫಿ ಪಾಯಿಂಟ್ ನಿರ್ಮಿಸಲಾಗಿದೆ, ಈ ಸೆಲ್ಫಿ ಪಾಯಿಂಟ್ ಮಾವಿನ ಮಾದರಿ ಹೊಂದಿದ್ದು ಅತ್ಯಾಕರ್ಷಣೀಯವಾಗಿ ಜನರನ್ನು ಆಕರ್ಷಿಸಿಸುತ್ತಿದೆ.