ಸಾರಾಂಶ
ಕಲ್ಯಾಣಿ ಮಾತೆಯ ಪೂಜೆ ನಂತರ ಲೋಕಕಲ್ಯಾಣಾರ್ಥವಾಗಿ ಪ್ರಾರ್ಥಿಸಿ ಅವಭೃತ ಮಹೋತ್ಸವವನ್ನು ಮುಕ್ತಾಯಗೊಳಿಸಲಾಯಿತು. ಸಂಜೆ ಚೆಲುವನಾರಾಯಣ ಸ್ವಾಮಿಗೆ ಪರಕಾಲ ಮಠದಲ್ಲಿ ಹೋಮ ನೆರವೇರಿಸಿ ಪಟ್ಟಾಭಿಷೇಕವನ್ನು ಕೈಗೊಳ್ಳಲಾಯಿತು.
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ನಡೆಯುತ್ತಿರುವ ಕೃಷ್ಣರಾಜಮುಡಿ ಬ್ರಹ್ಮೋತ್ಸವವು ಬುಧವಾರ ಅವಭೃತ, ತೀರ್ಥಸ್ನಾನ ಹಾಗೂ ಪಟ್ಟಾಭಿಷೇಕ ಮಹೋತ್ಸವದೊಂದಿಗೆ ಮುಕ್ತಾಯವಾಯಿತು.ಬುಧವಾರ ಬೆಳಗ್ಗೆ 9ನೇ ತಿರುನಾಳ್ ಪ್ರಯುಕ್ತ ಬೆಳಗ್ಗೆ ಸಂಧಾನ ಸೇವೆ ನೆರವೇರಿತು. ನಂತರ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ ಕೈಗೊಂಡು ಕಲ್ಯಾಣಿಗೆ ಉತ್ಸವ ನೆರವೇರಿಸಲಾಯಿತು. ಕಲ್ಯಾಣಿಯ ಗಜೇಂದ್ರ ವರದನ ಸನ್ನಿಧಿಯಲ್ಲಿ ಸ್ನಪನ ಮೂರ್ತಿಗೆ ಅಭಿಷೇಕ ನೆರವೇರಿಸಿ ತೀರ್ಥ ಸ್ನಾನ ಮಹೋತ್ಸವವನ್ನು ಪೂರೈಸಲಾಯಿತು.
ಕಲ್ಯಾಣಿ ಮಾತೆಯ ಪೂಜೆ ನಂತರ ಲೋಕಕಲ್ಯಾಣಾರ್ಥವಾಗಿ ಪ್ರಾರ್ಥಿಸಿ ಅವಭೃತ ಮಹೋತ್ಸವವನ್ನು ಮುಕ್ತಾಯಗೊಳಿಸಲಾಯಿತು. ಸಂಜೆ ಚೆಲುವನಾರಾಯಣ ಸ್ವಾಮಿಗೆ ಪರಕಾಲ ಮಠದಲ್ಲಿ ಹೋಮ ನೆರವೇರಿಸಿ ಪಟ್ಟಾಭಿಷೇಕವನ್ನು ಕೈಗೊಳ್ಳಲಾಯಿತು.ಸಂಜೆ 5 ಗಂಟೆಗೆ ನಡೆದ ಪಟ್ಟಾಭಿರಾಮ ತಿರುಕೋಲದಲ್ಲಿ ಕಂಗೊಳಿಸಿದ ಚೆಲುವನಾರಾಯಣಸ್ವಾಮಿ ಉತ್ಸವವು ದೇವಾಲಯದವರೆಗೆ ವೈಭವದಿಂದ ನೆರವೇರಿತು. ನಂತರ ಬ್ರಹ್ಮೋತ್ಸವದಲ್ಲಿ ಪ್ರಮುಖ ಪಾತ್ರ ವಹಿಸಿದ ಸ್ಥಾನಾಚಾರ್ಯರಾದ ಶ್ರೀನಿವಾಸ ನರಸಿಂಹನ್ ಗುರೂಜಿ ಕರಗಂ ರಾಮಪ್ರಿಯ ಕೋವಿಲ್ ನಂಬಿಪ್ರಸನ್ನರವರಿಗೆ ಚೆಲುವನಾರಾಯಣ ಸ್ವಾಮಿಯ ವಿಶೇಷ ಮಾಲೆಯೊಂದಿಗೆ ಗೌರವಿಸಲಾಯಿತು.
ದೇವಾಲಯದಲ್ಲಿ ಪಡಿಮಾಲೆ ಮತ್ತು ಪೂರ್ಣಾಹುತಿ, ಮಹಾ ಸಂಪ್ರೋಕ್ಷಣ ನೆರವೇರಿತು. ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್ ನೇತೃತ್ವದಲ್ಲಿ ನಡೆದ ಕೃಷ್ಣರಾಜಮುಡಿ ಜಾತ್ರಾ ಮಹೋತ್ಸವದ ಯಶಸ್ಸಿಗೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್, ಅರ್ಚಕ ಸ್ಥಾನಿಕ ಕೈಂಕರ್ಯಪರರು ಶ್ರೀಪಾದದವರು, ಬಂಡೀಕಾರರು ಹಾಗೂ ಸಿಬ್ಬಂದಿವರ್ಗ ಶ್ರಮಿಸಿದರು. ಮೇಲುಕೋಟೆ ಪೊಲೀಸರು ಭದ್ರತೆ ನೀಡಿದ್ದರು. ಆ.1 ರಂದು ಕೃಷ್ಣರಾಜಮುಡಿ ಕಿರೀಟ ಜಿಲ್ಲಾ ಖಜಾನೆಗೆ ಮರಳಲಿದೆ.