ಇಂದಿನಿಂದ ಮೇಲುಕೋಟೆ ಕಾರ್ತಿಕ ಜಾತ್ರೆ ವಜ್ರಖಚಿತ ರಾಜಮುಡಿ ಬ್ರಹ್ಮೋತ್ಸವ

| Published : Nov 04 2024, 12:33 AM IST

ಇಂದಿನಿಂದ ಮೇಲುಕೋಟೆ ಕಾರ್ತಿಕ ಜಾತ್ರೆ ವಜ್ರಖಚಿತ ರಾಜಮುಡಿ ಬ್ರಹ್ಮೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಚೆಲುವ ದೈವೀವನದ ಮಧ್ಯೆ ಇರುವ ವೇದ ಪುಷ್ಕರಣಿ, ಶ್ರೀರಾಮ ಸೀತೆಗಾಗಿ ಬಾಣಬಿಟ್ಟು ನೀರುಕ್ಕಿಸಿದ ಹೆಬ್ಬಂಡೆಗಳ ನಡುವಿನ ಧನುಷ್ಕೋಟಿ, ಬೆಟ್ಟಗುಡ್ಡಳಿಂದ ಹರಿಯುವ ಯಾದವ ತೀರ್ಥ, ಬೆಟ್ಟಗಳ ಮಧ್ಯೆ ಇರುವ ದರ್ಭತೀರ್ಥ, ಪಲಾಶತೀರ್ಥ, ಪದ್ಮತೀರ್ಥ, ಬಾಲಕರ ಶಾಲೆ ಹಿಂಭಾಗವಿರುವ ನರಸಿಂಹ ತೀರ್ಥ, ಮೋಕ್ಷ ಕರುಣಿಸುವ ನಾರಾಯಣ ತೀರ್ಥ ಹೀಗೆ ಎಂಟು ಪವಿತ್ರ ತೀರ್ಥ ಕೊಳಗಳು ಮೇಲುಕೋಟೆಯ ಗಿರಿ ಶಿಖರಗಳ ಮಧ್ಯೆ ನಿರ್ಮಾಣವಾಗಿವೆ. ವೈಕುಂಠ ಗಂಗೆಯಂತೂ ಹೆಬ್ಬಂಡೆಗಳ ಮಧ್ಯೆ ಹರಿಯುತ್ತಿದ್ದು ನಯನ ಮನೋಹರ ಪರಿಸರದಲ್ಲಿದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಮೇಲುಕೋಟೆಯ ಶ್ರೀಚೆಲುವನಾರಾಯಣ ಸ್ವಾಮಿ ದೇಗುಲದಲ್ಲಿ ಕಾರ್ತಿಕ ಜಾತ್ರೆ ರಾಜಮುಡಿ ಬ್ರಹ್ಮೋತ್ಸವ ನವೆಂಬರ್ 4 ರಿಂದ 15 ರವರೆಗೆ ನಡೆಯಲಿದೆ.

10 ದಿನಗಳ ಕಾಲ ನಡೆಯುವ ಬ್ರಹ್ಮೋತ್ಸವದಲ್ಲಿ ಮಹಾವಿಷ್ಣುವಿನ ದರ್ಶನಕ್ಕೆ ಪ್ರಶಸ್ತವಾದ ಶನಿವಾರ 4ನೇ ದಿನವಾದ ನ.9ರಂದು ರಾತ್ರಿ 7ಗಂಟೆಗೆ ವಜ್ರಖಚಿತ ರಾಜಮುಡಿ ಉತ್ಸವ ನಡೆಯಲಿದೆ. 6ನೇ ದಿನ ನ.11ರಂದು ಮಕ್ಕಳಭಾಗ್ಯ ಕರುಣಿಸುವ ಚೆಲುವನಾರಾಯಣಸ್ವಾಮಿ ಉತ್ಸವ ಎಂದೇ ಪ್ರಖ್ಯಾತವಾದ ತೊಟ್ಟಿಲಮಡು ಜಾತ್ರೆ, ಅಷ್ಟತೀರ್ಥೋತ್ಸವ ನಡೆಯಲಿದೆ.

ವಿಶಿಷ್ಟ ಸಂಪ್ರದಾಯ, ಪರಂಪರೆ ಆಚರಣೆಯಲ್ಲಿ ಭಾಗಿಯಾದ ಭಕ್ತರಿಗೆ ಅಪೇಕ್ಷಿತ ಫಲ ದೊರೆಯುತ್ತಿರುವ ಕಾರಣ ಭಕ್ತರ ನಂಬಿಕೆಗೆ ಇಂಬು ದೊರೆಯುತಿದೆ. ವೈದ್ಯರೂ ಸಹ ಕೈಚೆಲ್ಲಿದ ಎಷ್ಟೋ ಪ್ರಕರಣಗಳ ದಂಪತಿಗಳಿಗೆ ತೊಟ್ಟಿಲಭಾಗ್ಯ ದೊರೆತಿರುವುದು ಉತ್ಸವದಲ್ಲಿ ಭಾಗಿಯಾದ ದಂಪತಿಗಳಿಗೆ ಅನುಭವಕ್ಕೆ ಬರುತ್ತಿರುವ ಕಾರಣ ಮಹೋತ್ಸವದಲ್ಲಿ ಹರಕೆ ಕಟ್ಟಿಕೊಂಡು ಭಾಗವಹಿಸುವ ದಂಪತಿಗಳ ಸಂಖ್ಯೆ ಹೆಚ್ಚುತ್ತಿದೆ.

ಬಹುಕಾಲ ಮಕ್ಕಳಾಗದ ದಂಪತಿಗಳು ಮತ್ತು ಮುದ್ದಾದ ಆರೋಗ್ಯಕರ ಕಂದಮ್ಮ ಅಪೇಕ್ಷಿಸುವ ನವದಂಪತಿಗಳು ಅನುರೂಪ ಜೋಡಿ ಬಯಸುವವರು ವಿಶೇಷವಾಗಿ ಹರಕೆ ಕಟ್ಟಿಕೊಂಡು ಮಡಿಲು ತುಂಬಿ ಮಹೋತ್ಸವದಲ್ಲಿ ಭಾಗಿಯಾಗುವುದು ತೊಟ್ಟಿಲಮಡು ಜಾತ್ರೆಯ ವಿಶೇಷವಾಗಿದೆ.

ಕಲ್ಯಾಣಿ ತೀರದಲ್ಲಿ ಪತ್ನಿ ಮಡಿಲುತುಂಬಿ ಚೆಲುವನಾರಾಯಣಸ್ವಾಮಿಯ ಪಾದುಕೆಯ ಪಲ್ಲಕ್ಕಿಯೊಡನೆ ಸಾಗಿ ಗಿರಿಶಿಖರಗಳ ಮಧ್ಯೆ ಇರುವ ಔಷಧೀಯ ಗುಣವಿರುವ ಎಂಟು ತೀರ್ಥಗಳಲ್ಲಿ ಸ್ನಾನ ಮಾಡಬೇಕು. ಈ ಎಲ್ಲಾ ಕೊಳಗಳಿಗೆ ಪಾದುಕೆಯೊಂದಿಗೆ ಹೋಗಿ ಬರಲು ಕನಿಷ್ಠ 20 ಕಿಮೀ ಕ್ರಮಿಸಬೇಕಾಗುತ್ತದೆ.

ಉತ್ಸವದ ಮಧ್ಯೆ ಸಾಗುತ್ತಿದ್ದರೆ ಈ ಶ್ರಮ ಗಣನೆಗೆ ಬರುವುದಿಲ್ಲ. ನಡೆಯಲು ಸಾಧ್ಯವಾಗದ ದಂಪತಿಗಳು ಪಂಚಕಲ್ಯಾಣಿ ಮತ್ತು ವೈಕುಂಠ ಗಂಗೆಯಲ್ಲಿ ಸ್ನಾನಮಾಡಿ ಅಲ್ಲಿರುವ ತೊಟ್ಟಿಲಿಗೆ ಪೂಜೆ ಮಾಡಿ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎನ್ನುತ್ತಾರೆ ಧಾರ್ಮಿಕ ಚಿಂತಕರು.

ಉತ್ಸವವೇಳೆ ದೇವರ ನೈವೇದ್ಯದ ಹಾಲು, ಹಣ್ಣು, ತೀರ್ಥ ಬಿಟ್ಟರೆ ಬೇರೇನೂ ಸೇವಿಸುವಂತಿಲ್ಲ. ಇನ್ನು ಅನುರೂಪ ಕಂಕಣಭಾಗ್ಯ ಅಪೇಕ್ಷಿಸುವವರು ಸಹ ಉತ್ಸವದಲ್ಲಿ ಪಾಲ್ಗೊಂಡರೆ ಶೀಘ್ರ ಕಂಕಣಬಲ ಕೂಡಿಬರಲಿದೆ ಎಂಬ ನಂಬಿಕೆಯಿದೆ. ಚಾರಣ ಪ್ರಿಯರಿಗೂ ಈ ಉತ್ಸವದಲ್ಲಿ ಪರಿಸರ ನಡಿಗೆ ಪ್ರಿಯವಾಗಿದೆ

ಬೆಟ್ಟ ಗುಡ್ಡಗಳ ಮಧ್ಯೆ ಅಷ್ಟ ತೀರ್ಥಗಳು:

ಚೆಲುವ ದೈವೀವನದ ಮಧ್ಯೆ ಇರುವ ವೇದ ಪುಷ್ಕರಣಿ, ಶ್ರೀರಾಮ ಸೀತೆಗಾಗಿ ಬಾಣಬಿಟ್ಟು ನೀರುಕ್ಕಿಸಿದ ಹೆಬ್ಬಂಡೆಗಳ ನಡುವಿನ ಧನುಷ್ಕೋಟಿ, ಬೆಟ್ಟಗುಡ್ಡಳಿಂದ ಹರಿಯುವ ಯಾದವ ತೀರ್ಥ, ಬೆಟ್ಟಗಳ ಮಧ್ಯೆ ಇರುವ ದರ್ಭತೀರ್ಥ, ಪಲಾಶತೀರ್ಥ, ಪದ್ಮತೀರ್ಥ, ಬಾಲಕರ ಶಾಲೆ ಹಿಂಭಾಗವಿರುವ ನರಸಿಂಹ ತೀರ್ಥ, ಮೋಕ್ಷ ಕರುಣಿಸುವ ನಾರಾಯಣ ತೀರ್ಥ ಹೀಗೆ ಎಂಟು ಪವಿತ್ರ ತೀರ್ಥ ಕೊಳಗಳು ಮೇಲುಕೋಟೆಯ ಗಿರಿ ಶಿಖರಗಳ ಮಧ್ಯೆ ನಿರ್ಮಾಣವಾಗಿವೆ. ವೈಕುಂಠ ಗಂಗೆಯಂತೂ ಹೆಬ್ಬಂಡೆಗಳ ಮಧ್ಯೆ ಹರಿಯುತ್ತಿದ್ದು ನಯನ ಮನೋಹರ ಪರಿಸರದಲ್ಲಿದೆ.

ತೊಟ್ಟಿಲಮಡು ಜಾತ್ರಾ ವಿಶೇಷಗಳು:

ನ.11ರಂದು ಬೆಳಗ್ಗೆ ಸುಮಾರು 7 ಗಂಟೆಗೆ ಸ್ವಾಮಿ ಪಲ್ಲಕ್ಕಿ ದೇಶಿಕರ ಸನ್ನಿಧಿಗೆ ಆಗಮನದ ನಂತರ 8.30ಕ್ಕೆ ರಾಜಮುಡಿಯೊಂದಿಗೆ ಕಲ್ಯಾಣಿಗೆ ಉತ್ಸವ ನಡೆಯುವುದು, ಬೆಳಗ್ಗೆ 9 ಗಂಟೆಗೆ ಕಲ್ಯಾಣಿಯಲ್ಲಿ ಪವಿತ್ರಸ್ನಾನದೊಂದಿಗೆ ಆರಂಭವಾಗುವ ಅಷ್ಟ ತೀರ್ಥೋತ್ಸವವು ಸಂಜೆ 5 ಗಂಟೆ ವೇಳೆಗೆ ಕಣಿವೆ ಬಳಿಯಿರುವ ವೈಕುಂಠಗಂಟೆ ತೊಟ್ಟಿಲಮಡು ಬಳಿ ಮುಕ್ತಾಯವಾಗುತ್ತದೆ.

ಋಷಿಮುನಿಗಳು ಭಗವಂತನನ್ನು ಧ್ಯಾನಮಾಡಿ ಸಾಕ್ಷಾತ್ಕಾರ ಪಡೆದ ಎಂಟು ಪವಿತ್ರ ತೀರ್ಥಗಳಲ್ಲಿ ಸ್ವಾಮಿ ಪಾದುಕೆಗೆ ಅಭಿಷೇಕ ನೆರವೇರುವ ಆಚರಣೆಯೇ ಅಷ್ಟ ತೀರ್ಥೋತ್ಸವವಾಗಿದೆ. ಉತ್ಸವ ಆರಂಭದವೇಳೆ ಕಲ್ಯಾಣಿಯಲ್ಲಿ ಪ್ರಥಮ ಅಭಿಷೇಕ ನೆರವೇರಿದರೆ ಸಂಜೆ ವೈಕುಂಠ ಗಂಗೆಯಲ್ಲಿ ಕೊನೆ ಅಭಿಷೇಕ ನಡೆಯುತ್ತದೆ. ನಂತರ ಶ್ರೀಯೋಗಾನರಸಿಂಹಸ್ವಾಮಿ ಬೆಟ್ಟದ ಗಿರಿಪ್ರದಕ್ಷಿಣೆಯೊಂದಿಗೆ ಅಷ್ಟತೀರ್ಥೋತ್ಸವ ಮುಕ್ತಾಯವಾಗಲಿದೆ.

ಕದಂಬ ಮೊಸರನ್ನ ಪ್ರಸಾದ:

ಇಲ್ಲಿ ಬರುವ ಸಾವಿರಾರು ಭಕ್ತರಿಗೆ ಮೇಲುಕೋಟೆಯ ಬ್ರ್ಯಾಂಡ್ ಕದಂಬ ಮತ್ತು ದದಿಯೋದನ ಪ್ರಸಾದ ನೀಡಲಾಗುತ್ತದೆ. ದೇವಾಲಯ ಹಾಗೂ ವಿವಿಧ ಜನಾಂಗದವರು ಈ ಪ್ರಸಾದ ತಯಾರಿಸಿ ಭಕ್ತರಿಗೆ ನೀಡುತ್ತಾರೆ. ಹೆಬ್ಬಂಡೆಗಳ ಮೇಲೆ ಕುಳಿತು ಪ್ರಸಾದ ಸವಿಯುವುದೇ ವಿಶೇಷ ಅನುಭವ ನೀಡುತ್ತದೆ.