ಸಾರಾಂಶ
ಕನ್ನಡಪ್ರಭ ವಾರ್ತೆ ಮೇಲುಕೋಟೆ/ಪಾಂಡವಪುರ
ಚೆಲುವನಾರಾಯಣಸ್ವಾಮಿ, ಯೋಗನರಸಿಂಹಸ್ವಾಮಿ ದರ್ಶನಕ್ಕೆ ಬರುವ ಭಕ್ತರಿಗೆ ಅನ್ನಪ್ರಸಾದ (ದಾಸೋಹ)ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಜಂಟಿಯಾಗಿ ಚಾಲನೆ ನೀಡಿದರು.ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ದೇವರ ದರ್ಶನ ಪಡೆದ ಸಚಿವರು ನಂತರ ಮಧ್ಯಾಹ್ನ ಕಲ್ಯಾಣಿ ಬಳಿ ಎರಡು ಕೋಟಿರ ರು. ವೆಚ್ಚದಲ್ಲಿ ನಿರ್ಮಿಸಿರುವ ಅನ್ನದಾನ ಭವನದಲ್ಲಿ ಪ್ರಸಾದ ವಿತರಣೆಗೆ ಚಾಲನೆ ನೀಡಿದರು. ನಂತರ ಮೇಲುಕೋಟೆ ಪರಂಪರೆಯಂತೆ ಸಿದ್ಧಪಡಿಸಿದ್ದ ಸಕ್ಕರೆ ಪೊಂಗಲ್, ಪುಳಿಯೋಗರೆ ಮೊಸರನ್ನವನ್ನು ಭಕ್ತರಿಗೆ ಬಡಿಸಿದರು. ಬಳಿಕ ಸಚಿವ ಚಲುವರಾಯಸ್ವಾಮಿ ದಂಪತಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಭಕ್ತರಜೊತೆ ಕುಳಿತು ಪ್ರಸಾದ ಸ್ವೀಕರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಶನಿವಾರ, ಭಾನುವಾರ ರಜಾದಿನಗಳಂದು ಅನ್ನದಾನ ಮಾಡಲಾಗುತ್ತದೆ. ನಂತರ ದಿನಗಳಲ್ಲಿ ನಿತ್ಯ ಅನ್ನದಾನ ಆರಂಭಿಸಲಾಗುತ್ತದೆ. ಭಕ್ತರು, ಸಾರ್ವಜನಿಕರು ಈ ಸೌಲಭ್ಯವನ್ನು ಬಳಕೆಮಾಡಿಕೊಳ್ಳಬೇಕು ಎಂದರು.ಮೇಲುಕೋಟೆಗೆ ರಾಜ್ಯದ ವಿವಿಧೆಡೆಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಅನ್ನ ಪ್ರಸಾದ ಭವನದಲ್ಲಿ ಭಕ್ತರಿಗೆ ಅನ್ನ ಪ್ರಸಾದ ವಿತರಣೆ ಮಾಡುವ ಕಾರ್‍ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು.
ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಅನ್ನ ಪ್ರಸಾದ ಭವನ ನಿರ್ಮಿಸಿ ಪ್ರಸಾದ ವಿನಿಯೋಗಕ್ಕೆ ಚಾಲನೆ ನೀಡಲಾಗಿತ್ತು. ಆದರೆ, ಕೆಲವು ದಿನಗಳ ನಡೆದ ಪ್ರಸಾದ ವಿನಿಯೋಗ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ದೇವಸ್ಥಾನದ ವತಿಯಿಂದಲೇ ದಾನಿಗಳಿಂದ ಹಣ ಸಂಗ್ರಹಿಸಿ ಭಕ್ತರಿಗೆ ಅನ್ನಪ್ರಸಾದ ವಿನಿಯೋಗ ಮಾಡಲಾಗುವುದು ಎಂದರು.ಮೇಲುಕೋಟೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ಸ್ಥಳೀಯ ಸಂಪನ್ಮೂಲ ಇಂತಿಷ್ಟು ಸಂಗ್ರಹವಾಗಬೇಕು ಎಂಬ ನಿಯಮವಿದೆ. ಈ ಬಗ್ಗೆ ಶಾಸಕರು ಹಾಗೂ ನಾನು ಸಹ ಸರ್ಕಾರದೊಂದಿಗೆ ಚರ್ಚಿಸಿ ಅಭಿವೃದ್ಧಿ ಪ್ರಾಧಿಕಾರ ಮಾಡಲು ಕ್ರಮ ವಹಿಸಲಾಗುವುದು, ಜತೆಗೆ ಮೇಲುಕೋಟೆ ಅಭಿವೃದ್ಧಿಗೂ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದಾಗ ಅನ್ನದಾನಭವನವನ್ನು ಉದ್ಘಾಟಿಸಿದ್ದರು. ಮಾಜಿ ಸಿಎಂ ಯಡಿಯೂರಪ್ಪ ನೀಡಿದ 2 ಕೋಟಿ ರು. ಅನುದಾನದಲ್ಲಿ ಶಾಸಕರಾಗಿದ್ದ ಸಿ.ಎಸ್.ಪುಟ್ಟರಾಜು ಮಾರ್ಗದರ್ಶನದಲ್ಲಿ ನಿರ್ಮಿತಿ ಕೇಂದ್ರದಿಂದ ಅಚ್ಚುಕಟ್ಟಾಗಿ ಅನ್ನದಾನ ಭವನ ನಿರ್ಮಾಣವಾಗಿದ್ದು, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅನ್ನ ಪ್ರಸಾದ ವಿತರಣೆಗೆ ಚಾಲನೆ ನೀಡಿರುವುದರಿಂದ ಭವನ ಭಕ್ತರ ಬಳಕೆಗೆ ಬಂದಂತಾಗಿದೆ.ಕಾರ್ಯಕ್ರಮದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಸಂತೋಷ್, ತಾಪಂ ಇಒ ಲೋಕೇಶ್, ಕೆಪಿಸಿಸಿ ಸದಸ್ಯ ತ್ಯಾಗರಾಜು, ಕಾಡೇನಹಳ್ಳಿ ರಾಮಚಂದ್ರು, ದೇವಾಲಯದ ಇಒ ಶೀಲಾ, ಗ್ರಾಪಂ ಸದಸ್ಯೆ ಭಾಗ್ಯ, ಡೇರಿ ಅಧ್ಯಕ್ಷ ಜಯರಾಮೇಗೌಡ , ರಾಘು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಚಲುವನಾರಾಯಣಸ್ವಾಮಿ ದೇವಾಲಯಕ್ಕೆ ಆಗಮಿಸಿದ ಸಚಿವರ ದಂಪತಿ ದೇಗುಲದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಯೋಗನರಸಿಂಹಸ್ವಾಮಿ ದೇಗುಲದ ಅರ್ಚಕ ನಾರಾಯಣಭಟ್ಟರ್ ಮಂಗಳವಾದ್ಯದೊಂದಿಗೆ ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು.