ಸನಾತನ ಪರಂಪರೆಗೆ ಮೇಲುಕೋಟೆ ಕೊಡುಗೆ ಅನನ್ಯ

| Published : Jan 12 2025, 01:20 AM IST

ಸಾರಾಂಶ

ಬೆಂಗಳೂರಿನ ವಿಧಾನ ಸೌಧದ ಪಕ್ಕದಲ್ಲೇ ಕರ್ನಾಟಕದ ಎಲ್ಲ ದೇವಾಲಯಗಳ ಮಾಹಿತಿ ನೀಡುವ ಹೊಯ್ಸಳ ಭವನ ನಿರ್ಮಿಸಲು ಸರ್ಕಾರ ಮುಂದಾಗಿರುವುದು ಸಂತಸದ ವಿಚಾರ. ಮೇಲುಕೋಟೆಯ ಶ್ರೀ ರಾಮಾನುಜ ಸಂಸ್ಕೃತ ಸಂಶೋಧನಾ ಸಂಸ್ಥೆ ಸಂಸ್ಕೃತ ಭಾಷೆಯ ಸಂರಕ್ಷಣೆ ಮತ್ತು ಪ್ರಚಾರಕ್ಕೆ ಮಹೋನ್ನತ ಕೊಡುಗೆ ನೀಡುತ್ತಿದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಭಾರತೀಯ ಸನಾತನ ಪರಂಪರೆಗೆ ಮೇಲುಕೋಟೆ ಕ್ಷೇತ್ರದ ಕೊಡುಗೆ ಅನನ್ಯವಾಗಿದೆ. ಅಂತೆಯೇ ಆಚಾರ್ಯತ್ರಯರಾದ ಶ್ರೀ ಶಂಕರ, ರಾಮಾನುಜ ಮತ್ತು ಮಧ್ವಾಚಾರ್ಯರು ಈ ನಾಡಿಗೆ ಮಹತ್ತರಾದ ಅಧ್ಯಾತ್ಮ ಚಿಂತನೆಗಳನ್ನು ನೀಡಿ ಮಹಾಮಹಿಮರಾಗಿದ್ದಾರೆ ಎಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.

ಮೇಲುಕೋಟೆಯ ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್‌ನಲ್ಲಿ ಆಯೋಜಿಸಿದ್ದ ಗ್ರಂಥ ಲೋಕಾರ್ಪಣೆ, ವಿದ್ವತ್ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆಚಾರ್ಯ ಶ್ರೀ ರಾಮಾನುಜರ ಕರ್ಮಭೂಮಿ ಮೇಲುಕೋಟೆ. ಈ ದಿವ್ಯಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮುಜರಾಯಿ ಇಲಾಖೆ ಸಂಕಲ್ಪ ಮಾಡಿದೆ. ಅದನ್ನು ಶೀಘ್ರವೇ ಅನುಷ್ಠಾನಗೊಲಿಸಲಿದೆ ಎಂದು ಭರವಸೆ ನೀಡಿದರು.

ಬೆಂಗಳೂರಿನ ವಿಧಾನ ಸೌಧದ ಪಕ್ಕದಲ್ಲೇ ಕರ್ನಾಟಕದ ಎಲ್ಲ ದೇವಾಲಯಗಳ ಮಾಹಿತಿ ನೀಡುವ ಹೊಯ್ಸಳ ಭವನ ನಿರ್ಮಿಸಲು ಸರ್ಕಾರ ಮುಂದಾಗಿರುವುದು ಸಂತಸದ ವಿಚಾರ. ಮೇಲುಕೋಟೆಯ ಶ್ರೀ ರಾಮಾನುಜ ಸಂಸ್ಕೃತ ಸಂಶೋಧನಾ ಸಂಸ್ಥೆ ಸಂಸ್ಕೃತ ಭಾಷೆಯ ಸಂರಕ್ಷಣೆ ಮತ್ತು ಪ್ರಚಾರಕ್ಕೆ ಮಹೋನ್ನತ ಕೊಡುಗೆ ನೀಡುತ್ತಿದೆ. ಪುರಾತನ ತಾಳೆಗರಿ ಸಂಗ್ರಹಿಸಿ ಡಿಜಿಟಲೀಕರಣ ಮಾಡುವ ಜತೆಗೆ ಹಲವು ಗ್ರಂಥಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ಸಂಶೋಧನಾ ಆಸಕ್ತ ಯುವಜನರಿಗೆ ನೆಲೆಯಾಗಿದೆ. ಸಂಸ್ಕೃತವನ್ನು ಸರಳವಾಗಿ ಕಲಿಯಲು ವಿಶೇಷ ಯೋಜನೆ ರೂಪಿಸಿರುವುದು ಮಾದರಿಯಾಗಿದೆ ಎಂದು ಹೇಳಿದರು.

ಪ್ರಶಸ್ತಿ ಪ್ರದಾನ:

ಧಾರ್ಮಿಕ ಮತ್ತು ಸಾಂಪ್ರದಾಯಿಕ ರಂಗಕ್ಕೆ ವಿಶೇಷ ಸೇವೆ ಮಾಡಿದ ಸ್ಥಾನೀಕಂ ನರಸಿಂಹಾಚಾರ್, ವಿದ್ವಾನ್ ಎಂ.ಕೆ.ಶ್ರೀನಿವಾಸ ಅಯ್ಯಂಗಾರ್, ವಿದ್ವಾನ್ ಆರ್. ಕೃಷ್ಣಯ್ಯಂಗಾರ್ ಅವರಿಗೆ ಕೊಡಲಾದ ಮರಣೋತ್ತರ ಕೈಂಕರ್ಯನಿಧಿ ಪ್ರಶಸ್ತಿಯನ್ನು ಶ್ರೀರಾಮನ್. ಎಂ.ಕೆ.ರಾಮಸ್ವಾಮಿ ಅಯ್ಯಂಗಾರ್ ಸ್ವೀಕರಿಸಿದರು.

ಗ್ರಂಥ ಲೋಕಾರ್ಪಣೆ:

ತತ್ವದೀಪ 2023, ರಾಮಾನುಜರ ಶ್ರೀಭಾಷ್ಯ ಕಿರುಪರಿಚಯ, ಹಸ್ತಪ್ರತಿ ಸೂಚಿಪಟ್ಟಿ ಸ್ತೋತ್ರ-15 ಗ್ರಂಥಗಳನ್ನು ಇದೇ ಸಂದರ್ಭ ಅತಿಥಿಗಳು ಲೋಕಾರ್ಪಣೆ ಮಾಡಿದರು. ರಾಜ್ಯಮಟ್ಟದ ದತ್ತಿನಿಧಿ ಸಂಸ್ಕೃತ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

ಸಂಸ್ಥೆಯ ಕುಲಸಚಿವ ಕುಮಾರ್, ಸಂಸ್ಕೃತ ವಿವಿ ಕುಲಸಚಿವ ವಿಶ್ವನಾಥ ಹಿರೇಮಠ, ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ, ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಸಂತೋಷ್, ವಿದುಷಿ ರಮಾ ಶ್ರೀನಿವಾಸನ್,ಡಾ.ಎ ಪುಷ್ಪಾ ಅಯ್ಯಂಗಾರ್, ಡಾ.ಎ.ವೈದೇಹಿ ಅಯ್ಯಂಗಾರ್, ಜಯತೀರ್ಥ ಹಾಜರಿದ್ದರು.